ಮಿಜೋರಾಂ: ಕಲ್ಲಿನ ಕೋರೆ ಕುಸಿದು ಕನಿಷ್ಠ 12 ಮಂದಿ ಮೃತ್ಯು

Update: 2024-05-28 15:41 GMT

PC: x.com/ThePrintIndia

ಹೊಸದಿಲ್ಲಿ: ಮಿಜೋರಾಂ ರಾಜಧಾನಿ ಐಝ್ವಾಲ್ ನಲ್ಲಿ ಮಂಗಳ ಕಲ್ಲಿನ ಕೋರೆ ಕುಸಿದುಬಿದ್ದು ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಐಝ್ವಾಲ್ ನಗರದ ಹೊರವಲಯದಲ್ಲಿರುವ ಮೆಲ್ತುಮ್ ಹಾಗೂ ಹ್ಲಿಮೆನ್ ಗ್ರಾಮಗಳ ನಡುವಿನ ಪ್ರದೇಶದಲ್ಲಿ ಬೆಳಗ್ಗೆ 6:00 ಗಂಟೆಯ ಸುಮಾರಿಗೆ ಕಲ್ಲಿನ ಕೋರೆ ಕುಸಿದುಬಿದ್ದುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಹಲವು ತಾಸುಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದ್ದುದೇ ಕೋರೆ ಕುಸಿಯಲು ಕಾರಣವೆಂದು ಅವರು ಹೇಳಿದ್ದಾರೆ. ದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಸಾವುನೋವಿನ ಸಂಖ್ಯೆ ಹೆಚ್ಚಾಗುವ ಭೀತಿಯಿದೆ.

ಅವಘಡದಲ್ಲಿ ಸಾವನ್ನಪ್ಪಿದ ಐದು ಮಂದಿ ಮೃತದೇಹಗಳನ್ನು ಹೊರತೆಗೆಯಲಾಗಿದೆ. 12 ಮಂದಿ ನಾಪತ್ತೆಯಾಗಿದ್ದಾರೆ. ಭಾರೀ ಮಳೆ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆಯೆಂದು ಅವರು ಹೇಳಿದ್ದಾರೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆಂದು ಮಿಜೋರಾಂ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅನಿಲ್ ಶುಕ್ಲಾ ಅವರು ತಿಳಿಸಿದ್ದಾರೆ.

ಭಾರೀ ಮಳೆಯಾಗುತ್ತಿರುವುದರಿಂದ ರಾಜ್ಯದ ಹಲವೆಡೆ ಭೂಕುಸಿತಗಳಾಗಿವೆಯೆಂದು ಅಧಿಕಾರಿಗಳು ಹೇಳಿದ್ದಾರೆ.

ಮಿಜೋರಾಂನ ಇತರ ಕಡೆಗಳಲ್ಲಿ ಸಂಭವಿಸಿದ ಭೂಕುಸಿತಗಳಲ್ಲಿ ಕನಿಷ್ಠ ಆರು ಮಂದಿ ಸಾವಿಗೀಆಗಿದ್ದಾರೆ ಹಾಗೂ ನಾಲ್ವರು ನಾಪತ್ತೆಯಾಗಿದ್ದಾರೆಂದು ಅವರು ಹೇಳಿದ್ದಾರೆ.

ಹುಂತಾರ್ನಲ್ಲಿ ರಾಷ್ಟ್ರೀಯ ಹೆದ್ದಾರಿ 6ರಲ್ಲಿ ಭೂಕುಸಿತದಿಂದಾಗಿ ಐಝವಾಲ್ ನಗರವು ದೇಶದ ಉಳಿದಭಾಗದೊಂದಿಗೆ ಸಂಪರ್ಕವನ್ನು ಕಡಿದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಭೂಕುಸಿತಗಳಿಂದಾಗಿ ಹಲವಾರು ಅಂತರ್ರಾಜ್ಯ ಹೆದ್ದಾರಿಗಳಲ್ಲಿಯ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಕುಂಭದ್ರೋಣ ಮಳೆಯಾಗುತ್ತಿರುವುದರಿಂದ ಎಲ್ಲಾ ಶಾಲೆಗಳಿಗೆ ರಜೆ ಸಾರಲಾಗಿದೆ ಹಾಗೂ ಅತ್ಯಗತ್ಯ ಸೇವೆಗಳನ್ನು ಒದಗಿಸುವವರನ್ನು ಹೊರತುಪಡಿಸಿ ಉಳಿದ ಎಲ್ಲಾ ಸರಕಾರಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News