ಇವಿಎಂ-ವಿವಿಪ್ಯಾಟ್‌ ಪ್ರಕರಣ: ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌

Update: 2024-04-26 05:42 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಇವಿಎಂಗಳಲ್ಲಿ ಬೀಳುವ ಮತಗಳೊಂದಿಗೆ ವಿವಿಪ್ಯಾಟ್‌ ಸ್ಲಿಪ್‌ಗಳನ್ನೂ ಶೇ 100ರಷ್ಟು ಎಣಿಕೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇಂದು ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಾಂಕರ್‌ ದತ್ತಾ ಅವರ ದ್ವಿಸದಸ್ಯ ಪೀಠ ಏಕ ರೀತಿಯ ಪ್ರತ್ಯೇಕ ತೀರ್ಪುಗಳನ್ನು ಪ್ರಕಟಿಸಿದೆ.

“ಸಮತೋಲಿತ ದೃಷ್ಟಿಕೋನ ಮುಖ್ಯವಾದರೂ, ಕಣ್ಣು ಮುಚ್ಚಿ ಒಂದು ವ್ಯವಸ್ಥೆಯನ್ನು ಶಂಕಿಸುವುದು ಸರಿಯಾಗದು, ಅರ್ಥಪೂರ್ಣ ಟೀಕೆ ಅಗತ್ಯವಿದೆ, ಅದು ನ್ಯಾಯಾಂಗ ಅಥವಾ ಶಾಸಕಾಂಗವೂ ಆಗಿರಬಹುದು. ಸಾಮರಸ್ಯ ಮತ್ತು ಎಲ್ಲಾ ಆಧಾರಸ್ಥಂಭಗಳ ಮೇಲಿನ ನಂಬಿಕೆಯ ಮೇಲೆ ಪ್ರಜಾಪ್ರಭುತ್ವ ನಿಂತಿದೆ. ವಿಶ್ವಾಸ ಮತ್ತು ಸಹಯೋಗದ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮೂಲಕ ನಾವು ನಮ್ಮ ಪ್ರಜಾಪ್ರಭುತ್ವದ ಧ್ವನಿಯನ್ನು ಬಲಪಡಿಸಬಹುದು.,” ಎಂದು ನ್ಯಾಯಮೂರ್ತಿ ದತ್ತಾ ಹೇಳಿದರು. ಸಾಕ್ಷ್ಯವನ್ನು ಗಮನಿಸಿ ಈ ಪ್ರಕರಣದಲ್ಲಿ ನ್ಯಾಯಾಲಯ ತನ್ನ ತೀರ್ಮಾನ ಪ್ರಕಟಿಸಿದೆ ಎಂದು ಅವರು ಹೇಳಿದರು.

ಅದೇ ಸಮಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆಗಳನ್ನು ನೀಡಿದೆ.

► ಇವಿಎಂಗಳಲ್ಲಿ ಚಿಹ್ನೆಗಳನ್ನು ಲೋಡ್‌ ಮಾಡಿದ ನಂತರ ಚಿಹ್ನೆ ಲೋಡಿಂಗ್‌ ಯುನಿಟ್‌ಗಳನ್ನು ಸೀಲ್‌ ಮಾಡಬೇಕು ಮತ್ತು ಈ ಯುನಿಟ್‌ ಅನ್ನು ಕನಿಷ್ಠ 45 ದಿನಗಳ ಕಾಲ ಸಂಗ್ರಹಿಸಬೇಕು ಎಂದು ಹೇಳಿದೆ.

► ಫಲಿತಾಂಶಗಳು ಪ್ರಕಟಗೊಂಡ ನಂತರ ಎರಡನೇ ಮತ್ತು ಮೂರನೇ ಕ್ರಮಾಂಕದಲ್ಲಿರುವ ಅಭ್ಯರ್ಥಿಗಳು ವಿಂತಿಸಿಸಿದರೆ ಇವಿಎಂನ ಮೈಕ್ರೋಕಂಟ್ರೋಲರ್‌ನ ಬರ್ನ್ಟ್‌ ಮೆಮೊರಿಯನ್ನು ಇಂಜಿನಿಯರ್‌ಗಳ ತಂಡ ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

► ವಿವಿಪ್ಯಾಟ್‌ ಸ್ಲಿಪ್‌ಗಳನ್ನು ಎಣಿಸುವ ಯಂತ್ರದ ಬಳಕೆಯ ಸಂಭಾವ್ಯತೆಯನ್ನು ಅನ್ವೇಷಿಸಬೇಕೆಂದೂ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ಸಲಹೆ ನೀಡಿದೆ.

► ಅಭ್ಯರ್ಥಿಯೊಬ್ಬರು ವಿವಿಪ್ಯಾಟ್‌ ಸ್ಲಿಪ್‌ಗಳ ಪರಿಶೀಲನೆಗೆ ಕೋರಿದರೆ ಅದರ ವೆಚ್ಚವನ್ನು ಅವರು ಭರಿಸಬೇಕು ಹಾಗೂ ಆ ನಿರ್ದಿಷ್ಟ ಇವಿಎಂ ತಿರುಚಲ್ಪಟ್ಟಿದೆ ಎಂದು ಕಂಡುಬಂದರೆ ಪಾವತಿಯನ್ನು ವಾಪಸ್‌ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News