ತೆಲಂಗಾಣ: ಕಾಂಗ್ರೆಸ್ ಸೇರಿದ ಬಿಆರ್‍ಎಸ್, ಬಿಜೆಪಿ ನಾಯಕರು
ಹೈದರಾಬಾದ್: ತೆಲಂಗಾಣದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಆಡಳಿತಾರೂಢ ಬಿಆರ್‍ಎಸ್ ಹಾಗೂ ಬಿಜೆಪಿಯ ಎಂಟು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು thenewsminute.com ವರದಿ ಮಾಡಿದೆ.
ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಸೇರ್ಪಡೆಯಾದ ನಾಯಕರ ಪೈಕಿ ಎರಡು ದಿನಗಳ ಹಿಂದೆ ಬಿಜೆಪಿ ತೊರೆದಿದ್ದ ಮಾಜಿ ಸಂಸದ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಹಾಗೂ ಮಾಜಿ ಸಚಿವ ಮತ್ತು ಬಿಆರ್‍ಎಸ್ ನಾಯಕ ಮೋಟ್ಕುಪಲ್ಲಿ ನರಸಿಂಹುಲು ಸೇರಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ತೆಲಂಗಾಣ ರಾಜ್ಯದ ಉಸ್ತುವಾರಿ ಮಾಣಿಕ್ ರಾವ್ ಠಾಕ್ರೆ, ರಾಜ್ಯ ಘಟಕದ ಅಧ್ಯಕ್ಷ ಎ.ರೇವಂತ್ ರೆಡ್ಡಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ ಉಪಸ್ಥಿತರಿದ್ದರು.
ಈ ಇಬ್ಬರು ನಾಯಕರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದವರ ಪೈಕಿ ಮಾಜಿ ಶಾಸಕ ಎನುಗು ರವೀಂದರ್ ರೆಡ್ಡಿ, ಮಾಜಿ ವಿಧಾನ ಪರಿಷತ್ ಸದಸ್ಯ ನೇತಿ ವಿದ್ಯಾಸಾಗರ್, ಮಾಜಿ ವಿಧಾನ ಪರಿಷತ್ ಸದಸ್ಯ ಸಂತೋಷ್ ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಅಕುಲ ಲಲಿತಾ, ಮಾಜಿ ವಿಧಾನ ಪರಿಷತ್ ಸದಸ್ಯ ಕಪಿಲವಾಯಿ ದಿಲೀಪ್ ಕುಮಾರ್ ಹಾಗೂ ನೀಲಂ ಮಧು ಸೇರಿದ್ದಾರೆ.
ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ನಾಯಕರ ಪೈಕಿ ಕೆಲವರಿಗಾದರೂ ನವೆಂಬರ್ 30ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ದೊರೆಯುವ ಸಾಧ್ಯತೆ ಇದೆ. ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗೆಲುವು ಸಾಧಿಸಿದ ನಂತರ ಹಲವಾರು ನಾಯಕರು ಬಿಆರ್‍ಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ.
ಕಾಂಗ್ರೆಸ್ ಪಕ್ಷವು ಈಗಾಗಲೇ 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ 55 ಅಭ್ಯರ್ಥಿಗಳನ್ನು ಘೋಷಿಸಿದ್ದು, ಶುಕ್ರವಾರ ಮತ್ತೆ 45 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.