‘ಪೊಲೀಸ್‌ಮನ್’ ಬದಲಿಗೆ ಇನ್ನು ‘ಪೊಲೀಸ್ ಸಿಬ್ಬಂದಿಗಳು’: ಲಿಂಗ ತಾರತಮ್ಯವನ್ನು ಅಂತ್ಯಗೊಳಿಸಲು ಕೇರಳ ಪೊಲೀಸರ ಕ್ರಮ

Update: 2025-01-06 13:56 GMT

ಸಾಂದರ್ಭಿಕ ಚಿತ್ರ | PC : PTI  

ಕೋಝಿಕೋಡ್: ಪೋಲಿಸ್ ಪಡೆಯೊಳಗೆ ಲಿಂಗ ಸಮಾನತೆಯತ್ತ ಕ್ರಾಂತಿಕಾರಿ ಹೆಜ್ಜೆಯಾಗಿ ಕೇರಳ ಪೋಲಿಸ್ ಇಲಾಖೆಯು ಹೊಸದಾಗಿ ಭರ್ತಿಯಾದವರು ಪಾಸಿಂಗ್-ಔಟ್ ಪರೇಡ್ ಸಂದರ್ಭದಲ್ಲಿ ಸ್ವೀಕರಿಸುವ ಪ್ರಮಾಣ ವಚನವನ್ನು ತಿದ್ದುಪಡಿಗೊಳಿಸಿದೆ. ಲಿಂಗ-ನಿರ್ದಿಷ್ಟ ಪದ ‘ಪೋಲಿಸಮನ್’ ಅನ್ನು ಕೈಬಿಡಲಾಗಿದ್ದು,ಇದರಿಂದಾಗಿ ಪ್ರಮಾಣ ವಚನದಲ್ಲಿ ಪುರುಷ ಮತ್ತು ಮಹಿಳಾ ಪೋಲಿಸರು ಸಮಾನ ಪ್ರಾತಿನಿಧ್ಯವನ್ನು ಪಡೆಯಲಿದ್ದಾರೆ.

ಈ ಕ್ರಮವು ಲಿಂಗವನ್ನು ಪರಿಗಣಿಸದೆ ಎಲ್ಲ ಸಿಬ್ಬಂದಿಗಳನ್ನು ಸಮಾನವಾಗಿ ಒಪ್ಪಿಕೊಳ್ಳುವ ಬದ್ಧತೆಯೊಂದಿಗೆ ಪೋಲಿಸ್ ಪಡೆಯಲ್ಲಿನ ದೀರ್ಘಕಾಲದ ಲಿಂಗ ತಾರತಮ್ಯವನ್ನು ಅಂತ್ಯಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು mathrubhumi.com ವರದಿ ಮಾಡಿದೆ.

ಬದಲಾವಣೆಗೆ ಸಂಬಂಧಿಸಿದಂತೆ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಮನೋಜ ಅಬ್ರಹಾಂ ಅವರು ಜ.3ರಂದು ಗೃಹ ಇಲಾಖೆಯ ಪರವಾಗಿ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ.

‘ಓರ್ವ ಪೋಲಿಸ್‌ಮನ್ ಆಗಿ ನನ್ನ ಕರ್ತವ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವುದಾಗಿ ಪ್ರಮಾಣ ಮಾಡುತ್ತೇನೆ’ ಎನ್ನುವುದರ ಬದಲು ಪ್ರಮಾಣ ವಚನವು ಈಗ ‘ಓರ್ವ ಪೋಲಿಸ್ ಸಿಬ್ಬಂದಿಯಾಗಿ ನನ್ನ ಕರ್ತವ್ಯಗಳನ್ನು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವುದಾಗಿ ಪ್ರಮಾಣ ಮಾಡುತ್ತೇನೆ’ ಎಂದು ಹೇಳುತ್ತದೆ.

ಪುರುಷ ನಾಯಕತ್ವವನ್ನು ಆಧರಿಸಿದ ಲಿಂಗ-ನಿರ್ದಿಷ್ಟ ಪ್ರಮಾಣ ವಚನವನ್ನು ರದ್ದುಗೊಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾದ ಬಳಿಕ ಈ ಬದಲಾವಣೆ ಬಂದಿದೆ.

ರಾಜ್ಯ ಪೋಲಿಸ್ ಮುಖ್ಯಸ್ಥರ 2011ರ ನಿರ್ದೇಶನದಂತೆ ಈ ಹಿಂದೆ ‘ಮಹಿಳಾ ಪೋಲಿಸ್ ಕಾನ್‌ಸ್ಟೇಬಲ್’,‘ಮಹಿಳಾ ಹೆಡ್ ಕಾನ್‌ಸ್ಟೇಬಲ್’,ಮಹಿಳಾ ಸಬ್‌ಇನ್ಸ್‌ಪೆಕ್ಟರ್’,‘ಮಹಿಳಾ ಸರ್ಕಲ್ ಇನ್ಸ್‌ಪೆಕ್ಟರ್’ ಮತ್ತು ‘ಮಹಿಳಾ ಡಿಎಸ್‌ಪಿ’ ಯಂತಹ ಶ್ರೇಣಿಗಳಲ್ಲಿ ‘ಮಹಿಳಾ’ ಪದ ಬಳಕೆಯನ್ನು ನಿಷೇಧಿಸಲಾಗಿತ್ತು.

ಲಿಂಗ ಸಮಾನತೆ ಕ್ರಮಗಳ ಭಾಗವಾಗಿ ಬಟಾಲಿಯನ್‌ಗಳಲ್ಲಿ ಮಹಿಳೆಯರನ್ನು ‘ಹವಿಲ್ದಾರ್’ ಎಂದು ಉಲ್ಲೇಖಿಸಬೇಕು ಎಂಬ ಸಲಹೆಯೂ ಇತ್ತು. 2020ರಲ್ಲಿ ‘ಮಹಿಳಾ ಸ್ನೇಹಿ ವರ್ಷ’ ಕಾರ್ಯಕ್ರಮದಲ್ಲಿ ಆಗಿನ ಪೋಲಿಸ್ ಮಹಾನಿರ್ದೇಶಕರು ಸಹ ಪೋಲಿಸ್ ಪಡೆಯಲ್ಲಿ ಮಹಿಳೆಯರನ್ನು ಉಲ್ಲೇಖಿಸುವ ನಿರ್ದಿಷ್ಟ ಪದಗಳನ್ನು ಕೈಬಿಡುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News