ದೇಶವನ್ನು ಜಾಗತಿಕ ಶಕ್ತಿಯಾಗಿಸುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿದೆ : ಸ್ಪೀಕರ್ ಯು.ಟಿ. ಖಾದರ್
ಪುಣೆ, ಜ.11: ಇಲ್ಲಿನ ಡಾ. ವಿಶ್ವನಾಥ್ ಕರಾಡ್ ಎಂ ಐ ಟಿ ವರ್ಲ್ಡ್ ಪೀಸ್ ಯೂನಿವರ್ಸಿಟಿ ಇದರ ಅಧೀನದ ಎಂ ಐ ಟಿ ಸ್ಕೂಲ್ ಆಫ್ ಗವರ್ನಮೆಂಟ್ ನಲ್ಲಿ ನಡೆದ 13ನೇ ಭಾರತೀಯ ಛಾತ್ರ ಸಂಸದ್ ಅನ್ನು ಸ್ಪೀಕರ್ ಯು ಟಿ ಖಾದರ್ ಅವರು ಗುರುವಾರ ಉದ್ಘಾಟಿಸಿದರು.
ದೇಶದ ವಿವಿಧೆಡೆಗಳಿಂದ ಬಂದ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತಾಡಿದ ಸ್ಪೀಕರ್ ಖಾದರ್, ವಿದ್ಯಾರ್ಥಿಗಳೇ ಈ ದೇಶದ ಭವಿಷ್ಯ ರೂಪಿಸುವ ನಾಗರಿಕರು. ಜಗತ್ತಿನ ಬೇರೆ ಯಾವ ದೇಶದಲ್ಲೂ ಇಲ್ಲದಷ್ಟು ಯುವಜನ ಸಂಪತ್ತು ಭಾರತದಲ್ಲಿದೆ. ಇಲ್ಲಿನ ಸಾವಿರಾರು ಕಾಲೇಜುಗಳಲ್ಲಿ ಕೋಟ್ಯಂತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಧ್ಯಯನ ನಡೆಸುತ್ತಿದ್ದಾರೆ. ಇದು ಈ ದೇಶದ ಪಾಲಿಗೆ ಅತ್ಯಮೂಲ್ಯ ಸಂಪತ್ತು. ಇವರೆಲ್ಲರೂ ಮುಂದೆ ಈ ದೇಶವನ್ನು ಮುನ್ನಡೆಸುವವರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ, ಸೃಜನಶೀಲ ಆಲೋಚನೆಗಳ ಮೂಲಕ ವಿದ್ಯಾರ್ಥಿ ಸಮೂಹ ನಮ್ಮ ದೇಶವೇ ಜಗತ್ತಿಗೆ ದಾರಿ ತೋರಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಇವತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ಕಾಲವಾಗಿದೆ. ಆದರೆ ಮನುಷ್ಯನ ಆಲೋಚನೆ, ಸೃಜನಶೀಲತೆ ಹಾಗು ಭಾವನೆಗಳಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂದೂ ಸಾಟಿಯಾಗುವುದಿಲ್ಲ. ವಿಜ್ಞಾನ, ತಂತ್ರಜ್ಞಾನ ಅದೆಷ್ಟೇ ಮುಂದುವರಿದರೂ ಅದರಲ್ಲಿ ಮನುಷ್ಯನ ಪಾತ್ರ ಹೆಚ್ಚುತ್ತಲೇ ಹೋಗುತ್ತದೆ ವಿನಃ ಕಡಿಮೆಯಾಗದು. ಇದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಸೋಷಿಯಲ್ ಮೀಡಿಯಾದ ಸದುಪಯೋಗ ಆಗಬೇಕೆ ವಿನಃ ಅದು ನಮ್ಮನ್ನು ನಿಯಂತ್ರಿಸುವಂತಾಗಬಾರದು. ಈ ದೇಶದ ಭವಿಷ್ಯ ಇಲ್ಲಿನ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ಸ್ಪೀಕರ್ ಖಾದರ್ ಕಿವಿಮಾತು ಹೇಳಿದರು.