ಎಫ್ 4 ರೇಸ್ ನಲ್ಲಿ ತಮಿಳುನಾಡು ಬಿಜೆಪಿಯ ಬೀದಿ ಜಗಳ
ಚೆನ್ನೈ: ನಗರದಲ್ಲಿ ಇತ್ತೀಚೆಗೆ ನಡೆದ ಎಫ್4 ನೈಟ್ ಸ್ಟ್ರೀಟ್ ಕಾರು ರೇಸಿಂಗ್ ಸ್ಪರ್ಧೆಯ ವೇಳೆ ಬಿಜೆಪಿಯ ರಾಜ್ಯ ಘಟಕದ ಹಿರಿಯ ಮತ್ತು ಯುವ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಬೆಳಕಿಗೆ ಬಂದಿದೆ. ಕಾರು ರೇಸಿಂಗ್ ಸ್ಪರ್ಧೆ ಆಯೋಜಿಸಿದ್ದಕ್ಕೆ ಹಿರಿಯ ಮುಖಂಡರು ರಾಜ್ಯ ಸರ್ಕಾರವನ್ನು ಟೀಕಿಸಿದರೆ, ಬಿಜೆಪಿ ಯುವ ಘಟಕ ರಾಜ್ಯ ಅಧ್ಯಕ್ಷ ವಿನೋಜ್ ಪಿ ಸೆಲ್ವಂ ಹಾಗೂ ಬಿಜೆಪಿ ಕ್ರೀಡಾ ಕೋಶದ ರಾಜ್ಯ ಕಾರ್ಯದರ್ಶಿ ಅಲಿಶಾ ಅಬ್ದುಲ್ಲಾ ಅದನ್ನು ಬೆಂಬಲಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಎಫ್4 ರೇಸ್ನಲ್ಲಿ "ಹೈ ಆಕ್ಟೋನ್ ಎನರ್ಜಿ" ಎಂಬ ಶೀರ್ಷಿಕೆಯೊಂದಿಗೆ ವಿನೋಜ್, ಎಕ್ಸ್ ನಲ್ಲಿ ಫೋಟೊ ಹಂಚಿಕೊಂಡರು. ಸ್ವತಃ ರೇಸಿಂಗ್ ಪಟುವಾಗಿರುವ ಅಲಿಶಾ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯ ಸರ್ಕಾರದ ವ್ಯವಸ್ಥೆಗಳನ್ನು ಶ್ಲಾಘಿಸಿದರು. "ನಾನು ವಿದೇಶಗಳಲ್ಲಿ ನಡೆದ ಹಲವು ಸ್ಟ್ರೀಟ್ ಕಾರು ರೇಸ್ ಗಳಲ್ಲಿ ಭಾಗವಹಿಸಿದ್ದೇನೆ. ಇದು ಅಂಥ ಕೂಟಗಳಿಗೆ ಸಮಾನವಾದದ್ದು" ಎಂದು ಅಲಿಶಾ ಹೇಳಿದ್ದರು. ಬಿಜೆಪಿ ಪದಾಧಿಕಾರಿ ಈ ರೇಸ್ ನಲ್ಲಿ ಕೂಡಾ ಪಾಲ್ಗೊಂಡಿದ್ದರು.
ಆದರೆ ಬಿಜೆಪಿ ಸಮನ್ವಯ ಸಮಿತಿ ಸಂಚಾಲಕ ಎಚ್. ರಾಜಾ ಈ ಸಂಬಂಧ ರಾಜ್ಯ ಸರ್ಕಾರವನ್ನು ಟೀಕಿಸಿದ್ದು, ಕ್ರೀಡಾ ಸಚಿವ ಉದಯನಿಧಿಗಾಗಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಆಪಾದಿಸಿದ್ದರು. ಆದರೆ ಅಲಿಶಾ, ಉದಯನಿಧಿಯನ್ನು ಶ್ಲಾಘಿಸಿದ್ದು, "ಕ್ರೀಡಾಸಚಿವರಾದ ಬಳಿಕ ಉದಯನಿಧಿ ಕ್ರೀಡಾ ವಿಭಾಗದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ" ಎಂದು ಹೇಳಿದ್ದಾರೆ.
ಆದರೆ ಪಕ್ಷದಲ್ಲಿ ಒಡಕು ಇದೆ ಎಂಬ ವಾದವನ್ನು ರಾಜಾ ತಳ್ಳಿಹಾಕಿದ್ದಾರೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಕ್ಕೆ ಗಮನ ಹರಿಸುವ ಬದಲು ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಲ್.ಮುರುಗನ್ ಕೂಡಾ ಕೂಟವನ್ನು ಟೀಕಿಸಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಕರು ನಾಗರಾಜನ್ ಕೂಡಾ ರೇಸಿಂಗ್ ಅನುಮತಿ ನೀಡಿರುವ ಕ್ರಮವನ್ನು ಪ್ರಶ್ನಿಸಿದ್ದಾರೆ.