ಮೋದಿ ಸರ್ಕಾರದ ತಾರತಮ್ಯದ ವಿರುದ್ಧ ದಕ್ಷಿಣ ರಾಜ್ಯಗಳು ಒಗ್ಗೂಡಲಿವೆ: ತೆಲಂಗಾಣ ಸಿಎಂ
ಹೈದರಾಬಾದ್: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಕೆಂದ್ರ ಬಜೆಟನ್ನು "ಕುರ್ಸಿ ಬಚಾವೊ ಬಜೆಟ್" ಮತ್ತು ದಕ್ಷಿಣ ಭಾರತ ವಿರುದ್ಧದ ತಾರತಮ್ಯದ ಬಜೆಟ್ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಟೀಕಿಸಿದ್ದಾರೆ. ಮೋದಿ ಸರ್ಕಾರದ ಈ ತಾರತಮ್ಯ ಧೋರಣೆ ವಿರುದ್ಧ ಎಲ್ಲ ದಕ್ಷಿಣ ರಾಜ್ಯಗಳನ್ನು ಒಗ್ಗೂಡಿಸಲು ಪ್ರಯತ್ನಿಸುವುದಾಗಿ ಅವರು ಪ್ರಕಟಿಸಿದ್ದಾರೆ.
ಈಗಾಗಲೇ ತಮಿಳುನಾಡು ಮತ್ತು ಕರ್ನಾಟಕಕ್ಕೆ ಪತ್ರ ಬರೆಯಲಾಗಿದೆ. ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ಹಿಡಿದು ಕೇಂದ್ರದ ನೆರವು, ಕೇಂದ್ರ- ರಾಜ್ಯ ಸಂಬಂಧಗಳ ವಿಷಯದ ವರೆಗೆ, ರಾಜ್ಯಗಳು ಸಂಗ್ರಹಿಸುವ ಪ್ರತಿ ರೂಪಾಯಿಯಲ್ಲಿ ಕೇಂದ್ರ ಸರ್ಕಾರ ಎಷ್ಟು ಪಾಲನ್ನು ವಾಪಸ್ಸು ನೀಡುತ್ತದೆ ಎಂಬುವುದರ ವರೆಗೆ ಪ್ರತಿಯೊಂದು ಅಂಶವನ್ನೂ ಚರ್ಚಿಸಲಾಗುವುದು ಎಂದು ರೇವನಾಥ್ ಹೇಳಿದ್ದಾರೆ.
"ಹಣಕಾಸು ಸಚಿವರು ಒಂದು ಬಾರಿಯೂ ತೆಲಂಗಾಣ ಹೆಸರನ್ನು ಬಜೆಟ್ ಭಾಷಣದಲ್ಲಿ ಹೇಳಿಲ್ಲ. "ಎನ್ಡಿಎ ಎಂದರೆ ನಾಯ್ಡು-ನಿತೀಶ್ ಡಿಪೆಂಡೆಂಟ್ ಅಲಯನ್ಸ್". ಮೋದಿಯವರಿಗೆ ತೆಲಂಗಾಣ ವಿಕಸಿತ ಭಾರತದ ಭಾಗವಲ್ಲ. ಮೋದಿ ಸರ್ಕಾರ ಆಂಧ್ರ ಪ್ರದೇಶ ಹಾಗೂ ಬಿಹಾರಕ್ಕೆ ಅನುದಾನ ನೀಡುವ ಸಲುವಾಗಿ ಇತರ ರಾಜ್ಯಗಳನ್ನು ಲೂಟಿ ಮಾಡುತ್ತಿದೆ ಎಂಬ ಗಂಭೀರ ಆರೋಪ ಮಾಡಿದರು. ತಮ್ಮ ಕುರ್ಚಿ ಉಳಿಸಿಕೊಳ್ಳಲು ಮೋದಿ ಈ ಎರಡು ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ ಎಂದು ಟೀಕಿಸಿದರು.