ತೆಲಂಗಾಣ: 9 ಮಂದಿ ಬಂಡಾಯ ಅಭ್ಯರ್ಥಿಗಳ ಮನವೊಲಿಸಿದ ಕಾಂಗ್ರೆಸ್
ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಧುಮುಕಿದ್ದ 9 ಮಂದಿಯನ್ನು ಮನವೊಲಿಸಿ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಬುಧವಾರ ನಾಮಪತ್ರಗಳನ್ನು ವಾಪಾಸು ತೆಗೆಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಈ ಅಭ್ಯರ್ಥಿಗಳು ಕಣಕ್ಕೆ ಧುಮುಕಿದ್ದರು. ಕಾಂಗ್ರೆಸ್ ಮುಖಂಡರು ಮನವೊಲಿಸಿದ ಬಳಿಕ ಇದೀಗ ಅಧಿಕೃತ ಅಭ್ಯರ್ಥಿಗಳ ಪರವಾಗಿ ನಾಮಪತ್ರ ವಾಪಾಸು ಪಡೆದಿದ್ದಾರೆ. ಅದಿಲಾಬಾದ್ ಕ್ಷೇತ್ರದಲ್ಲಿ ಮಾತ್ರ ಬಂಡಾಯ ಅಭ್ಯರ್ಥಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಸಂಜೀವ್ ರೆಡ್ಡಿ ಕಣದಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ.
ಕರ್ನಾಟಕ ಮತ್ತು ಇತರ ಕಡೆಗಳ ಅನುಭವದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ನಿರ್ದಿಷ್ಟ ತಂಡಗಳನ್ನು ನಿಯೋಜಿಸಿದ್ದರು. ಈ ಅಭ್ಯರ್ಥಿಗಳಿಗೆ ಕೆಲ ಹುದ್ದೆಗಳ ಆಮಿಷ ನೀಡಲಾಗಿದ್ದು, ಮತ್ತೆ ಕೆಲವರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡುವ ಭರವಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸೂರ್ಯಪೇಟೆ ಕ್ಷೇತ್ರದಿಂದ ಕಣದಲ್ಲಿದ್ದ ಪಟೇಲ್ ರಮೇಶ್ ರೆಡ್ಡಿಯವರ ನಿವಾಸಕ್ಕೆ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೋಹಿತ್ ಚೌಧರಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲು ರವಿ ಭೇಟಿ ನೀಡಿ, ಮನವೊಲಿಸುವಲ್ಲಿ ಯಶಸ್ವಿಯಾದರು. ಅಧಿಕೃತ ಅಭ್ಯರ್ಥಿ ರಾಮರೆಡ್ಡಿ, ದಾಮೋದರ್ ರೆಡ್ಡಿಯವರನ್ನು ಬೆಂಬಲಿಸಿ ಕಣದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದರು. ಆದರೆ ಇದರಿಂದ ಉದ್ರಿಕ್ತರಾದ ರಮೇಶ್ ರೆಡ್ಡಿ ಬೆಂಬಲಿಗರು 73 ವರ್ಷದ ಮಲ್ಲು ರವಿ ಮೇಲೆ ಹಲ್ಲೆಗೆ ಮುಂದಾದರು. ಅವರ ಪತ್ನಿ ಕೂಡಾ ಕಣ್ಣೀರಿಡುತ್ತಾ ರಮೇಶ್ ರೆಡ್ಡಿ ಉಮೇದುವಾರಿಕೆಯನ್ನು ಬೆಂಬಲಿಸುವಂತೆ ಕೋರಿದರು.
ಕೊನೆಗೂ ಕಣದಿಂದ ಹಿಂದೆ ಸರಿಯಲು ಒಪ್ಪಿಕೊಂಡ ರೆಡ್ಡಿಯವರಿಗೆ ಲೋಕಸಭಾ ಚುನಾವಣೆ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ.