ಸನಾತನ ಧರ್ಮ ಕುರಿತು ಉದಯನಿಧಿ ಸ್ಟಾಲಿನ್ ಟೀಕೆ: ಕಾಂಗ್ರೆಸ್ ನಾಯಕರಲ್ಲಿ ಪರ-ವಿರೋಧ
ಹೊಸದಿಲ್ಲಿ: ಅಸಮಾನತೆಯನ್ನು ಪ್ರತಿಪಾದಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಚಿವ, ನಟ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತಿದ್ದು, ವಿಪಕ್ಷಗಳ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಲು ಪ್ರಮುಖ ಅಸ್ತ್ರವಾಗಿ ಬಳಸುತ್ತಿದೆ.
ಇದರ ಬೆನ್ನಲ್ಲೇ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಉದಯನಿಧಿ ಹೇಳಿಕೆಯನ್ನು ಸಮರ್ಥಿಸಲು ಹಿಂದೇಟು ಹಾಕಿದ್ದಾರೆ. ಅದೇ ವೇಳೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಅವರು ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಡಿಎಂಕೆ ನಾಯಕನ ಹೇಳಿಕೆ ಕುರಿತು ಕಾಂಗ್ರೆಸ್ ನಾಯಕರೊಳಗೆ ಪರಸ್ಪರ ಭಿನ್ನಾಭಿಪ್ರಾಯ ತಲೆದೋರಿದೆ. ಮಧ್ಯಪ್ರದೇಶ ಮಾಜಿ ಸಚಿವ ಕಮಲ್‌ನಾಥ್ ಅವರು, ಉದಯನಿಧಿ ಹೇಳಿಕೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
“ಇದು ಅವರ ವೈಯಕ್ತಿಕ ಅಭಿಪ್ರಾಯಗಳಾಗಿರಬಹುದು. ನಾನು ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ" ಎಂದು ಕಮಲ್ ನಾಥ್ ಹೇಳಿದರು.
ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಪ್ರತಿಕ್ರಿಯಿಸಿ, ಕಾಂಗ್ರೆಸ್ ಎಲ್ಲಾ ಧರ್ಮಗಳನ್ನು ಸಮಾನವಾಗಿ ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.
“ಪ್ರತಿ ರಾಜಕೀಯ ಪಕ್ಷಕ್ಕೂ ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ಸ್ವಾತಂತ್ರ್ಯ ಇದೆ. ಕಾಂಗ್ರೆಸ್ ಎಲ್ಲರ ನಂಬಿಕೆಗಳನ್ನು ಗೌರವಿಸುತ್ತದೆ. ನಮ್ಮ ನಿಲುವು ಸ್ಪಷ್ಟವಾಗಿದೆ... ‘ಸರ್ವ ಧರ್ಮ ಸಮಭಾವ’ ಎಂಬುದು ಕಾಂಗ್ರೆಸ್ ಸಿದ್ಧಾಂತವಾಗಿದೆ” ಎಂದು ಅವರು ಹೇಳಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಪ್ರತಿಕ್ರಿಯಿಸಿ, “ಸಮಾನತೆಯನ್ನು ಉತ್ತೇಜಿಸದ, ಮನುಷ್ಯ ಘನತೆಯನ್ನು ಖಚಿತಪಡಿಸಿಕೊಳ್ಳದ ಯಾವುದೇ ಧರ್ಮವು ನನ್ನ ಪ್ರಕಾರ ಧರ್ಮವಲ್ಲ. ಸಮಾನ ಹಕ್ಕುಗಳನ್ನು ನೀಡದ ಯಾವುದೇ ಧರ್ಮವಿದ್ದರೂ ಅದು ಕಾಯಿಲೆಯೇ” ಎಂದು ಹೇಳಿದ್ದಾರೆ.
ಸಚಿವ ಮಹದೇವಪ್ಪ ಪ್ರತಿಕ್ರಿಯಿಸಿ, “ಸನಾತನ ಧರ್ಮ ಶೂದ್ರರಿಗೆ ಓದಲೇ ಕಳಿಸಿರಲಿಲ್ಲ. ಮೆಕಾಲೆ ಬಂದ ಬಳಿಕವೇ ಓದು ಬರೆಹ ಶೂದ್ರರಿಗೆ ಸಿಕ್ಕಿತ್ತು. ಬಾಬಾ ಸಾಹೇಬರು ಕಲಿಯೋದಿಕ್ಕೆ ಇಂಗ್ಲಿಷ್ ಶಿಕ್ಷಣ ಕಾರಣ. ಅಂಬೇಡ್ಕರ್ ಅವರು ಮನುವಾದವನ್ನು ಯಾಕೆ ಸುಟ್ಟು ಹಾಕಿದರು? ನ್ಯಾಯ, ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಧರ್ಮ ಇರಲಿ. ಯಾವುದೇ ಧರ್ಮವಿರಲಿ ನ್ಯಾಯ, ಸಮಾನತೆ ಇಲ್ಲದಿದ್ದರೆ, ಅದ್ನು ಧರ್ಮ ಎಂದು ಹೇಗೆ ಕರೆಯುವುದು? ” ಎಂದು ಪ್ರಶ್ನಿಸಿದ್ದಾರೆ.