ಹರ್ಯಾಣ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೇಶ್ ಫೋಗಟ್: ಇಂದು ನಿರ್ಧಾರ

Update: 2024-09-03 02:24 GMT

ಹೊಸದಿಲ್ಲಿ: ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸುವ ಸಂಬಂಧ ಕಾಂಗ್ರೆಸ್ ಮಂಗಳವಾರ ಸ್ಪಷ್ಟ ನಿರ್ಧಾರಕ್ಕೆ ಬರಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್ ಬಬಾರಿಯಾ ಸ್ಪಷ್ಟಪಡಿಸಿದ್ದಾರೆ. ಎಐಸಿಸಿ ಕೇಂದ್ರೀಯ ಚುನಾವಣಾ ಸಮಿತಿ ಜತೆಗೆ ಸಭೆ ನಡೆಸಿದ ಬಳಿಕ ಅವರು ಈ ನಿರ್ಧಾರ ಪ್ರಕಟಿಸಿದರು. 49 ಅಭ್ಯರ್ಥಿಗಳ ಪೈಕಿ 34 ಹೆಸರುಗಳನ್ನು ಸಮಿತಿ ಅಂತಿಮಪಡಿಸಿದೆ ಎಂದು ತಿಳಿದು ಬಂದಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿರುವ ಸಂಸದೆ ಕುಮಾರಿ ಶೆಲ್ಜಾ ಮತ್ತು ರಾಜ್ಯಸಭಾ ಸದಸ್ಯ ರಣದೀಪ್ ಸುರ್ಜೇವಾಲಾ ಅವರು ಸ್ಪರ್ಧಿಸುವ ಬಗ್ಗೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ಧಾರ ಕೈಗೊಳ್ಳುವರು ಎಂದು ಉನ್ನತ ಮೂಲಗಳು ಹೇಳಿವೆ. ಶೆಲ್ಜಾ ಅವರ ಪುತ್ರ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಿಎಂ ಭೂಪೀಂದರ್ ಹೂಡಾ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಅಜಯ್ ಮಾಕೆನ್ ನೇತೃತ್ವದ ಪರಿಶೀಲನಾ ಸಮಿತಿ 49 ಸ್ಥಾನಗಳಿಗೆ ಸಂಬಂಧಿಸಿದಂತೆ ಒಮ್ಮತಕ್ಕೆ ಬಂದಿದ್ದು, ಇದನ್ನು ಸಿಇಸಿಗೆ ಚರ್ಚೆಗಾಗಿ ಒಯ್ಯಲಾಗಿದೆ. ಕೆಲ ರಾಜಕೀಯ ಕುಟುಂಬಗಳು ಮತ್ತು ಹಾಲಿ ಶಾಸಕರ ಸ್ಥಾನಗಳ ಬಗ್ಗೆ ಚರ್ಚೆಗಳು ಅಗತ್ಯ ಇವೆ ಎಂಬ ನಿರ್ಧಾರಕ್ಕೆ ಬರಲಾಗಿದೆ. ಬಹುತೇಕ ಎಲ್ಲ ಹಾಲಿ ಶಾಸಕರನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದ್ದು, ಈಗಾಗಲೇ ಚಾಲ್ತಿಯಲ್ಲಿರುವ ಹೆಸರುಗಳು ಮತ್ತು ಕುಟುಂಬಗಳ ಬದಲು ಹೊಸ ಕಾರ್ಯಕರ್ತರನ್ನು ಕಣಕ್ಕಿಳಿಸುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಆರು ಮಂದಿಯ ಎರಡನೇ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿದ್ದು, ರಾಜ್ಯಕಾಂಗ್ರೆಸ್ ಅಧ್ಯಕ್ಷ ತಾರೀಕ್ ಅಹ್ಮದ್ ಕರ್ರಾ ಅವರು ಕೇಂದ್ರ ಶಲ್ತೆಂಗ್ ಕ್ಷೇತ್ರದಿಂದ ಹಾಗೂ ಮೊಹ್ಮದ್ ಶಹಾನವಾಜ್ ಚೌಧರಿ ಸುರನ್ಕೋಟೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಜತೆ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ 32 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ನ್ಯಾಷನಲ್ ಕಾನ್ಫರೆನ್ಸ್ 51 ಕಡೆಗಳಲ್ಲಿ ಉಮೇದುವಾರರನ್ನು ಕಣಕ್ಕೆ ಇಳಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News