ಎಸ್‌ಎಫ್‌ಐ ಕಾರ್ಯಕರ್ತರ ಕರಿಪತಾಕೆ ಪ್ರದರ್ಶನದ ನಂತರ ಕೇರಳ ರಾಜ್ಯಪಾಲರಿಗೆ ಝೆಡ್+ ಶ್ರೇಣಿಯ ಭದ್ರತೆ ಒದಗಿಸಿದ ಕೇಂದ್ರ
ಕೊಲ್ಲಮ್ (ಕೇರಳ): ಕೊಲ್ಲಮ್ ಜಿಲ್ಲೆಯ ನೀಲಮೇಲ್ ಎಂಬಲ್ಲಿ ತನ್ನ ವಿರುದ್ಧ ಪ್ರತಿಭಟನೆ ನಡೆಸಿರುವ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಕಾರ್ಯಕರ್ತರನ್ನು ಬಂಧಿಸಬೇಕೆಂದು ಆಗ್ರಹಿಸಿ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಶನಿವಾರ ರಸ್ತೆ ಬದಿಯ ಅಂಗಡಿಯೊಂದರಲ್ಲಿ ಧರಣಿ ನಡೆಸಿದರು.
ನೀಲಮೇಲ್‌ನಲ್ಲಿರುವ ನಿಬಿಡ ಎಮ್.ಸಿ. ರಸ್ತೆಯಲ್ಲಿ ತನ್ನ ವಾಹನ ನಿಲ್ಲಿಸಿದ ಆರಿಫ್ ಮುಹಮ್ಮದ್ ಖಾನ್ ಪಕ್ಕದ ಅಂಗಡಿಯೊಂದರಿಂದ ಕುರ್ಚಿಯೊಂದನ್ನು ಪಡೆದು ಅದರ ಮೇಲೆ ಕುಳಿತು ಧರಣಿ ಆರಂಭಿಸಿದರು. ತನ್ನ ವಿರುದ್ಧ ಪ್ರತಿಭಟನೆ ನಡೆಸಿದವರನ್ನು ಬಂಧಿಸಬೇಕೆಂದು ಅವರು ಒತ್ತಾಯಿಸಿದರು. ರಾಜ್ಯಪಾಲರು ಕೋಪದಿಂದ ಪೊಲೀಸ್ ಸಿಬ್ಬಂದಿಯ ಜೊತೆ ವಾಗ್ವಾದ ನಡೆಸುವ ನಾಟಕೀಯ ದೃಶ್ಯಗಳನ್ನು ಟಿವಿ ಚಾನೆಲ್‌ಗಳು ಪ್ರಸಾರ ಮಾಡಿದವು. ಪೊಲೀಸರಲ್ಲದೆ, ಖಾನ್‌ರ ಅಧಿಕಾರಿಗಳು ಮತ್ತು ಸ್ಥಳೀಯರು ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದರು.
ಸಮಾರಂಭವೊಂದರಲ್ಲಿ ಭಾಗವಹಿಸುವುದಕ್ಕಾಗಿ ರಾಜ್ಯಪಾಲರು ಸಮೀಪದ ಕೊಟ್ಟಾರಕ್ಕರಕ್ಕೆ ಪ್ರಯಾಣಿಸುತ್ತಿದ್ದಾಗ, ಆಡಳಿತಾರೂಢ ಸಿಪಿಎಮ್ ಪಕ್ಷದ ವಿದ್ಯಾರ್ಥಿ ಘಟಕ ಎಸ್‌ಎಫ್‌ಐನ ಕಾರ್ಯಕರ್ತರು ಅವರ ವಿರುದ್ಧ ಕರಿ ಪತಾಕೆಗಳನ್ನು ಪ್ರದರ್ಶಿಸಿದ್ದರು. ಅದರಿಂದ ಕೆರಳಿದ ರಾಜ್ಯಪಾಲರು ಪ್ರತಿಭಟನಕಾರರ ಬಂಧನಕ್ಕೆ ಒತ್ತಾಯಿಸಿದ್ದರು.
ಕೇರಳದ ಎಡ ರಂಗ ಸರಕಾರ ಮತ್ತು ರಾಜ್ಯಪಾಲರು ಹಲವು ವಿಷಯಗಳಲ್ಲಿ ಪರಸ್ಪರ ಸಂಘರ್ಷದಲ್ಲಿ ತೊಡಗಿದ್ದಾರೆ. ವಿಶ್ವವಿದ್ಯಾನಿಲಯಗಳ ನೇಮಕಾತಿಗೆ ಸಂಬಂಧಿಸಿ ಸರಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ನೆಲೆಸಿದೆ. ರಾಜ್ಯ ವಿಧಾನಸಭೆಯು ಅಂಗೀಕರಿಸಿರುವ ಕೆಲವು ಮಹತ್ವದ ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕದೆ ತನ್ನಲ್ಲೇ ಇಟ್ಟುಕೊಂಡಿದ್ದಾರೆ.
ಶುಕ್ರವಾರ ರಾಜಭವನದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಲಿ, ಅವರ ಸಂಪುಟ ಸಹೋದ್ಯೋಗಿಗಳಾಗಲಿ, ಎಲ್‌ಡಿಎಫ್ ಶಾಸಕರಾಗಲಿ ಹಾಜರಾಗಿಲ್ಲ.
ಮುಖ್ಯಮಂತ್ರಿ, ಸಚಿವರು ಮತ್ತು ಶಾಸಕರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ಆದರೆ, ಕೇರಳ ಸರಕಾರದ ಪರವಾಗಿ ಸಾಮಾನ್ಯ ಆಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಆರ್. ಜ್ಯೋತಿಲಾಲ್ ಸಮಾರಂಭಕ್ಕೆ ಹಾಜರಾಗಿದ್ದರು.
ಶುಕ್ರವಾರ ರಾಜಧಾನಿ ತಿರುವನಂತಪುರಮ್‌ನ ಸೆಂಟ್ರಲ್ ಸ್ಟೇಡಿಯಮ್‌ನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದ ವೇಳೆ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಅಕ್ಕಪಕ್ಕ ಕುಳಿತಿದ್ದರೂ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿರಲಿಲ್ಲ.
ರಾಜ್ಯಪಾಲರ ಭದ್ರತೆ ಝಡ್ ಪ್ಲಸ್‌ಗೆ ಹೆಚ್ಚಳ
ಕೇರಳ ರಾಜ್ಯಪಾಲರು ರಸ್ತೆ ಬದಿಯಲ್ಲಿ ಧರಣಿ ನಡೆಸಿದ ಬೆನ್ನಿಗೇ, ಕೇಂದ್ರ ಗೃಹ ಸಚಿವಾಲಯವು ಅವರಿಗೆ ನೀಡಲಾಗಿರುವ ಭದ್ರತೆಯನ್ನು ಝಡ್ ಪ್ಲಸ್‌ಗೆ ಹೆಚ್ಚಿಸಿದೆ.
‘‘ರಾಜ್ಯಪಾಲರು ಮತ್ತು ಕೇರಳ ರಾಜಭವನಕ್ಕೆ ಸಿಆರ್‌ಪಿಎಫ್‌ನ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ ಎಂಬುದಾಗಿ ಕೇಂದ್ರ ಗೃಹ ಸಚಿವಾಲಯವು ಕೇರಳ ರಾಜಭವನಕ್ಕೆ ತಿಳಿಸಿದೆ’’ ಎಂದು ಕೇರಳ ರಾಜಭವನ ‘ಎಕ್ಸ್’ನಲ್ಲಿ ಹೇಳಿದೆ.