ಅತ್ಯಾಚಾರ ಸಂತ್ರಸ್ತೆಗೆ ಮಧ್ಯಪ್ರದೇಶ ಸರಕಾರ ಕೊಟ್ಟಿದ್ದು ಮಾಸಿಕ 600 ರೂ. ನೆರವು ಮಾತ್ರ!

Update: 2023-10-25 16:48 GMT

ಭೋಪಾಲ್/ಸತ್ನಾ: ಒಂದು ತಿಂಗಳ ಹಿಂದೆ ವೈರಲ್ ಆಗಿದ್ದ ಮಧ್ಯಪ್ರದೇಶದ ಉಜ್ಜಯಿನಿಯ ವೀಡಿಯೊ ದೃಶ್ಯಾವಳಿಯು ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿತ್ತು. ಆ ವೀಡಿಯೊದಲ್ಲಿ ಸೆ.25ರಂದು ಅರೆ ನಗ್ನ ಹಾಗೂ ರಕ್ತಸ್ರಾವಕ್ಕೀಡಾಗಿದ್ದ ಬಾಲಕಿಯೊಬ್ಬಳು ಬೀದಿಗಳಲ್ಲಿ ಅಲೆಯುತ್ತಾ ಹಲವಾರು ಮನೆಗಳ ಬಾಗಿಲು ಬಡಿಯುತ್ತಿರುವುದು, ನೆರವಿಗಾಗಿ ಅಂಗಲಾಚುತ್ತಿರುವುದು ಸೆರೆಯಾಗಿತ್ತು. ಎರಡು ಗಂಟೆಯ ಅವಧಿಯಲ್ಲಿ ಆಕೆ 500 ಮನೆಗಳು, ಉಪಾಹಾರ ಗೃಹಗಳು ಹಾಗೂ ಟೋಲ್ ಬೂತನ್ನು ಹಾದು ಹೋದರೂ ಆಕೆಗೆ ಯಾವುದೇ ನೆರವು ದೊರೆತಿರಲಿಲ್ಲ. ಕೊನೆಗೆ ಆಕೆಯನ್ನು ನೋಡಿದ್ದ ದೇವಾಲಯವೊಂದರ ಅರ್ಚಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

ಆಸ್ಪತ್ರೆಯಲ್ಲಿ ಆಕೆ ಸಾವಿನೊಂದಿಗೆ ಹಲವಾರು ದಿನಗಳ ಕಾಲ ಸೆಣಸಾಡಿದ್ದಳು. ಆಕೆಯ ಕತೆಯು ಹಲವಾರು ವಾರಗಳ ಕಾಲ ಮಾಧ್ಯಮಗಳಲ್ಲಿ ಮುಖಪುಟದ ಸುದ್ದಿಯಾಯಿತು, ರಾಜ್ಯ ಸರ್ಕಾರವು ಆಕೆಯ ಕುಟುಂಬದ ಸದಸ್ಯರಿಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿತು. ಆದರೆ, ಅವೆಲ್ಲವೂ ಇನ್ನೂ ಕಾರ್ಯರೂಪಕ್ಕೆ ಇಳಿಯಬೇಕಿದೆ. ಸದ್ಯ, ಆಕೆ ಮನೆಯಲ್ಲಿದ್ದು, ಆಕೆಯ ಆರೋಗ್ಯವು ಸುಧಾರಿಸಿದೆ. ಆದರೆ, ಆಕೆಯ ಮನಸ್ಸಿನಾಳದಲ್ಲಿ ಆಗಿರುವ ಗಾಯಗಳು ಇನ್ನೂ ಹಸಿಯಾಗಿವೆ.

ಈ ಕುರಿತು ಸತ್ಯ ಶೋಧನಾ ವರದಿಯನ್ನು ತಯಾರಿಸಿರುವ NDTV ಸುದ್ದಿ ಸಂಸ್ಥೆಯು, ಬಾಲಕಿಯ ಸತ್ನಾ ಬಳಿಯ ಗ್ರಾಮಕ್ಕೆ ತೆರಳಿ ಆಕೆಯ ಪರಿಸ್ಥಿತಿಯನ್ನು ಪರಿಶೀಲಿಸಿದೆ. ಮುರುಕಲು ಗುಡಿಸಲಿನಲ್ಲಿ ಕುಳಿತಿದ್ದ ಆಕೆ ಇನ್ನೂ ಭಯಭೀತಳಾಗಿದ್ದಂತಿತ್ತು ಎಂದು NDTV ತಂಡ ಹೇಳಿದೆ.

“ನಮಗಿಲ್ಲಿ ನೆರವು ನೀಡಲು ಜಿಲ್ಲೆಯಿಂದ ಯಾರೂ ಬರಲಿಲ್ಲ. ಸರಪಂಚರಿಂದಲೂ ಯಾವುದೇ ನೆರವು ದೊರೆಯಲಿಲ್ಲ. ಇಲ್ಲಿಗೆ ಯಾರೂ ಬಂದಿಲ್ಲ” ಎಂದು ಸಂತ್ರಸ್ತ ಬಾಲಕಿಯ ಅಜ್ಜ ಹೇಳುತ್ತಾರೆ. ಅವರು ಮೇಕೆ ಮೇಯಿಸುವ ಕೆಲಸ ಮಾಡುತ್ತಿದ್ದಾರೆ.

ಅ. 12ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಸಂತ್ರಸ್ತ ಬಾಲಕಿಯು ಕೈಪಂಪಿನಿಂದ ನೀರು ತರಲು ತನ್ನ ಚಿಕ್ಕಮ್ಮನೊಂದಿಗೆ ಮನೆಯಿಂದ ಮುನ್ನೂರು ಮೀಟರ್ ದೂರಕ್ಕೆ ನಡೆದುಕೊಂಡು ಹೋಗುತ್ತಾಳೆ. ಗ್ರಾಮದಲ್ಲಿ ಮೇಲ್ಜಾತಿಗಳಿಗೆ ಒಂದು ಕೈಪಂಪು ಹಾಗೂ ಕೆಳ ಜಾತಿಗಳ ಸಮುದಾಯಕ್ಕೆ ಒಂದು ಕೈಪಂಪು ಇದೆ ಎಂದು ಸಂತ್ರಸ್ತ ಬಾಲಕಿಯ ಕುಟುಂಬವು ಹೇಳಿದೆ.

“ನಾವು ಕೆಳ ಜಾತಿಯವರಾಗಿರುವುದರಿಂದ ಯಾರೂ ನಮ್ಮ ನೆರವಿಗೆ ಬರಲಿಲ್ಲ” ಎಂದು ಬಾಲಕಿಯ ಸಹೋದರ ಹೇಳಿದ್ದಾರೆ

ಸಂತ್ರಸ್ತ ಬಾಲಕಿಯ ಕುಟುಂಬವು ಪರಿಶಿಷ್ಟ ಜಾತಿಯಾದ ದೋಹರ್ ಸಮುದಾಯಕ್ಕೆ ಸೇರಿದ್ದು, ಹೀಗಾಗಿಯೇ ರಜಪೂತರಾಗಿರುವ ಸರಪಂಚರಾಗಲಿ ಅಥವಾ ಜಿಲ್ಲಾಡಳಿತವಾಗಲಿ ತಮಗೆ ನೆರವು ನೀಡಲಿಲ್ಲವೆಂದು ಆಕೆಯ ಸಹೋದರ ಆರೋಪಿಸಿದ್ದಾರೆ. ಗ್ರಾಮದಲ್ಲಿ 700 ಮತದಾರರಿದ್ದು, ಈ ಪೈಕಿ ಅರ್ಧದಷ್ಟು ಮಂದಿ ಮೇಲ್ಜಾತಿಗೆ ಸೇರಿದ್ದರೆ, ಮತ್ತರ್ಧದಷ್ಟು ಮಂದಿ ದಲಿತ ಸಮುದಾಯಕ್ಕೆ ಸೇರಿದ್ದಾರೆ.

15 ವರ್ಷದ ಸಂತ್ರಸ್ತ ಬಾಲಕಿಯನ್ನು ರೈಲ್ವೆ ನಿಲ್ದಾಣದ ಬಳಿ ಹತ್ತಿಸಿಕೊಂಡ ಆಟೋ ಚಾಲಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಘಟನೆಯ ವೀಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅರೆ ನಗ್ನವಾಗಿದ್ದ ಬಾಲಕಿಯು, ಮನೆಮನೆಯ ಬಾಗಿಲು ತಟ್ಟಿ ನೆರವು ಕೋರುತ್ತಿರುವುದು ಸೆರೆಯಾಗಿತ್ತು.

ಇದಕ್ಕೂ ಮುನ್ನ, ಘಟನೆಯ ಕುರಿತು ಪ್ರತಿಕ್ರಿಯಿಸಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, “ಆರೋಪಿಯು ಮಧ್ಯಪ್ರದೇಶದ ಆತ್ಮಕ್ಕೆ ಗಾಯ ಮಾಡಿದ್ದಾನೆ. ಆಕೆಯು ರಾಜ್ಯದ ಪುತ್ರಿಯಾಗಿದ್ದಾಳೆ. ನಾವು ಆಕೆಯ ಆರೈಕೆ ಮಾಡುತ್ತೇವೆ” ಎಂದು ಭರವಸೆ ನೀಡಿದ್ದರು.

ಸಂತ್ರಸ್ತ ಬಾಲಕಿಗೆ ಯಾವೆಲ್ಲ ನೆರವು ದೊರೆತಿದೆ ಎಂದು ಚೌಹಾಣ್ ಅವರಿಂದ ತಿಳಿಯಲು NDTV ತಂಡವು ಪ್ರಯತ್ನಿಸಿದಾಗ, ಅವರು ಕೇವಲ ‘ನಮಸ್ಕಾರ’ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ.

ಸಂತ್ರಸ್ತೆಯ ನೆರೆಹೊರೆಯವರ ಪ್ರಕಾರ, ಆಕೆ ಮನೆಗೆ ಮರಳುವಾಗ ಪಡೆದ ದೊಡ್ಡ ನೆರವೆಂದರೆ, ಬಿಜೆಪಿ ಅಭ್ಯರ್ಥಿ ಸುರೇಂದ್ರ ಸಿಂಗ್ ಗಾರೇವಾರ್ ನೀಡಿದ ರೂ. 1,500 ನಗದು ಮಾತ್ರ.

“ಅತ್ಯಾಚಾರ ನಡೆದಾಗಿನಿಂದ ಈವರೆಗೆ ಮತ್ಯಾವ ನೆರವೂ ಆಕೆಗೆ ದೊರೆತಿಲ್ಲ. ಆಕೆ ಆಸ್ಪತ್ರೆಯಿಂದ ಸ್ವತಃ ಭರಿಸಿ, ಔಷಧಿ ಖರೀದಿಸುತ್ತಿದ್ದಾಳೆ. ಆಕೆಗೆ ಸರ್ಕಾರದಿಂದಾಗಲಿ ಅಥವಾ ಜಿಲ್ಲಾಡಳಿತದಿಂದಾಗಲಿ ಯಾವುದೇ ಪರಿಹಾರ ಸಿಕ್ಕಿಲ್ಲ”ಎನ್ನುತ್ತಾರೆ ನೆರೆಮನೆಯವರೊಬ್ಬರು.

ತಮ್ಮ ಕುಟುಂಬಕ್ಕೆ ಸರ್ಕಾರದಿಂದ ದೊರೆಯುತ್ತಿರುವ ಏಕೈಕ ನೆರವು ಮಾಸಿಕ ರೂ. 600 ಸಾಮಾಜಿಕ ನ್ಯಾಯ ಪಿಂಚಣಿ ಮಾತ್ರ ಎಂದು ಸಂತ್ರಸ್ತೆಯ ಕುಟುಂಬ ಹೇಳಿದೆ.

ಅಂಕಿ-ಅಂಶಗಳ ಪ್ರಕಾರ, ದಲಿತರ ಮೇಲಿನ ದೌರ್ಜನ್ಯ ಪ್ರಮಾಣವು ಮಧ್ಯಪ್ರದೇಶದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ. 2021ರಲ್ಲಿ ದೇಶಾದ್ಯಂತ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 50,900 ಎಂದು ವರದಿಯಾಗಿತ್ತು.

ಆದರೆ, ಮಧ್ಯಪ್ರದೇಶವೊಂದರಲ್ಲೇ ಈ ಸಂಖ್ಯೆ 7,211 ಆಗಿತ್ತು. 2021ರಲ್ಲಿ ದೇಶಾದ್ಯಂತ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಪ್ರಮಾಣ ಶೇ. 25.3ರಷ್ಟಿದ್ದರೆ, ಮಧ್ಯಪ್ರದೇಶವೊಂದರಲ್ಲೇ ಶೇ. 63.6ರಷ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News