ಮಧ್ಯಪ್ರದೇಶದಲ್ಲಿ ಕಳವು ಪ್ರಕರಣ | ಇಬ್ಬರು ಯುವಕರ ಕಟ್ಟಿ ಹಾಕಿ ಥಳಿತ; ಹೆಡ್ ಕಾನ್ಸ್ ಸ್ಟೇಬಲ್ ಅಮಾನತು
ಬೈತೂಲ್: ಮಧ್ಯಪ್ರದೇಶದ ಬೈತೂಲ್ ಜಿಲ್ಲೆಯಲ್ಲಿ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಇಬ್ಬರು ಯುವಕರನ್ನು ಕಟ್ಟಿ ಹಾಕಿ ಥಳಿಸಿದ ಆರೋಪದಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಓರ್ವರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮೊಹ್ದಾ ಪೊಲೀಸ್ ಠಾಣಾ ವ್ಯಾಪ್ತಿಯ ದೆಸಿಲ್ ಗ್ರಾಮದಲ್ಲಿ ಕಳೆದ ವಾರ ಈ ಘಟನೆ ನಡೆದಿದೆ. ಈ ಘಟನೆಯ ವೀಡಿಯೊ ರವಿವಾರ ಸಾಮಾಜಿಕ ಮಾಧ್ಯಮದಲ್ಲಿ ಕಂಡು ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೀಡಿಯೊದಲ್ಲಿ ಕೆಲವು ಅಂಗಡಿಗಳ ಮುಂಭಾಗದಲ್ಲಿ ಇಬ್ಬರು ಯುವಕರನ್ನು ಕಟ್ಟಿ ಹಾಕಿರುವುದು ಹಾಗೂ ಪೊಲೀಸ್ ಕಾನ್ಸ್ ಸ್ಟೇಬಲ್ ಓರ್ವರು ಪ್ಲಾಸ್ಟಿಕ್ ಪೈಪ್ ನಲ್ಲಿ ಥಳಿಸುತ್ತಿರುವುದು ಕಂಡು ಬಂದಿದೆ.
ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳಿಗೆ ಹೆಡ್ ಕಾನ್ಸ್ ಸ್ಟೇಬಲ್ ಕಮ್ತಾ ಪ್ರಸಾದ್ ಕೀರ್ ಅವರು ಥಳಿಸುತ್ತಿರುವ ವೀಡಿಯೊ ರವಿವಾರ ಗಮನಕ್ಕೆ ಬಂತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಮಲಾ ಜೋಷಿ ತಿಳಿಸಿದ್ದಾರೆ.
ವೀಡಿಯೊವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿರುವ ಬೈತೂಲ್ ನ ಪೊಲೀಸ್ ಅಧೀಕ್ಷಕ ದಾಮ್ಜಿಪುರ ಪೊಲೀಸ್ ಠಾಣೆಗೆ ನಿಯೋಜಿತರಾಗಿದ್ದ ಕೀರ್ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ಜೋಷಿ ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.