ಬ್ರಿಜ್ ಭೂಷಣ್ ವಿರುದ್ಧದ ತನಿಖಾ ವರದಿಯ ಯಾವುದೇ ದಾಖಲೆಗಳು ಕ್ರೀಡಾ ಸಚಿವಾಲಯದ ಬಳಿ ಇಲ್ಲ: ಆರ್‌ಟಿಐ ಉತ್ತರ
ಹೊಸದಿಲ್ಲಿ: ಭಾರತದ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಹಾಗೂ ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಆರೋಪಗಳ ತನಿಖಾ ವರದಿ ಕುರಿತಂತೆ ಕ್ರೀಡಾ ಸಚಿವಾಲಯ ಯಾವುದೇ ದಾಖಲೆಗಳನ್ನು ಹೊಂದಿಲ್ಲ ಎಂದು ಆರ್‌ಟಿಐ ಉತ್ತರವೊಂದರಲ್ಲಿ ತಿಳಿದು ಬಂದಿದೆ ಎಂದು thequint.com ವರದಿ ಮಾಡಿದೆ.
ಮಹಿಳಾ ಕುಸ್ತಿಪಟುಗಳಿಗೆ ಸಿಂಗ್ ನೀಡಿದ್ದರೆನ್ನಲಾದ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಆರೋಪಗಳ ತನಿಖೆಯನ್ನು ಭಾರತದ ಬಾಕ್ಸಿಂಗ್ ತಾರೆ ಎಂ ಸಿ ಮೇರಿ ಕೋಮ್ ನೇತೃತ್ವದ ಸಮಿತಿಯ ನಿಗಾದಲ್ಲಿ ನಡೆಯಬೇಕಿತ್ತು. ತನಿಖೆ ನಡೆಸಲು ಮತ್ತು ಫೆಡರೇಷನ್‌ನ ದೈನಂದಿನ ಕಾರ್ಯಾಚರಣೆಗಳನ್ನು ನಿರ್ವಹಿಸಲೆಂದು ಈ ಸಮಿತಿಯನ್ನು ಭಾರತ ಸರ್ಕಾರ ಜನವರಿ 23, 2023ರಂದು ರಚಿಸಿತ್ತು.
ಮೇ 26ರಂದು ಆರ್‌ಟಿಐ ಅರ್ಜಿಗೆ ಉತ್ತರದಲ್ಲಿ ಕ್ರೀಡಾ ಸಚಿವಾಲಯವು ತನ್ನ ಬಳಿ ವರದಿ ಲಭ್ಯವಿಲ್ಲ ಎಂದು ತಿಳಿಸಿತ್ತು.
ಸುಪ್ರೀಂ ಕೋರ್ಟ್ ಮೇ 2023ರಲ್ಲಿ ಮಧ್ಯಪ್ರವೇಶಿಸಿದ ನಂತರ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಜೂನ್ 2024ರಲ್ಲಿ ದಿಲ್ಲಿ ಪೊಲೀಸರು ಸಿಂಗ್ ವಿರುದ್ಧ 1,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಮೇ 10, 2024ರಂದು ದಿಲ್ಲಿಯ ನ್ಯಾಯಾಲಯವು ಸಿಂಗ್ ಹಾಗೂ ಫೆಡರೇಷನ್‌ನ ಅಮಾನತುಗೊಂಡ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧ ಕ್ರಮಕೈಗೊಳ್ಳಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಕಂಡುಕೊಂಡಿತ್ತು.
ಇಬ್ಬರೂ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರಲ್ಲದೆ ತನಿಖೆ ಎದುರಿಸಲು ಸಿದ್ಧ ಎಂದಿದ್ದರು.