ಸ್ಟಾಲಿನ್ ಸಂಪುಟ ಪುನರ್ ರಚನೆ: ಮಗನಿಗೆ ಬಡ್ತಿ, ಮಾಜಿ ಸಚಿವ ಮರುಪ್ರವೇಶ
ಚೆನ್ನೈ: ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಶನಿವಾರ ರಾತ್ರಿ ಸಂಪುಟ ಪುನರ್ ರಚಿಸಿದ್ದು, ಈ ಬಗ್ಗೆ ಇದ್ದ ಊಹಾಪೋಹಗಳು ನಿಜವಾಗಿವೆ. ನಿರೀಕ್ಷೆಯಂತೆ ಕ್ರೀಡಾ ಸಚಿವ ಹಾಗೂ ಎಂ.ಕೆ.ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬಡ್ತಿ ಪಡೆದಿದ್ದು, ಹಣ ದುರುಪಯೋಗ ಪ್ರಕರಣದಲ್ಲಿ ಜಾಮೀನು ಪಡೆದ ಸಾರಿಗೆ ಸಚಿವ ಸೆಂಥಿಲ್ ಬಾಲಾಜಿ ಎರಡೇ ದಿನದಲ್ಲಿ ಮತ್ತೆ ಸಂಪುಟ ಸೇರಿದ್ದಾರೆ.
ಉದಯನಿಧಿ ಸ್ಟಾಲಿನ್ ಗೆ ಬಡ್ತಿ ನೀಡುವ ಬಗ್ಗೆ ಕಳೆದ ಕೆಲ ವಾರಗಳಿಂದ ವದಂತಿಗಳು ಹರಡಿದ್ದವು. ಅವರಿಗೆ ಇದೀಗ ಹಾಲಿ ಇರುವ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಹೊಣೆಯ ಜತೆಗೆ ಯೋಜನೆ ಮತ್ತು ಅಭಿವೃದ್ಧಿ ಸಚಿವಾಲಯದ ಹೊಣೆಯನ್ನೂ ವಹಿಸಲಾಗಿದೆ. ಇವರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿಯೂ ನಿಯೋಜಿಸಲಾಗಿದೆ.
ಉದ್ಯೋಗಕ್ಕಾಗಿ ಹಣ ಪಡೆದ ಆರೋಪದಲ್ಲಿ ಕಾನೂನು ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದು, 15 ತಿಂಗಳಿನಿಂದ ಜೈಲಿನಲ್ಲಿರುವ ಬಾಲಾಜಿಯವರಿಗೆ ಯಾವ ಖಾತೆ ನೀಡಲಾಗುತ್ತದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವಧಿಯಲ್ಲಿ ನಡೆದ ಪ್ರಕರಣ ಇದಾಗಿದೆ. ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಗುರುವಾರ ಜಾಮೀನು ನೀಡಿದ ಬಳಿಕ ಸೆಂಥಿಲ್ ಬಿಡುಗಡೆಯಗಿದ್ದರು.
ಪುನರ್ ರಚನೆಯಲ್ಲಿ ಹಾಲು ಮತ್ತು ಹೈನು ಅಭಿವೃದ್ಧಿ ಸಚಿವ ಟಿ.ಮನೋ ತಂಗರಾಜು, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಗಿನ್ ಗೀ ಮಸ್ತಾನ್ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಕೆ.ರಾಮಚಂದ್ರನ್ ಅವರನ್ನು ಕೈಬಿಟ್ಟು, ಗೋವಿ ಚೆಳಿಯನ್, ಆರ್.ರಾಜೇಂದ್ರನ್ ಹಾಗೂ ಎಸ್.ಎಂ.ನಸೀರ್ ಎಂಬ ಮೂರು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಲಾಗಿದೆ.