ದಿಲ್ಲಿ- ಎನ್‌ಸಿಆರ್‌ನಲ್ಲಿ ಪ್ರತಿ ಕಿಲೋಗ್ರಾಂ ಗೆ 140 ರೂ.ಗೆ ಏರಿದ ಟೊಮೆಟೊ ಬೆಲೆ

Update: 2023-07-03 16:48 GMT

ಸಾಂದರ್ಭಿಕ ಚಿತ್ರ | Photo: PTI

ಹೊಸದಿಲ್ಲಿ: ಮಳೆಯಿಂದಾಗಿ ಉತ್ಪಾದನಾ ಕೇಂದ್ರಗಳಿಂದ ಪೂರೈಕೆಗೆ ಅಡ್ಡಿ ಉಂಟಾಗಿರುವುದರಿಂದ ದಿಲ್ಲಿ-ಎನ್‌ಸಿಆರ್‌ ವಲಯದಲ್ಲಿ ಪ್ರತಿ ಕಿ.ಗ್ರಾಂ ಟೊಮೆಟೊದ ಚಿಲ್ಲರೆ ಬೆಲೆ 140 ರೂ.ಗೆ ಏರಿಕೆಯಾಗಿದೆ.

ಏಶ್ಯಾದ ಅತಿ ದೊಡ್ಡ ಹಣ್ಣು ಹಾಗೂ ತರಕಾರಿಗಳ ಸಗಟು ಮಾರುಕಟ್ಟೆಯಾಗಿರುವ ಇಲ್ಲಿನ ಅಝಾದ್ಪುರ ಮಂಡಿಯಲ್ಲಿ ಸೋಮವಾರ ಗುಣಮಟ್ಟಕ್ಕೆ ಅನುಗುಣವಾಗಿ ಪ್ರತಿ ಕಿ.ಗ್ರಾಂ ಟೊಮೆಟೊದ ಸಗಟು ಬೆಲೆ 60 ರೂ.ನಿಂದ 120 ರೂ. ವರೆಗೆ ಇತ್ತು. ಮದರ್ ಡೈರಿಯ ಸಫಾಲ್ ರವಿವಾರ ಪ್ರತಿ ಕಿ.ಗ್ರಾಂ ಟೊಮೆಟೊವನ್ನು 99 ರೂ.ಗೆ ಮಾರಾಟ ಮಾಡುತ್ತಿತ್ತು.

ಸೋಮವಾರ ಆನ್ಲೈನ್ ಚಿಲ್ಲರೆ ವ್ಯಾಪಾರ ಸಂಸ್ಥೆ ಒಟಿಪೈ ಪ್ರತಿ ಕಿ.ಗ್ರಾಂ ಹೈಬ್ರಿಡ್ ಟೊಮೆಟೊ ಬೆಲೆ 140 ರೂ. ಹಾಗೂ ಬಿಗ್ ಬಾಸ್ಕೆಟ್ ಪ್ರತಿ ಕಿ.ಗ್ರಾಂ. ಟೊಮೆಟೊ ಬೆಲೆ 105 ರೂ.ನಿಂದ 110 ರೂ. ವರೆಗೆ ಉಲ್ಲೇಖಿಸಿದೆ.

‘‘ಪ್ರಮುಖ ಉತ್ಪಾದನಾ ಕೇಂದ್ರಗಳಿಂದ ಪೂರೈಕೆಯಲ್ಲಿನ ಕೊರತೆಯ ಕಾರಣಕ್ಕೆ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗಿದೆ. ಮಳೆಯಿಂದಾಗಿ ಟೊಮೆಟೊ ಪೂರೈಕೆಗೆ ಅಡ್ಡಿ ಉಂಟಾಗಿದೆ’’ ಎಂದು ಅಝಾದ್ಪುರ ಟೊಮೆಟೊ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಕೌಶಿಕ್ ಹೇಳಿದ್ದಾರೆ.

ಮಳೆಯಿಂದಾಗಿ ನೆರೆಯ ಹರ್ಯಾಣ, ಉತ್ತರಪ್ರದೇಶ ಹಾಗೂ ರಾಜಸ್ಥಾನದಿಂದ ಪಡೆದ ಪೂರೈಕೆ ಖಾಲಿಯಾಗಿದೆ. ಈಗ ದಿಲ್ಲಿ-ಎನ್‌ಸಿಆರ್‌ ವಲಯ ಹಿಮಾಚಲಪ್ರದೇಶ ಏಕೈಕ ಪೂರೈಕೆದಾರ. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಟೊಮೆಟೊ ಕೀಳಲು ಹಾಗೂ ಸಾಗಾಟ ಮಾಡಲು ಅಡ್ಡಿ ಉಂಟಾಗಿದೆ. ಮಳೆಯಿಂದಾಗಿ ಮಹಾರಾಷ್ಟ್ರ, ಕರ್ನಾಟಕದ ಉತ್ಪಾದನಾ ಕೇಂದ್ರಗಳಿಂದ ಟೊಮೆಟೊ ಪೂರೈಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಅವರು ಹೇಳಿದ್ದಾರೆ.

‘‘ಟೊಮೆಟೊದ 25 ಕಿ.ಗ್ರಾಂ. ಕ್ರೇಟ್ ನ ಬೆಲೆ 2,400 ರೂ.ನಿಂದ 3,000 ರೂ. ನಡುವೆ ಇದೆ. ಉತ್ಪಾದನಾ ಕೇಂದ್ರದಲ್ಲಿ ಪ್ರತಿ ಕಿ.ಗ್ರಾಂ ಟೊಮೆಟೊಗೆ 100 ರೂ.ನಿಂದ 120 ರೂ. ವರೆಗೆ ಇದೆ. ಈ ಅತ್ಯಧಿಕ ಬೆಲೆಯಲ್ಲಿ ವ್ಯಾಪಾರಿಗಳು ಟೊಮೆಟೊವನ್ನು ದಿಲ್ಲಿಗೆ ತರಲು ಸಾಧ್ಯವಿಲ್ಲ’’ ಎಂದು ಕೌಶಿಕ್ ಹೇಳಿದ್ದಾರೆ.

ದಕ್ಷಿಣದ ರಾಜ್ಯಗಳಲ್ಲಿ ಮುಂದಿನ 15 ದಿನಗಳಲ್ಲಿ ಮಳೆ ಸುರಿಯುವುದು ಕಡಿಮೆಯಾದರೆ, ದಿಲ್ಲಿ-ಎನ್‌ಸಿಆರ್‌ ವಲಯಕ್ಕೆ ಟೊಮೆಟೊ ಪೂರೈಕೆ ಸುಧಾರಿಸುವ ನಿರೀಕ್ಷೆ ಇದೆ. ಅಲ್ಲಿವರೆಗೆ ಇದೇ ಬೆಲೆ ಮುಂದುವರಿಯಲಿದೆ ಎಂದು ಕೌಶಿಕ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News