ಬಿಲ್ಕಿಸ್ ಬಾನು ಪ್ರಕರಣದ ದೋಷಿಗಳ ಶಿಕ್ಷೆ ಕಡಿತದ ಮೂಲ ದಾಖಲೆಗಳನ್ನು ಸಲ್ಲಿಸಿ: ಕೇಂದ್ರ, ಗುಜರಾತ್ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ
ಹೊಸದಿಲ್ಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ 14 ಮಂದಿಯ ಕೊಲೆ ಪ್ರಕರಣದ 11 ದೋಷಿಗಳ ಶಿಕ್ಷೆಯನ್ನು ಕಡಿತಗೊಳಿಸುವುದಕ್ಕೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳನ್ನು ಅಕ್ಟೋಬರ್ 16ರ ಒಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಮತ್ತು ಗುಜರಾತ್ ಸರಕಾರಕ್ಕೆ ನಿರ್ದೇಶನ ನೀಡಿದೆ.
ಬಿಲ್ಕಿಸ್ ಬಾನು ಅವರ ವಕೀಲರು ಹಾಗೂ ಕೇಂದ್ರ ಸರಕಾರ, ಗುಜರಾತ್ ಸರಕಾರ ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರ ವಕೀಲರ ವಾದಗಳನ್ನು ಆಲಿಸಿದ ಬಳಿಕ, ಪ್ರಕರಣದ 11 ದೋಷಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತ ತೀರ್ಪನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭೂಯನ್ ಅವರನ್ನೊಳಗೊಂಡ ನ್ಯಾಯಪೀಠವು ಕಾದಿರಿಸಿದೆ.
ಸಾಮೂಹಿಕ ಅತ್ಯಾಚಾರ ಮತ್ತು ಸಾಮೂಹಿಕ ಕೊಲೆ ಪ್ರಕರಣದ ಆರೋಪಿಗಳ ಬಿಡುಗಡೆಯನ್ನು ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆ ಬಿಲ್ಕಿಸ್ ಬಾನು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಜೊತೆಗೆ, ಸಿಪಿಎಮ್ ನಾಯಕಿ ಸುಭಾಷಿಣಿ ಅಲಿ, ಸ್ವತಂತ್ರ ಪತ್ರಕರ್ತೆ ರೇವತಿ ಲಾಲ್, ಲಕ್ನೋ ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ರೂಪ ರೇಖಾ ವರ್ಮ ಮತ್ತು ಟಿಎಮ್‌ಸಿ ಪಕ್ಷದ ಸಂಸದೆ ಮಹುವಾ ಮೋಯಿತ್ರಾ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರು.
ಎಲ್ಲಾ ದೋಷಿಗಳನ್ನು ಮರಳಿ ಜೈಲಿಗೆ ಕಳುಹಿಸಿ ; ಸುಪ್ರೀಂ ಕೋರ್ಟ್‌ಗೆ ಬಿಲ್ಕಿಸ್ ಬಾನು ವಕೀಲೆ ಮನವಿ
ಬಿಲ್ಕಿಸ್ ಬಾನು ಪ್ರಕರಣದಲ್ಲಿ ಎಸಗಲಾಗಿರುವ ಅಪರಾಧಗಳ ಬರ್ಬರತೆಯನ್ನು ಪರಿಗಣಿಸಿ ಎಲ್ಲಾ 11 ಆರೋಪಿಗಳನ್ನು ಮರಳಿ ಸೆರೆಮನೆಗೆ ಕಳುಹಿಸಬೇಕು ಎಂದು ಸಂತ್ರಸ್ತೆ ಪರ ವಕೀಲೆ ಶೋಭಾ ಗುಪ್ತಾ ಬುಧವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ 14 ಸದಸ್ಯರ ಹತ್ಯೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಜೀವಾವಧಿ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದ ಪ್ರಕರಣದ ಆರೋಪಿಗಳನ್ನು ಗುಜರಾತ್ ಸರಕಾರ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಅದನ್ನು ಪ್ರಶ್ನಿಸಿ ಸಂತ್ರಸ್ತೆ ಬಿಲ್ಕಿಸ್ ಬಾನು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ಪೀಠವೊಂದು ನಡೆಸುತ್ತಿದೆ.
ದೇಶದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ, ಕಳೆದ ವರ್ಷದ ಆಗಸ್ಟ್ 15ರಂದು ದೋಷಿಗಳನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು.
ತಮ್ಮ ಬಿಡುಗಡೆ ಕಾನೂನುಬದ್ಧವಾಗಿದೆ ಹಾಗೂ ಚಾಲ್ತಿಯಲ್ಲಿರುವ ನೀತಿಗಳಿಗೆ ಅನುಸಾರವಾಗಿ ನಡೆದಿದೆ ಎಂಬುದಾಗಿ ದೋಷಿಗಳು ವಾದಿಸಿದ ಬಳಿಕ, ನ್ಯಾಯಾಲಯವು ಬುಧವಾರ ಅರ್ಜಿದಾರರ ವಾದಗಳನ್ನು ಆಲಿಸಿತು.
ದೋಷಿಗಳನ್ನು ಬಿಡುಗಡೆಗೊಳಿಸುವ ಮೊದಲು, ರಾಜ್ಯ ಸರಕಾರವು ಅಪರಾಧದ ಸ್ವರೂಪ, ಸಮಾಜದ ಮೇಲೆ ಅದು ಬೀರುವ ಪರಿಣಾಮ ಮತ್ತು ಅದು ಹಾಕುವ ಪೂರ್ವ ನಿದರ್ಶನವನ್ನು ಪರಿಗಣಿಸಬೇಕಾಗಿತ್ತು ಎಂದು ಬಿಲ್ಕಿಸ್ ಬಾನು ವಕೀಲೆ ಹೇಳಿದರು.
ಸುಧಾರಣೆಗೆ ಶಿಕ್ಷೆ ಕಡಿತ ಅಗತ್ಯವಾಗಿದೆ ಎಂದು ಓರ್ವ ದೋಷಿ ವಾದಿಸಿದ್ದಾರೆ ಎಂದು ನ್ಯಾ. ನಾಗರತ್ನ ಹೇಳಿದರು. ‘‘ಅವರು ನಮಗೆ ತೀರ್ಪುಗಳನ್ನು ತೋರಿಸಿದ್ದಾರೆ. ಪರಿವರ್ತನೆಯಾಗಲು ಮತ್ತು ಸಮಾಜದೊಂದಿಗೆ ಮತ್ತೆ ಬೆರೆಯಲು ವ್ಯಕ್ತಿಯೋರ್ವನಿಗೆ ಅವಕಾಶ ನೀಡಬೇಕು ಎಂಬುದಾಗಿ ತೀರ್ಪಿನಲ್ಲಿ ಬರೆಯಲಾಗಿದೆ. ಹಾಗಾಗಿ, ಎರಡೂ ಬಣಗಳ ಹಿತಾಸಕ್ತಿಗಳನ್ನು ನಾವು ಸಮತೋಲನಗೊಳಿಸಬೇಕಾಗಿದೆ’’ ಎಂದು ನ್ಯಾಯಾಧೀಶೆ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶೋಭಾ ಗುಪ್ತಾ, ಅವರು ಎಸಗಿರುವ ಅಪರಾಧದ ಸ್ವರೂಪವು ಗುಂಡು ಹಾರಿಸಿ ಮಾಡಿರುವ ಗಾಯ ಅಥವಾ ಒಂದು ಸಾಮಾನ್ಯ ಕೊಲೆ ಪ್ರಕರಣಕ್ಕೆ ಸಮವಲ್ಲ ಎಂದು ಹೇಳಿದರು.
ದೋಷಿಗಳು ಎಂಟು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕೊಂದಿದ್ದಾರೆ, ಬಿಲ್ಕಿಸ್ ಬಾನು ಅವರ ಮೂರು ವರ್ಷದ ಮಗಳನ್ನು ಬಂಡೆಗೆ ತಲೆಯನ್ನು ಅಪ್ಪಳಿಸಿ ಭೀಕರವಾಗಿ ಹತ್ಯೆಗೈದಿದ್ದಾರೆ ಮತ್ತು ಗರ್ಭಿಣಿಯಾಗಿದ್ದ 19 ವರ್ಷದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಅವರು ಹೇಳಿದರು.