20ನೇ ದಿನಕ್ಕೆ ಕಾಲಿಟ್ಟ ಸೋನಂ ವಾಂಗ್ ಚುಕ್ ಉಪವಾಸ ಸತ್ಯಾಗ್ರಹ

Update: 2024-03-25 17:02 GMT

ಸೋನಂ ವಾಂಗ್ ಚುಕ್ | Photo: X \ @Wangchuk66

ಲೇಹ್: ಲಡಾಖ್ ನ ಬೇಡಿಕೆಗಳನ್ನು ಮುಖ್ಯವಾಗಿಟ್ಟುಕೊಂಡು ಖ್ಯಾತ ಹವಾಮಾನ ಕಾರ್ಯಕರ್ತ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹವು ಸೋಮವಾರ 20ನೇ ದಿನಕ್ಕೆ ಕಾಲಿರಿಸಿದೆ. ಈ ಸಂದರ್ಭ ವಾಂಗ್ಚುಕ್ ಅವರು ತನ್ನ ಉಪವಾಸ ಸತ್ಯಾಗ್ರಹಕ್ಕೆ ಕೇಂದ್ರ ಸರಕಾರವು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೆ ಮೌನವಾಗಿರುವುದಕ್ಕೆ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.

ತನ್ನ ಆರೋಗ್ಯದ ಕುರಿತು ಇತ್ತೀಚಿನ ಮಾಹಿತಿಗಳು ಮತ್ತು ತನ್ನ ಉಪವಾಸ ಸತ್ಯಾಗ್ರಹಕ್ಕೆ ಸಾರ್ವಜನಿಕ ಪ್ರತಿಕ್ರಿಯೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ವಾಂಗ್ಚುಕ್, ಲಡಾಖ್ ನ ಬೇಡಿಕೆಗಳನ್ನು ಬೆಂಬಲಿಸಿ ಸಮಾವೇಶಗಳಲ್ಲಿ ಮಾತನಾಡಿದ ಬಳಿಕ ತಾನು ದಣಿದಿರುವಂತೆ ಭಾಸವಾಗುತ್ತಿದೆ ಮತ್ತು ತನ್ನ ಶರೀರವು ನೋವನ್ನು ಅನುಭವಿಸುತ್ತಿದೆ, ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಕೇವಲ ನೀರು ಮತ್ತು ಉಪ್ಪು ಸೇವಿಸುವ ಮೂಲಕ ತಾನು ಬದುಕಿದ್ದೇನೆ ಎಂದು ಹೇಳಿದ್ದಾರೆ.

ಸಾಮಾನ್ಯ ನಾಗರಿಕರ ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿರುವ ಅವರು, ತಾನಿನ್ನೂ ಈ ದೇಶದಲ್ಲಿ ಮತ್ತು ಅದರ ನಾಯಕರಲ್ಲಿ ನಂಬಿಕೆಯನ್ನು ಕಳೆದುಕೊಂಡಿಲ್ಲ ಎಂದು ಬರೆದಿದ್ದಾರೆ.

‘ಲಡಾಖ್ ಗೆ ಇಂತಹ ಬೆಂಬಲವನ್ನು ನೀಡುತ್ತಿರುವ, ಸ್ವತಃ ಮಾಧ್ಯಮಗಳಾಗಿ ನಮ್ಮ ಮಾತುಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ತಲುಪಿಸುತ್ತಿರುವ ಎಲ್ಲ ಅಧಿಕಾರರಹಿತ ನಾಗರಿಕರಿಗೆ ಕೃತಜ್ಞತೆಗಳು. ಇದು ನಮ್ಮ ಪ್ರಧಾನಿ ಮತ್ತು ಗೃಹಸಚಿವರು ಹಾಗೂ ಗೌರವಾನ್ವಿತ ರಾಷ್ಟ್ರಪತಿಗಳಿಗೂ ತಲುಪುತ್ತದೆ ಎನ್ನುವುದು ನನಗೆ ಖಚಿತವಿದೆ. ಅವರು ಶೀಘ್ರದಲ್ಲಿಯೇ ವಾಸ್ತವವನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ನ್ಯಾಯವನ್ನು ನೀಡುತ್ತಾರೆ ಮತ್ತು ಸ್ವತಃ ಗೌರವಾನ್ವಿತರಾಗಿ ನಿಲ್ಲುತ್ತಾರೆ ಎಂಬ ನಂಬಿಕೆಯು ಈಗಲೂ ನನ್ನಲ್ಲಿದೆ’ ಎಂದು ವಾಂಗ್ಚುಕ್ ಹೇಳಿದ್ದಾರೆ. ಲಡಾಖ್ ನ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು 3,000 ಜನರು ತನ್ನೊಂದಿಗೆ ಉಪವಾಸವನ್ನು ಮುಂದುವರಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಲಡಾಖ್ ಗೆ ರಾಜ್ಯ ಸ್ಥಾನಮಾನವನ್ನು ನೀಡಬೇಕು ಮತ್ತು ಅದನ್ನು ಸಂವಿಧಾನದ ಆರನೇ ಪರಿಚ್ಛೇದದಡಿ ಸೇರಿಸಬೇಕು ಎಂದು ವಾಂಗ್ಚುಕ್ ಪ್ರತಿಪಾದಿಸುತ್ತಿದ್ದಾರೆ. ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಪ್ರತ್ಯೇಕ ಲೋಕಸಭಾ ಸ್ಥಾನಗಳು,ವಿಶೇಷ ಭೂಮಿ ಮತ್ತು ಉದ್ಯೋಗ ಹಕ್ಕುಗಳು ಮತ್ತು ಲೋಕಸೇವಾ ಆಯೋಗದ ಸ್ಥಾಪನೆಯನ್ನೂ ಅವರು ಕೋರಿದ್ದಾರೆ. ಪ್ರಸ್ತುತ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನದಡಿ ಕೈಗಾರಿಕಾ ಶೋಷಣೆಯಿಂದಾಗಿ ಲಡಾಖ್ನ ಪರಿಸರ ವ್ಯವಸ್ಥೆ ಶಿಥಿಲಗೊಳ್ಳುವ ಬಗ್ಗೆಯೂ ಅವರು ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಈ ವರ್ಷದ ವಿಧಾನಸಭಾ ಚುನಾವಣೆಗಳ ಬಳಿಕ ಜಮ್ಮು-ಕಾಶ್ಮೀರವು ರಾಜ ಸ್ಥಾನಮಾನ ಪಡೆಯುವ ಸಾಧ್ಯತೆಯಿದ್ದರೆ ಲಡಾಖ್ ಕೇಂದ್ರದ ಮೇಲ್ವಿಚಾರಣೆಯಲ್ಲಿ ಅಧಿಕಾರಶಾಹಿಯ ಆಡಳಿತದಡಿಯೇ ಉಳಿಯಲಿದೆ ಎಂದು ವಾಂಗ್ಚುಕ್ ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು.

ಸೋಮವಾರ ಇಲ್ಲಿ ವಾಂಗ್ಚುಕ್ ಜೊತೆ ಸೇರಿಕೊಂಡ 5,000 ಜನರು ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸಿದರು,ಈ ಪೈಕಿ 300 ಜನರು ಮೂರು ದಿನಗಳಿಂದ ಹತ್ತು ದಿನಗಳವರೆಗೆ ಉಪವಾಸವನ್ನು ಮುಂದುವರಿಸಲು ಸಂಕಲ್ಪ ಮಾಡಿದ್ದಾರೆ. ಜೊತೆಗೆ ದೇಶಾದ್ಯಂತ 40 ನಗರಗಳಲ್ಲಿ ‘ಫ್ರೆಂಡ್ಸ್ ಆಫ್ ಲಡಾಖ್ ’ ಕಾರ್ಯಕ್ರಮಗಳು ನಡೆದಿದ್ದು,ಲಡಾಖ್ ನ ಹೋರಾಟಕ್ಕೆ ವ್ಯಾಪಕ ಸಹಮತ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News