ತೆಲಂಗಾಣ | ನೀರು ತುಂಬಿದ್ದ ಸೇತುವೆಯ ಮೇಲೆ ಬುಲ್ಡೋಝರ್‌ ನುಗ್ಗಿಸಿ 9 ಜೀವಗಳನ್ನು ರಕ್ಷಿಸಿದ ಸುಭಾನ್ ಖಾನ್

Update: 2024-09-03 16:09 GMT

PC : X \ @umasudhir

ಹೈದರಾಬಾದ್ : ಹರ್ಯಾಣದ ಸುಭಾನ್ ಖಾನ್ ಪ್ರವಾಹದ ನೀರಿನ ನಡುವೆ ಸೇತುವೆಯಲ್ಲಿ ಸಿಕ್ಕಿಕೊಂಡು ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಒಂಭತ್ತು ಜೀವಗಳನ್ನು ರಕ್ಷಿಸುವ ಮೂಲಕ ನಿಜ ಜೀವನದ ಹೀರೋ ಆಗಿ ಹೊರಹೊಮ್ಮಿದ್ದಾರೆ. ನೀರು ತುಂಬಿದ್ದ ಸೇತುವೆಯ ಮೇಲೆ ಬುಲ್ಡೋಝರ್‌ ಓಡಿಸಿದ ಖಾನ್ ಒಂಭತ್ತು ಜನರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.

ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ಮುನ್ನೇರು ನದಿಯ ನೀರಿನ ಮಟ್ಟ ಹೆಚ್ಚಿದ್ದು ಪ್ರಕಾಶ ನಗರ ಸೇತುವೆಯ ಮೇಲೆ ಒಂಭತ್ತು ಜನರು ಸಿಕ್ಕಿಕೊಂಡಿದ್ದರು. ಪರಿಸ್ಥಿತಿಯನ್ನು ವೀಡಿಯೊ ಚಿತ್ರೀಕರಿಸಿದ್ದ ಅವರು ತಮ್ಮ ರಕ್ಷಣೆಗಾಗಿ ರಾಜ್ಯ ಸರಕಾರವನ್ನು ಕೋರಿದ್ದರು. ಸರಕಾರವು ಹೆಲಿಕಾಪ್ಟರನ್ನು ರವಾನಿಸಿತ್ತಾದರೂ ಪ್ರತಿಕೂಲ ಹವಾಮಾನದಿಂದಾಗಿ ಸ್ಥಳವನ್ನು ತಲುಪಲು ಅದಕ್ಕೆ ಸಾಧ್ಯವಾಗಿರಲಿಲ್ಲ.

ಯಾವುದೇ ನೆರವು ದೊರೆಯುವ ಸಾಧ್ಯತೆಯಿಲ್ಲದಾಗ ತನ್ನ ಬುಲ್ಡೋಝರ್‌ ಮೂಲಕ ಅವರನ್ನು ರಕ್ಷಿಸಲು ಖಾನ್ ನಿರ್ಧರಿಸಿದ್ದರು. ಅಪಾಯದ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದ್ದ ಇತರರು ದುಸ್ಸಾಹಸಕ್ಕೆ ಮುಂದಾಗದಂತೆ ಸೂಚಿಸಿದ್ದರು. ಬುಲ್ಡೋಝರ್‌ ಹತ್ತಿ ಸೇತುವೆಯತ್ತ ತೆರಳುವ ಮುನ್ನ ಖಾನ್ ‘ನಾನು ಸತ್ತರೆ ಅದು ಒಂದೇ ಜೀವ, ಆದರೆ ನಾನು ವಾಪಸ್ಸಾದರೆ ಒಂಭತ್ತು ಜೀವಗಳನ್ನು ರಕ್ಷಿಸಿರುತ್ತೇನೆ ’ಎಂಬ ಒಂದೇ ಮಾತನ್ನು ಹೇಳಿದ್ದರು.

ಬುಲ್ಡೋಝರ್‌ ಮರಳಿದಾಗ ಅಲ್ಲಿದ್ದವರು ಖಾನ್ ಮತ್ತು ರಕ್ಷಿಸಲ್ಪಟ್ಟವರನ್ನು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು.

ವೀಡಿಯೊದಲ್ಲಿ ಖಾನ್ ಪುತ್ರಿ,‘ನಾನು ಈಗಲೂ ನಡುಗುತ್ತಿದ್ದೇನೆ. ನನ್ನ ತಂದೆ ತಾನು ಏನನ್ನು ಮಾಡಬೇಕು ಎಂದುಕೊಂಡಿದ್ದರೋ ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ’ ಎಂದು ಹೇಳಿರುವುದು ವೈರಲ್ ಆಗಿದೆ.

ಖಾನ್ ಅವರ ಕೆಚ್ಚೆದೆಯ ಕಾರ್ಯಾಚರಣೆಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಅವರನ್ನು ನಿಜಜೀವನದ ಹೀರೋ ಎಂದಿರುವ ಜನರು ಇತರರನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕೊಡ್ಡಿದ್ದ ಅವರ ಧೈರ್ಯವನ್ನು ಕೊಂಡಾಡುತ್ತಿದ್ದಾರೆ.

ಹಿರಿಯ ಬಿಆರ್‌ಎಸ್ ನಾಯಕ ಹಾಗೂ ಮಾಜಿ ಸಚಿವ ಕೆ.ಟಿ.ರಾಮರಾವ್ ಸೇರಿದಂತೆ ಹಲವಾರು ಜನರು ಖಾನ್‌ಗೆ ಕರೆಗಳನ್ನು ಮಾಡಿ ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News