ಚುನಾವಣಾ ಬಾಂಡ್ ದೇಣಿಗೆಗಳ ವಿವರ ನ.15ರೊಳಗೆ ಸಲ್ಲಿಸಿ: ಚುನಾವಣಾ ಆಯೋಗ
ಹೊಸದಿಲ್ಲಿ: ಚುನಾವಣಾ ಬಾಂಡ್ ಮೂಲಕ ದೇಣಿಗೆ ಸ್ವೀಕರಿಸುವ ಯೋಜನೆ ಜಾರಿಯಾದಾಗಿನಿಂದ ಸ್ವೀಕರಿಸಿರುವ ದೇಣಿಗೆ ವಿವರಗಳನ್ನು ನ.15ರೊಳಗೆ ಸಲ್ಲಿಸುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸೂಚಿಸಿದೆ ಎಂದು scroll.in ವರದಿ ಮಾಡಿದೆ.
ಚುನಾವಣಾ ಬಾಂಡ್ ಗಳು ನಾಗರಿಕರು ಅಥವಾ ಕಾರ್ಪೊರೇಟ್ ಗುಂಪುಗಳು ಬ್ಯಾಂಕ್ ನಿಂದ ಖರೀದಿಸಿ, ರಾಜಕೀಯ ಪಕ್ಷಗಳಿಗೆ ನೀಡಬಹುದಾದ ಹಣಕಾಸು ಸಾಧನವಾಗಿದ್ದು, ನಂತರದಲ್ಲಿ ಮರುನಗದೀಕರಿಸಿಕೊಳ್ಳಬಹುದಾಗಿದೆ. ಈ ಬಡ್ಡಿರಹಿತ ಬಾಂಡ್ ಗಳ ಖರೀದಿಯ ಬಗ್ಗೆ ಘೋಷಿಸುವ ಅಗತ್ಯವಿಲ್ಲ. ರಾಜಕೀಯ ಪಕ್ಷಗಳು ತಮ್ಮ ಹಣಕಾಸಿನ ಮೂಲಗಳ ಕುರಿತು ಬಹಿರಂಗಪಡಿಸಬೇಕಾದ ಅಗತ್ಯವೂ ಇಲ್ಲದೇ ಇರುವುದರಿಂದ ಇಡೀ ಪ್ರಕ್ರಿಯೆಯು ಗೋಪ್ಯವಾಗಿ ಉಳಿಯುತ್ತದೆ.
ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು ಈ ಯೋಜನೆಯನ್ನು ಜನವರಿ 2018ರಲ್ಲಿ ಪರಿಚಯಿಸಿತ್ತು.
ಈ ಸಂಬಂಧ ನ.3 ರಂದು ಆದೇಶ ಹೊರಡಿಸಿರುವ ಚುನಾವಣಾ ಆಯೋಗವು, ದೇಣಿಗೆ ಕುರಿತ ಮಾಹಿತಿಯನ್ನು ಎರಡು ಮುಚ್ಚಿದ ಲಕೋಟೆಯಲ್ಲಿ ಒದಗಿಸಬೇಕು ಎಂದು ಸೂಚಿಸಿದೆ. ಈ ಪೈಕಿ ಒಂದು ಮುಚ್ಚಿದ ಲಕೋಟೆಯಲ್ಲಿ ಸ್ವೀಕರಿಸಿರುವ ದೇಣಿಗೆಯ ವಿವರ ಹಾಗೂ ಎರಡನೆಯ ಮುಚ್ಚಿದ ಲಕೋಟೆಯಲ್ಲಿ ದೇಣಿಗೆ ಕುರಿತ ಮಾಹಿತಿಯನ್ನು ಒದಗಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಪ್ರತಿ ದೇಣಿಗೆದಾರರ ವಿವರ, ಇಂತಹ ಬಾಂಡ್ ಗಳಿಂದ ಸ್ವೀಕರಿಸಿರುವ ಮೊತ್ತ, ಆ ಮೊತ್ತ ಪಾವತಿಯಾಗಿರುವ ಬ್ಯಾಂಕ್ ಖಾತೆ ಹಾಗೂ ಆ ಮೊತ್ತ ಪಾವತಿಯಾದ ದಿನಾಂಕದ ವಿವರಗಳನ್ನು ಈ ಲಕೋಟೆಯೊಂದಿಗೆ ಒದಗಿಸಬೇಕಿದೆ.
ಇದಕ್ಕೂ ಮುನ್ನ, ನ.2ರಂದು ಸೆಪ್ಟೆಂಬರ್ 30ರವರೆಗೆ ಚುನಾವಣಾ ಬಾಂಡ್ ಗಳ ಮೂಲಕ ರಾಜಕೀಯ ಪಕ್ಷಗಳು ಸ್ವೀಕರಿಸಿರುವ ದೇಣಿಗೆಯ ದತ್ತಾಂಶವನ್ನು ಸಂಗ್ರಹಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ದತ್ತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ ನ ಪ್ರಧಾನ ರಿಜಿಸ್ಟ್ರಾರ್ ಅವರಿಗೆ ಎರಡು ವಾರಗಳೊಳಗೆ ಸಲ್ಲಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸೂಚಿಸಲಾಗಿತ್ತು.