ಡಿಎಂಕೆ ಸಂಸದೆ ಕನಿಮೋಳಿಯಿಂದ ಸನ್ಮಾನಗೊಂಡ ಬೆನ್ನಿಗೇ ಉದ್ಯೋಗದಿಂದ ವಜಾಗೊಂಡ ತಮಿಳುನಾಡಿನ ಮೊದಲ ಮಹಿಳಾ ಬಸ್ ಚಾಲಕಿ
ಚೆನ್ನೈ: ಕೊಯಂಬತ್ತೂರಿನಲ್ಲಿ ಸಂಸದೆ ಕಮಿಮೋಳಿಯಿಂದ ಸನ್ಮಾನಗೊಂಡ ಬೆನ್ನಿಗೇ ಪ್ರಚಾರಕ್ಕಾಗಿ ಸಿನಿಮಾ ತಾರೆಯರನ್ನು ಆಹ್ವಾನಿಸಿದ ಆರೋಪದಲ್ಲಿ ತಮಿಳುನಾಡಿನ ಮೊದಲ ಮಹಿಳಾ ಬಸ್ ಚಾಲಕಿಯೊಬ್ಬರು ವಜಾಗೊಂಡಿದ್ದಾರೆ ಎಂದು indiatoday.in ವರದಿ ಮಾಡಿದೆ.
23 ವರ್ಷದ ಮಹಿಳಾ ಚಾಲಕಿ ಶರ್ಮಿಳಾರ ಕೌಶಲ ಹಾಗೂ ಧೈರ್ಯವನ್ನು ಶ್ಲಾಘಿಸಲು ಆಕೆ ಚಲಾಯಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಡಿಎಂಕೆ ಸಂಸದೆ ಹಾಗೂ ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕನಿಮೋಳಿ ಅವರು ಗಾಂಧಿಪುರಂನಿಂದ ಪೀಲಮೇಡುಗೆ ಪ್ರಯಾಣಿಸಿದ್ದರು. ಸ್ವತಃ ಚಾಲಕರಾಗಿರುವ ಶರ್ಮಿಳಾರ ತಂದೆಯ ಸಮ್ಮುಖದಲ್ಲಿ ಕನಿಮೋಳಿ ಅವರು ಕೈಗಡಿಯಾರವೊಂದನ್ನು ಶರ್ಮಿಳಾರಿಗೆ ಉಡುಗೊರೆ ನೀಡಿದ್ದರು.
ಆದರೆ, ಅದರ ಬೆನ್ನಿಗೇ ಸಂಸದೆ ಕನಿಮೋಳಿ ಅವರು ಬಸ್‌ನಲ್ಲಿ ಪ್ರಯಾಣಿಸುವಾಗ ತರಬೇತಿ ನಿರತ ಮಹಿಳಾ ನಿರ್ವಾಹಕಿಯು ಅವರೊಂದಿಗೆ ಒರಟಾಗಿ ವರ್ತಿಸಿದಳು ಎಂದು ದೂರು ನೀಡಲು ತೆರಳಿದ್ದ ಶರ್ಮಿಳಾರನ್ನು ಖಾಸಗಿ ಬಸ್ ಮಾಲಕನು ಕೆಲಸದಿಂದ ಬಿಡುಗಡೆಗೊಡಿಸಿದ್ದಾನೆ ಎಂದು ಹೇಳಲಾಗಿದೆ.
ಶರ್ಮಿಳಾ ಪ್ರಕಾರ, ನಿನ್ನ ಪ್ರಚಾರಕ್ಕಾಗಿ ಖ್ಯಾತ ವ್ಯಕ್ತಿಗಳನ್ನು ಬಸ್ ಪ್ರಯಾಣಕ್ಕೆ ಕರೆ ತರುತ್ತಿದ್ದೀಯ ಎಂದು ದೂರಿರುವ ಮಾಲಕ, ಕೆಲಸ ತೊರೆಯುವಂತೆ ತನಗೆ ಸೂಚಿಸಿದರು ಎಂದು ಹೇಳಿದ್ದಾರೆ. ವ್ಯವಸ್ಥಾಪಕ ಕೂಡಾ ನನ್ನೊಂದಿಗೆ ಒರಟಾಗಿ ವರ್ತಿಸಿದ ಎಂದು ಆಕೆ ದೂರಿದ್ದಾರೆ.
ಆದರೆ, ಶರ್ಮಿಳಾರನ್ನು ಉದ್ಯೋಗದಿಂದ ತೆಗೆಯಲಾಗಿದೆ ಎಂಬ ಸುದ್ದಿಯನ್ನು ಬಸ್ ಮಾಲಕ ನಿರಾಕರಿಸಿದ್ದಾರೆ.
ಕೆಲವು ದಿನಗಳ ಹಿಂದೆ, ಶರ್ಮಿಳಾ ಚಲಾಯಿಸುತ್ತಿದ್ದ ಬಸ್‌ನಲ್ಲಿ ಕೊಯಂಬತ್ತೂರು (ದಕ್ಷಿಣ) ವಿಧಾನಸಭಾ ಕ್ಷೇತ್ರದ ಶಾಸಕಿ ವಂತಿ ಶ್ರೀನಿವಾಸನ್ ಕೂಡಾ ಪ್ರಯಾಣಿಸಿದ್ದರು.