ತಮಿಳುನಾಡಿನ ಮೊಟ್ಟಮೊದಲ 'ಮಾವುತೆ' ಬಗ್ಗೆ ಗೊತ್ತೇ?
ಉದಕಮಂಡಲಂ: ಆಸ್ಕರ್ ಪ್ರಶಸ್ತಿ ಪುರಸ್ಕೃತ 'ದ ಎಲಿಫೆಂಡ್ ವಿಶ್ಪರರ್' ಚಿತ್ರ ಖ್ಯಾತಿಯ ಆದಿವಾಸಿ ಮಹಿಳೆ ವಿ.ಬೆಳ್ಳೀ ಇದೀಗ ತಮಿಳುನಾಡಿನ ಮೊಟ್ಟಮೊದಲ ಕಾವಡಿ (ಮಾವುತನ ಸಹಾಯಕಿ)ಯಾಗಿ ನಿಯೋಜಿತರಾಗಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಬೆಳ್ಳೀಯವರ ನೇಮಕಾತಿ ಆದೇಶವನ್ನು ಬುಧವಾರ ಹಸ್ತಾಂತರಿಸಿದರು.
ದೇಶದ ಅತ್ಯಂತ ಹಳೆಯ ಆನೆ ಶಿಬಿರ ಎನಿಸಿದ, ಮದುಮಲೈ ಹುಲಿ ಅಭಯಧಾಮದ ತೆಪ್ಪಕಾಡು ಆನೆ ಶಿಬಿರಕ್ಕೆ ಬೆಳ್ಳೀಯವರನ್ನು ನೇಮಕ ಮಾಡಲಾಗಿದೆ.
ಬೆಳ್ಳೀ ಹಾಗೂ ಅವರ ಪತಿ ಕೆ.ಬೊಮ್ಮನ್, ಅನಾಥವಾಗಿದ್ದ ಬೊಮ್ಮಿ ಹಾಗೂ ರಘು ಎಂಬ ಎರಡು ಆನೆಮರಿಗಳನ್ನು ತೆಪ್ಪಕಾಡು ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ಸಂರಕ್ಷಿಸಿದ್ದರು. ಈ ಮಹಿಳೆ ಕಾವಡಿಯಾಗಿ ನೇಮಕಗೊಂಡಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ ಎಂದು ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಹೇಳಿದ್ದಾರೆ.
ತಮ್ಮ ಹೊಸ ಪಾತ್ರದಲ್ಲಿ ಬೆಳ್ಳೀ ಆನೆಗಳ ಆರೈಕೆ ಮಾಡಬೇಕಾಗುತ್ತದೆ. ಆದರೆ ತನ್ನ ಹೃದಯ ಆನೆಮರಿಗಳ ಜತೆ ಇದೆ ಎಂದು ಅವರು ಸ್ಪಷ್ಟಪಡಿಸಿದ ಅವರು, "ನನಗೆ ಅತೀವ ಆನಂದವಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. "ಕಾವಡಿ ಕೆಲಸವನ್ನು ಮಾಡುವ ಜತೆಗೆ ನಾನು ವಿಶೇಷವಾಗಿ ಶಿಬಿರದ ಆನೆ ಮರಿಗಳ ಬಗ್ಗೆ ಕಾಳಜಿ ವಹಿಸುತ್ತೇನೆ" ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಬೊಮ್ಮನ್, "ಶನಿವಾರ ಭಾರತದ ರಾಷ್ಟ್ರಪತಿ ನಮ್ಮ ಶಿಬಿರಕ್ಕೆ ಭೇಟಿ ನೀಡುವುದು ರೋಮಾಂಚನ ಉಂಟುಮಾಡಿದೆ. ಕೆಲ ತಿಂಗಳ ಹಿಂದೆ ರಾಷ್ಟ್ರಪತಿ ಭವನಕ್ಕೆ ತೆರಳಿದ್ದಾಗ ನಾವು ಅವರನ್ನು ಆಹ್ವಾನಿಸಿದ್ದೆವು" ಎಂದು ಬಣ್ಣಿಸಿದರು.
ಈ ಮಾಹುತ ದಂಪತಿ ಹಾಗೂ ಅನೆಮರಿಗಳಾದ ರಘು ಮತ್ತು ಬೊಮ್ಮಿಯ ಅಪೂರ್ವ ಅನುಬಂಧವನ್ನು ಆಧರಿಸಿ ಆಸ್ಕರ್ ಪುರಸ್ಕೃತ ಚಲನಚಿತ್ರವನ್ನು ನಿರ್ಮಿಸಲಾಗಿತ್ತು.