ಟಿ20 ಕ್ರಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಖಾಯಂ ನಾಯಕರನಾಗಿ ನೇಮಿಸುವ ವಿಚಾರ | ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಭಿನ್ನಮತ

Update: 2024-07-17 06:47 GMT

ಹಾರ್ದಿಕ್ ಪಾಂಡ್ಯ | PTI

ಹೊಸದಿಲ್ಲಿ : ಹಾರ್ದಿಕ್ ಪಾಂಡ್ಯರನ್ನು ಟಿ20 ಕ್ರಿಕೆಟ್ ತಂಡದ ಖಾಯಂ ನಾಯಕರನ್ನಾಗಿ ನೇಮಿಸುವ ವಿಚಾರದಲ್ಲಿ ಬಿಸಿಸಿಐ ಹಾಗೂ ಆಯ್ಕೆ ಸಮಿತಿಯ ಸದಸ್ಯರ ನಡುವೆ ಸದ್ಯ ಭಿನ್ನಾಭಿಪ್ರಾಯ ಮೂಡಿದೆ. ಪಾಂಡ್ಯ ಅವರ ಫಿಟ್ನೆಸ್ ಕಳವಳವೇ ಇದಕ್ಕೆ ಕಾರಣ ಎನ್ನಲಾಗಿದೆ.

ಇತ್ತೀಚೆಗೆ ಕೊನೆಗೊಂಡಿರುವ ಟಿ20 ವಿಶ್ವಕಪ್‌ನಲ್ಲಿ ಭಾರತವು ಐಸಿಸಿ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳಲು ಪಾಂಡ್ಯ ಪ್ರಮುಖ ಪಾತ್ರವಹಿಸಿದ್ದರು. ಆದರೆ 8 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಬದುಕಿನಲ್ಲಿ ಹಲವು ಬಾರಿ ಗಂಭೀರ ಗಾಯಕ್ಕೀಡಾಗಿರುವ ಪಾಂಡ್ಯರನ್ನೇ ನಾಯಕ ಸ್ಥಾನದಲ್ಲಿ ಅವಲಂಬಿಸಿಕೊಳ್ಳುವ ವಿಚಾರದಲ್ಲಿ ಶಂಕೆ ವ್ಯಕ್ತವಾಗಿದೆ.

ಫಿಟ್ನೆಸ್‌ಗೆ ಸಂಬಂಧಿಸಿ ಪರದಾಟ ನಡೆಸುತ್ತಿರುವ ಪಾಂಡ್ಯ ಸದ್ಯ ಟೆಸ್ಟ್ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಈ ನಿರ್ಧಾರವು ಪಾಂಡ್ಯರನ್ನು ಖಾಯಂ ಆಗಿ ಟಿ20 ನಾಯಕರನ್ನಾಗಿಸುವ ನಿರ್ಧಾರದಿಂದ ಹಿಂದೇಟು ಹಾಕಲು ಕಾರಣವಾಗಿದೆ. ಅವರು ಪ್ರಮುಖ ಪಂದ್ಯಾವಳಿಯಿಂದ ಪದೇ ಪದೇ ಹೊರಗುಳಿಯುವ ಸಾಧ್ಯತೆಯೂ ಇದೆ.

ಇಂತಹ ಸನ್ನಿವೇಶದಲ್ಲಿ ಸೂರ್ಯಕುಮಾರ್ ಯಾದವ್ ಟಿ20 ನಾಯಕತ್ವಕ್ಕೆ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಯಾದವ್ ಸದ್ಯ ಟಿ20ಕ್ರಿಕೆಟ್‌ನ ನಂ.1 ಬ್ಯಾಟರ್ ಆಗಿದ್ದಾರೆ. ಕಳೆದ ವರ್ಷ ಏಕದಿನ ವಿಶ್ವಕಪ್ ಟೂರ್ನಿಯ ನಂತರ ಸ್ವದೇಶದಲ್ಲಿ ನಡೆದಿದ್ದ ಆಸ್ಟ್ರೇಲಿಯ ವಿರುದ್ಧ ಸರಣಿ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ತನ್ನ ನಾಯಕತ್ವದ ಕೌಶಲ್ಯವನ್ನು ಪ್ರದರ್ಶಿಸಿದ್ದರು.

ಸೂರ್ಯಕುಮಾರ್‌ಗೆ ಸಂಬಂಧಿಸಿ ತಂಡದಿಂದ ಮಾಹಿತಿ ಸ್ವೀಕರಿಸಲಾಗಿದೆ. ಅವರ ನಾಯಕತ್ವದ ಶೈಲಿಯ ಕುರಿತಂತೆಯೂ ಡ್ರೆಸ್ಸಿಂಗ್ ರೂಮ್‌ನಿಂದ ಪ್ರತಿಕ್ರಿಯೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಟಿ20 ನಾಯಕತ್ವಕ್ಕೆ ಸಂಬಂಧಿಸಿ ಅಂತಿಮ ನಿರ್ಧಾರವನ್ನು ನೂತನ ಕೋಚ್ ಗೌತಮ್ ಗಂಭೀರ್ ತೆಗೆದುಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸುವಾಗ ಸೂರ್ಯಕುಮಾರ್ ಜೊತೆ ಗಂಭೀರ್ ಕೆಲಸ ಮಾಡಿದ್ದಾರೆ.

ಬಿಸಿಸಿಐ ಹಾಗೂ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಈ ವಾರ ಗಂಭೀರ್ ಜೊತೆ ಮೊದಲ ಸಭೆ ನಡೆಸಲಿದೆ. ಈ ಸಭೆಯ ನಂತರ ಶ್ರೀಲಂಕಾ ವಿರುದ್ಧ ಏಕದಿನ ಹಾಗೂ ಟಿ20 ಸರಣಿಗೆ ತಂಡಗಳನ್ನು ಪ್ರಕಟಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News