ಜಾತ್ಯತೀತತೆ ಯೂರೋಪಿಯನ್ ಪರಿಕಲ್ಪನೆ ಹೇಳಿಕೆ: ತಮಿಳುನಾಡು ರಾಜ್ಯಪಾಲರ ವಜಾಕ್ಕೆ ವಿಪಕ್ಷಗಳ ಆಗ್ರಹ
ಚೆನ್ನೈ: ಜಾತ್ಯತೀತತೆ ಯೂರೋಪಿಯನ್ ಪರಿಕಲ್ಪನೆಯಾಗಿದ್ದು, ಅದು ಭಾರತಕ್ಕೆ ಅಗತ್ಯವಿಲ್ಲ ಎಂಬ ಹೇಳಿಕೆ ನೀಡಿರುವ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿಯನ್ನು ವಜಾಗೊಳಿಸಬೇಕು ಎಂದು ವಿಪಕ್ಷಗಳು ಆಗ್ರಹಿಸಿವೆ.
ಕನ್ಯಾಕಮಾರಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಆರ್.ಎನ್.ರವಿ, “ಭಾರತೀಯರಿಗೆ ಹಲವಾರು ವಂಚನೆಗಳನ್ನು ಎಸಗಲಾಗಿದೆ. ಈ ಪೈಕಿ ಜಾತ್ಯತೀತತೆಯ ತಪ್ಪು ವ್ಯಾಖ್ಯಾನ ಕೂಡಾ ಒಂದು” ಎಂದು ಅಭಿಪ್ರಾಯ ಪಟ್ಟಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ರವಿ ಕೇವಲ ನೆಪ ಮಾತ್ರ. ಪ್ರಧಾನಿ ನರೇಂದ್ರ ಮೋದಿ ಏನಾಗಬೇಕೆಂದು ಬಯಸುತ್ತಿದ್ದಾರೊ ಅದನ್ನು ತಮಿಳುನಾಡು ರಾಜ್ಯಪಾಲರು ಪ್ರತಿಧ್ವನಿಸುತ್ತಿದ್ದಾರೆ. ಅವರು ಇದೇ ಪ್ರಥಮ ಬಾರಿಯೇನೂ ಪ್ರಚೋದನಾಕಾರಿ ಮತ್ತು ಅಸ್ವೀಕಾರಾರ್ಹ ಹೇಳಿಕೆ ನೀಡುತ್ತಿರುವುದಲ್ಲ” ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
“ಈ ವ್ಯಕ್ತಿ ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತಮ್ಮ ಹೇಳಿಕೆಯ ಹೊರತಾಗಿಯೂ ಸಾಂವಿಧಾನಿಕ ಪದಾಧಿಕಾರಿಯಾಗಿ ಉಳಿದಿರುವ ಅವರನ್ನು ಈ ಕೂಡಲೇ ವಜಾಗೊಳಿಸಬೇಕು. ಅವರೊಂದು ಅವಮಾನ” ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ಕೂಡಾ ರಾಜ್ಯಪಾಲ ಆರ್.ಎನ್.ರವಿ ಹೇಳಿಕೆಯನ್ನು ಟೀಕಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ ಪಕ್ಷದ ವಕ್ತಾರ ಟಿ.ಕೆ.ಎಸ್.ಇಳಂಗೋವನ್, “ಜಾತ್ಯತೀತತೆ ಭಾರತದಲ್ಲಿ ಅತ್ಯಗತ್ಯವಾಗಿ ಬೇಕಿರುವ ಪರಿಕಲ್ಪನೆಯೇ ಹೊರತು, ಯೂರೋಪ್ ನಲ್ಲಲ್ಲ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮಾಜಿ ಸರಕಾರಿ ಅಧಿಕಾರಿಯಾದ ಆರ್.ಎನ್.ರವಿ, ಸೆಪ್ಟೆಂಬರ್ 2021ರಲ್ಲಿ ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಂಡಿದ್ದರು.