ದೇಶ ನೋಡಬೇಕೆನ್ನುತ್ತಿದೆ, ಮೋದಿ ಚುನಾವಣಾ ಬಾಂಡ್ ಅಡಗಿಸಿಡುತ್ತಿದ್ದಾರೆ : ಕಾಂಗ್ರೆಸ್ ವಾಗ್ದಾಳಿ

Update: 2024-03-07 16:16 GMT

ಜೈರಾಮ್ ರಮೇಶ್ | Photo: PTI 

ಹೊಸದಿಲ್ಲಿ :ಚುನಾವಣಾ ಬಾಂಡ್ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಕೋರಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ ಬಿ ಐ) ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಗುರುವಾರ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ತನ್ನ ಕಾರ್ಪೊರೇಟ್ ದೇಣಿಗೆದಾರರು ಯಾರೆಂದು ಜನರಿಗೆ ಗೊತ್ತಾಗುತ್ತದೆ ಎಂಬ ಭೀತಿ ಪ್ರಧಾನಿ ನರೇಂದ್ರ ಮೋದಿಯನ್ನು ಆವರಿಸಿದೆ ಎಂದು ಅದು ಹೇಳಿದೆ.

ಚುನಾವಣಾ ಬಾಂಡ್‌ ಗಳನ್ನು ಖರೀದಿಸಿದವರು ಮತ್ತು ಸ್ವೀಕರಿಸಿದವರ ವಿವರಗಳನ್ನು ಮಾರ್ಚ್ 6ರ ಒಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ತನ್ನ ಫೆಬ್ರವರಿ 15ರ ಆದೇಶದಲ್ಲಿ ಎಸ್‌ ಬಿ ಐ ಗೆ ನಿರ್ದೇಶನ ನೀಡಿತ್ತು. ಆದರೆ, ಈ ಗಡುವನ್ನು ಜೂನ್ 30ರವರೆಗೆ ವಿಸ್ತರಿಸುವಂತೆ ಕೋರಿ ಎಸ್‌ ಬಿ ಐ ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.

‘‘ನವ ಭಾರತದಲ್ಲಿ ಈಗ ಕಣ್ಣಾಮುಚ್ಚಾಲೆ ಆಟ! ಜನರು ನೋಡಲು ಬಯಸಿದ್ದಾರೆ, ಆದರೆ ಮೋದಿ ಅಡಗಿಸಿಡುತ್ತಿದ್ದಾರೆ!’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.

‘‘ಎಸ್‌ ಬಿ ಐ ಜಾರಿಗೊಳಿಸುತ್ತಿರುವ ಪ್ರಧಾನ ಮಂತ್ರಿ ಚಂದಾ ಚಿಪಾವೊ ಯೋಜನೆಯನ್ನು ಸುಳ್ಳುಗಳಿಂದ ರಚಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.

‘‘ಚುನಾವಣಾ ಬಾಂಡ್‌ ಗಳ ವಿವರಗಳನ್ನು ಸಲ್ಲಿಸುವ ಗಡುವನ್ನು ಜೂನ್ 30ರವರೆಗೆ ವಿಸ್ತರಿಸುವಂತೆ ಎಸ್‌ ಬಿ ಐ ಕೋರಿದೆ. ಲೋಕಸಭಾ ಚುನಾವಣೆ ಮುಗಿಯುವವರೆಗೆ ವಿಷಯವನ್ನು ದೂರವಿಡುವ ಉದ್ದೇಶವನ್ನು ಇದು ಹೊಂದಿದೆ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News