“ಪತ್ರಕರ್ತರನ್ನು ಚಹಾಗೆ ಆಹ್ವಾನಿಸಿ, ನಮ್ಮ ವಿರುದ್ಧ ಏನೂ ಬರೆಯದಂತೆ ನೋಡಿಕೊಳ್ಳಿ”;ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥನ ಆಡಿಯೋ ಕ್ಲಿಪ್ ವೈರಲ್

ಚುನಾವಣೆಗೆ ಮುನ್ನ ಋಣಾತ್ಮಕ ಪ್ರಚಾರವನ್ನು ತಪ್ಪಿಸಲು ಪತ್ರಕರ್ತರನ್ನು ಧಾಬಾಗಳಿಗೆ ಕರೆದೊಯ್ದು ಅವರನ್ನು ಚೆನ್ನಾಗಿ ನಡೆಸಿಕೊಳ್ಳುವಂತೆ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬಾವಂಕುಲೆ ಅವರು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ ಆಡಿಯೊ ಕ್ಲಿಪ್ ವೈರಲ್ ಆಗಿದ್ದು ರಾಜಕೀಯ ಕೋಲಾಹಲ

Update: 2023-09-26 13:40 GMT

PHOTO : PTI

ಮುಂಬೈ: ಚುನಾವಣೆಗೆ ಮುನ್ನ ಋಣಾತ್ಮಕ ಪ್ರಚಾರವನ್ನು ತಪ್ಪಿಸಲು ಪತ್ರಕರ್ತರನ್ನು ಧಾಬಾಗಳಿಗೆ ಕರೆದೊಯ್ದು ಅವರನ್ನು ಚೆನ್ನಾಗಿ ನಡೆಸಿಕೊಳ್ಳುವಂತೆ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬಾವಂಕುಲೆ ಅವರು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ ಆಡಿಯೊ ಕ್ಲಿಪ್ ವೈರಲ್ ಆಗಿದ್ದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ಅಹ್ಮದ್‌ನಗರದಲ್ಲಿ ಮತಗಟ್ಟೆಗಳ ನಿರ್ವಹಣೆ ಕುರಿತು ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಬವಾನ್‌ಕುಲೆ ಅವರು ಈ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಆಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿದ್ದು, ಬಳಿಕ ತನ್ನ ಹೇಳಿಕೆಗೆ ಬವಾಂಕುಲೆ ಅವರು ಸ್ಪಷ್ಟನೆ ನೀಡಿದ್ದಾರೆ.

“ಪತ್ರಕರ್ತರನ್ನು ಗೌರವದಿಂದ ನಡೆಸಿಕೊಳ್ಳಬೇಕು ಮತ್ತು ಪಕ್ಷದ ಕಾರ್ಯಕರ್ತರು ಹಂಚಿಕೆ ಬೂತ್‌ಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು” ಎಂದಷ್ಟೇ ನಾನು ಹೇಳಿದ್ದೆ ಎಂದು ಬವಾಂಕುಲೆ ಸ್ಪಷ್ಟಪಡಿಸಿದ್ದಾರೆ.

“ಸುದ್ದಿ ಪೋರ್ಟಲ್‌ಗಳನ್ನು ನಡೆಸುತ್ತಿರುವ ಮತ್ತು ನಿಮ್ಮ ಬೂತ್ ಪ್ರದೇಶಗಳಲ್ಲಿ ವಾಸಿಸುವ ಅರೆ ಕಾಲಿಕ ವೀಡಿಯೊ ಪತ್ರಕರ್ತರು ಕೆಲವೊಮ್ಮೆ ಸ್ಫೋಟಕ ಸುದ್ದಿಯನ್ನು ವರದಿ ಮಾಡುತ್ತಾರೆ. ವಿದ್ಯುನ್ಮಾನ ಮಾಧ್ಯಮ ಅಥವಾ ಮುದ್ರಣ ಸೇರಿದಂತೆ ಇಂತಹ ಉಪದ್ರ ಸೃಷ್ಟಿಸುವ ಪತ್ರಕರ್ತರ ಪಟ್ಟಿಯನ್ನು ತಯಾರಿಸಿ ಅವರು ನಮ್ಮ ವಿರುದ್ಧ ಏನನ್ನೂ ಬರೆಯದಂತೆ ಚಹಾ ಕುಡಿಯಲು ಅವರನ್ನು ಆಹ್ವಾನಿಸಿ, ಅವರನ್ನು ಒಂದು ಕಪ್ ಚಹಾಕ್ಕೆ ಆಹ್ವಾನಿಸಿ ಎಂದು ನಾನು ಏನು ಹೇಳುತ್ತಿದ್ದೇನೆ ಅನ್ನುವುದು ನಿಮಗೆ ಗೊತ್ತಿರಬಹುದು ಎಂದುಕೊಳ್ಳುತ್ತೇನೆ” ಎಂದು ಅವರು ಹೇಳುತ್ತಿರುವುದು ಆಡಿಯೋದಲ್ಲಿ ಕೇಳಿ ಬಂದಿದೆ.

“ಅವರನ್ನು ಢಾಬಾಗಳಿಗೆ ಕರೆದುಕೊಂಡು ಹೋಗಿ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ, ನಮ್ಮ ವಿರುದ್ಧ ಯಾವುದೇ ನಕಾರಾತ್ಮಕ ಸುದ್ದಿ ಬರದಂತೆ ನೋಡಿಕೊಳ್ಳಿ. ನಮ್ಮ ಬಗ್ಗೆ ಸಕಾರಾತ್ಮಕ ಸುದ್ದಿ ಬರಬೇಕು. ಮೊದಲು ನಿಮ್ಮ ಸ್ವಂತ ಬೂತ್‌ಗಳನ್ನು ರಕ್ಷಿಸಿಕೊಳ್ಳಿ” ಎಂದು ಬಾವಂಕುಲೆ ಹೇಳಿರುವುದು ಆಡಿಯೋದಲ್ಲಿ ಕೇಳಿಸಿದೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್, “ಎಲ್ಲಾ ಪತ್ರಕರ್ತರು ಮಾರಾಟವಾಗುವುದಿಲ್ಲ. ಪತ್ರಕರ್ತರು ನೀವು ಬಿಸಾಡುವ ತುಂಡುಗಳನ್ನು ಸ್ವೀಕರಿಸುತ್ತಾರೆ ಎಂದು ನೀವು ಭಾವಿಸುತ್ತೀರಾ? ಭಿನ್ನಾಭಿಪ್ರಾಯದ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಾಗದ ನಿಮ್ಮ ನಾಯಕರು, ಉನ್ನತ ಮಟ್ಟದ ಮತ್ತು ಸ್ಥಳೀಯ ನಾಯಕರ ಚಡಪಡಿಕೆಗಳು ನಮಗೆ ತಿಳಿಯುತ್ತದೆ. ಆದರೆ ನೀವು ನೇರವಾಗಿ ಪತ್ರಕರ್ತರಿಗೆ ಉಡುಗೊರೆಗಳನ್ನು ನೀಡಲು ಪ್ರಾರಂಭಿಸಿದ್ದೀರಾ?” ಎಂದು ಅವರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News