ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ: ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು ಹೀಗೆ…

Update: 2023-08-04 11:20 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ರಲ್ಲಿ ಕೋಲಾರದಲ್ಲಿ  ಮಾಡಿದ್ದ  ಮೋದಿ ಉಪನಾಮದ ಕುರಿತ ಟೀಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಎದುರಿಸುತ್ತಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ  ತಡೆ ನೀಡಿದೆ ಹಾಗೂ ಅವರ ಸಂಸದ ಸ್ಥಾನಮಾನವನ್ನು ಮರುಸ್ಥಾಪಿಸಿದೆ. ನ್ಯಾಯಾಲಯದ ತೀರ್ಪನ್ನು ಶ್ಲಾಘಿಸಿದ ಕಾಂಗ್ರೆಸ್, 'ಇದು ದ್ವೇಷದ ವಿರುದ್ಧ ಪ್ರೀತಿಯ ಗೆಲುವು' ಎಂದು ಹೇಳಿದೆ.

"ಇದು ದ್ವೇಷದ ವಿರುದ್ಧ ಪ್ರೀತಿಯ ಗೆಲುವು. ಸತ್ಯಮೇವ ಜಯತೆ - ಜೈ ಹಿಂದ್" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದ ರಾಹುಲ್ ಗಾಂಧಿ, ಅದು ಹೇಗೆ ಎಲ್ಲ ಕಳ್ಳರಿಗೆ ಮೋದಿ ಎಂಬ ಉಪ ನಾಮವಿದೆ? ಎಂದು ಪ್ರಶ್ನಿಸಿದ್ದರು.

ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ  ಬಿಜೆಪಿ ನಾಯಕ ಪೂರ್ಣೇಶ್ ಮೋದಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ರಾಹುಲ್  ಗಾಂಧಿಗೆ ಗುಜರಾತ್ ನ್ಯಾಯಾಲಯವು 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ, ಪಿ. ಎಸ್. ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠವು ಗರಿಷ್ಠ ಶಿಕ್ಷೆ ವಿಧಿಸಲು ವಿಚಾರಣಾ ನ್ಯಾಯಾಧೀಶರು ಯಾವುದೇ ಕಾರಣವನ್ನು ನೀಡಿಲ್ಲ, ಅಂತಿಮ ತೀರ್ಪಿನವರೆಗೆ ಶಿಕ್ಷೆಯ ಆದೇಶವನ್ನು ತಡೆಹಿಡಿಯಬೇಕಾಗಿದೆ, ನಿಸ್ಸಂದೇಹವಾಗಿ ರಾಹುಲ್ ಗಾಂಧಿ ಹೇಳಿಕೆಯು  ಉತ್ತಮ ಅಭಿರುಚಿಯಿಂದ ಕೂಡಿಲ್ಲ ಹಾಗೂ ಸಾರ್ವಜನಿಕ ಜೀವನದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕ ಭಾಷಣ ಮಾಡುವಾಗ ಎಚ್ಚರಿಕೆ ವಹಿಸಬೇಕು”ಎಂದು ಹೇಳಿದೆ.

ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, "ಇದೊಂದು ಸಂತೋಷದ ದಿನ... ನಾನು ಇಂದೇ ಲೋಕಸಭೆ ಸ್ಪೀಕರ್ ಅವರಿಗೆ ಪತ್ರ ಬರೆದು ಮಾತನಾಡುತ್ತೇನೆ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News