ಭಾರತ ಮತ್ತು ಆಫ್ರಿಕಾದಿಂದ ಆಗಮಿಸುವ ಪ್ರಯಾಣಿಕರಿಗೆ 1,000 ಡಾಲರ್ ತೆರಿಗೆ ವಿಧಿಸಲಿದೆ ಈ ದೇಶ

Update: 2023-10-27 12:13 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ತನ್ನ ನೆಲದ ಮೂಲಕ ಅಮೆರಿಕ್ಕೆ ವಲಸೆ ಹೋಗುವುದನ್ನು ತಡೆಯುವ ಸ್ಪಷ್ಟ ಪ್ರಯತ್ನವಾಗಿ ಎಲ್ ಸಾಲ್ವಡೋರ್ ಆಫ್ರಿಕಾ ಅಥವಾ ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ 1,000 ಡಾಲರ್ ಗಳ ಶುಲ್ಕವನ್ನು ವಿಧಿಸುತ್ತಿದೆ.

ಭಾರತ ಅಥವಾ 50ಕ್ಕೂ ಹೆಚ್ಚಿನ ಆಫ್ರಿಕನ್ ದೇಶಗಳ ಪೈಕಿ ಯಾವುದೇ ಒಂದು ದೇಶದ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುವವರು 1,000 ಡಾಲರ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಎಲ್ ಸಾಲ್ವಡೋರ್‌ನ ಬಂದರು ಪ್ರಾಧಿಕಾರವು ಅ.20ರಂದು ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಹೀಗೆ ಸಂಗ್ರಹವಾದ ಹಣವನ್ನು ದೇಶದ ಮುಖ್ಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುಧಾರಣೆಗೆ ಬಳಸಲಾಗುವುದು ಎಂದೂ ಅದು ಹೇಳಿದೆ.

ಎಲ್ ಸಾಲ್ವಡೋರ್ ಅಧ್ಯಕ್ಷ ನಯೀಬ್ ಬುಕೆಲೆ ಅವರು ಈ ವಾರ ಇತರ ವಿಷಯಗಳ ಜೊತೆಗೆ ಅನಿಯಮಿತ ವಲಸೆ ತಡೆ ಪ್ರಯತ್ನಗಳನ್ನು ಚರ್ಚಿಸಲು ಅಮೆರಿಕದ ಸಹಾಯಕ ವಿದೇಶಾಂಗ ಕಾರ್ಯದರ್ಶಿ (ಪಶ್ಚಿಮ ಗೋಳಾರ್ಧದ ವ್ಯವಹಾರಗಳು) ಬ್ರಿಯಾನ್ ನಿಕೋಲಸ್ ಅವರನ್ನು ಭೇಟಿಯಾಗಿದ್ದರು. ಸೆಪ್ಟಂಬರ್‌ಗೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ ದಾಖಲೆಯ 32 ಲಕ್ಷ ವಲಸಿಗರು ಪ್ರವೇಶಿಸಿದ್ದಾರೆ ಎಂದು ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ಗಸ್ತು ಸಂಸ್ಥೆಯು ಹೇಳಿದೆ.

ಆಫ್ರಿಕಾ ಮತ್ತು ಇತರೆಡೆಗಳ ಹೆಚ್ಚಿನ ವಲಸಿಗರು ಮಧ್ಯ ಅಮೆರಿಕಾ ಮೂಲಕ ಅಮೆರಿಕವನ್ನು ಪ್ರವೇಶಿಸುತ್ತಾರೆ.

ಭಾರತ ಮತ್ತು ಆಫ್ರಿಕಾದಿಂದ ಬರುವ ಪ್ರಯಾಣಿಕರು ಈಗ ವ್ಯಾಟ್ ಸೇರಿದಂತೆ 1,130 ಡಾಲರ್ ಶುಲ್ಕವನ್ನು ಪಾವತಿಸಬೇಕಿದೆ. ಇದು ಅ.23ರಿಂದ ಜಾರಿಗೊಂಡಿದ್ದು,ದೇಶದ ಮುಖ್ಯ ವಿಮಾನ ನಿಲ್ದಾಣದ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು ಹೇಳಿಕೆಯು ತಿಳಿಸಿದೆ.

ಪ್ರತಿ ದಿನ ಭಾರತ ಮತ್ತು ಆಫ್ರಿಕಾದ 57 ದೇಶಗಳಿಂದ ಆಗಮಿಸುವ ಪ್ರಯಾಣಿಕರ ವಿವರಗಳನ್ನು ವಿಮಾನಯಾನ ಸಂಸ್ಥೆಗಳು ಒದಗಿಸುವುದು ಅಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News