ಯುಕೋ ಬ್ಯಾಂಕ್ ಐಎಂಪಿಎಸ್ ಹಗರಣ | ರಾಜಸ್ಥಾನ, ಮಹಾರಾಷ್ಟ್ರದ ವಿವಿಧೆಡೆ ಸಿಬಿಐ ದಾಳಿ
ಹೊಸದಿಲ್ಲಿ : ಯುಕೋ ಬ್ಯಾಂಕ್ ನಲ್ಲಿ ನಡೆದ 800 ಕೋಟಿ ರೂ. ಐಎಂಪಿಎಸ್ (ತಕ್ಷಣ ಪಾವತಿ ವ್ಯವಸ್ಥೆ) ಹಗರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ರಾಜಸ್ಥಾನ ಹಾಗೂ ಮಹಾರಾಷ್ಟ್ರ ರಾಜ್ಯಗಳ ಏಳು ನಗರಗಳ 67 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತು.
ಕಳೆದ ವರ್ಷದ ನವೆಂಬರ್ 10 ಹಾಗೂ ನವೆಂಬರ್ 13ರಂದು ಯುಕೋ ಬ್ಯಾಂಕ್ ನಲ್ಲಿ ನಡೆದಿದ್ದ 8,53,049 ಗೂ ಅಧಿಕ ಐಎಂಪಿಎಸ್ ವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
‘‘ಏಳು ಖಾಸಗಿ ಬ್ಯಾಂಕ್ ಗಳ 14,600 ಖಾತೆದಾರರಿಂದ, ಯುಕೋಬ್ಯಾಂಕ್ ನ 41 ಸಾವಿರಕ್ಕೂ ಅಧಿಕ ಖಾತೆದಾರರಿಗೆ ತಪ್ಪಾಗಿ ಐಎಂಪಿಎಸ್ ಮೂಲಕ ಹಣ ವರ್ಗಾವಣೆಯಾಗಿತ್ತು. ಇದರ ಪರಿಣಾಮವಾಗಿ 820 ಕೋಟಿ ರೂ. ಮೊತ್ತದ ಹಣವು ಯುಕೋ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿತ್ತು’’ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಪ್ರಮಾದದಿಂದಾಗಿ ತಮ್ಮ ಖಾತೆಗೆ ಜಮೆಯಾದ ಹಣವನ್ನು ಬ್ಯಾಂಕ್ ಗೆ ಹಿಂತಿರುಗಿಸುವ ಬದಲು ಅದನ್ನು ವಿತ್ಡ್ರಾ ಮಾಡಿದಂತಹ ವ್ಯಕ್ತಿಗಳನ್ನು ಕೇಂದ್ರೀಕರಿಸಿ ರಾಜಸ್ಥಾನ ಹಾಗೂ ಮಹಾರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆಸಲಾಯಿತೆಂದು ಅವರು ಹೇಳಿದ್ದಾರೆ.
ಈ ಹಗರಣಕ್ಕೆ ಸಂಬಂಧಿಸಿ 2023ರ ಡಿಸೆಂಬರ್ ನಲ್ಲಿ ಕೋಲ್ಕತಾ ಹಾಗೂ ಮಂಗಳೂರಿನ 13 ಸ್ಥಳಗಳಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ಯುಕೋ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ಶೋಧಕಾರ್ಯಾಚರಣೆ ನಡೆಸಿದ್ದರು.