ನಾಳೆ ಕೇಂದ್ರ ಬಜೆಟ್ | 7ನೇ ಬಾರಿಗೆ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್
ಹೊಸದಿಲ್ಲಿ : ಸಂಸತ್ತಿನಲ್ಲಿ ಸೋಮವಾರ ಆರಂಭವಾದ ಬಜೆಟ್ ಅಧಿವೇಶನದ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಕೇಂದ್ರ ಬಜೆಟ್-2024 ಮಂಡಿಸಲಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎಗೆ ಈ ಬಾರಿ ಬಹುಮತ ಲಭಿಸದೇ ಇರುವುದರಿಂದ ಮೋದಿ ನೇತೃತ್ವದ ಮೂರನೇ ಅವಧಿಯ ಸರಕಾರದ ಮಹತ್ವದ ಬಜೆಟ್ ಆಗಿದೆ. ಇದೊಂದು ಸವಾಲಿನ ಬಜೆಟ್ ಆಗಿರುತ್ತದೆ ಎಂದು ಪರಿಗಣಿಸಲಾಗಿದೆ.
ಕೇಂದ್ರ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ‘‘ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಮೂರನೇ ಬಾರಿ ಅಧಿಕಾರಕ್ಕೆ ಬರುತ್ತಿರುವುದರಿಂದ ಹಾಗೂ ಮೂರನೇ ಬಾರಿ ಮಂಡಿಸುತ್ತಿರುವ ಮೊದಲನೇ ಬಜೆಟ್ ಆಗಿರುವುದರಿಂದ ಇದು 60 ವರ್ಷಗಳ ಬಳಿಕ ಹೆಮ್ಮೆಯ ವಿಷಯವಾಗಿದೆ. ಇದು ಅಮೃತಕಾಲ್‌ಗೆ ಮುಖ್ಯವಾದ ಬಜೆಟ್ ಆಗಿದೆ. ಬಜೆಟ್ ಮುಂದಿನ ನಮ್ಮ 5 ವರ್ಷಗಳ ಅಧಿಕಾರಾವಧಿಯ ದಿಶೆಯನ್ನು ನಿರ್ಧರಿಸಲಿದೆ. ಈ ಬಜೆಟ್ ನಮ್ಮ ವಿಕಸಿತ ಭಾರತ ಕನಸಿನ ಗಟ್ಟಿಯಾದ ಅಡಿಪಾಯ ಹಾಕಲಿದೆ’’ ಎಂದು ಅವರು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣವನ್ನು ಪೂರ್ವಾಹ್ನ 11 ಗಂಟೆಗೆ ಆರಂಭಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಇದು ನಿರ್ಮಲಾ ಸೀತಾರಾಮನ್ ಅವರಿಗೆ 7ನೇ ಬಜೆಟ್ ಆಗಿರಲಿದೆ.
ಈ ಬಜೆಟ್ ನಿರ್ದಿಷ್ಟವಾಗಿ ರಸ್ತೆ, ಭಾರತೀಯ ರೈಲ್ವೆ ಬಗ್ಗೆ ಗಮನ ಕೇಂದ್ರೀಕರಿಸುವುದರೊಂದಿಗೆ ದಾಖಲೆಯ ಬಂಡವಾಳ ವೆಚ್ಚವನ್ನು ಘೋಷಿಸುವ ಸಾಧ್ಯತೆ ಇದೆ. ಇದಲ್ಲದೆ, ಜನಸಾಮಾನ್ಯ, ವೇತನ ಪಡೆಯುವ ತೆರಿಗೆ ಪಾವತಿದಾರರು ಹಾಗೂ ಮಧ್ಯಮವರ್ಗದವರು ಈ ಬಜೆಜ್‌ನಲ್ಲಿ ಆದಾಯ ತೆರಿಗೆ ವಿನಾಯತಿ ಘೋಷಣೆಯನ್ನು ಎದುರು ನೋಡುತ್ತಿದ್ದಾರೆ.