ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿ ಅರ್ಜುನ, ಖೇಲ್ ರತ್ನ ಪ್ರಶಸ್ತಿಗಳನ್ನು ತೊರೆದ‌ ವಿನೇಶ್ ಫೋಗಟ್

Update: 2023-12-30 17:20 GMT

 ಅರ್ಜುನ ಮತ್ತು ಖೇಲ್ ರತ್ನ ಪ್ರಶಸ್ತಿ | Photo: X

ಹೊಸದಿಲ್ಲಿ: ಭಾರತೀಯ ಕುಸ್ತಿಫೆಡರೇಶನ್ (ಡಬ್ಲ್ಯುಎಫ್ಐ) ವಿವಾದದ ನಡುವೆಯೇ ದೇಶದಲ್ಲಿ ಮಹಿಳಾ ಕುಸ್ತಿಪಟುಗಳನ್ನು ಅನುಚಿತವಾಗಿ ನಡೆಸಿಕೊಳ್ಳಲಾಗುತ್ತಿರುವುದನ್ನು ಪ್ರತಿಭಟಿಸಿ ಏಶ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಸ್ವರ್ಣ ವಿಜೇತ ಕುಸ್ತಿಪಟು ವಿನೇಶ್ ಫೋಗಟ್ ಶನಿವಾರ ತನ್ನ ‘ಅರ್ಜುನ’ ಹಾಗೂ ‘ಖೇಲ್ ರತ್ನ’ಪ್ರಶಸ್ತಿಗಳನ್ನು ಹೊಸದಿಲ್ಲಿಯ ಕರ್ತವ್ಯಪಥದ ಕಾಲುದಾರಿಯಲ್ಲಿ ತೊರೆದುಹೋಗಿದ್ದಾರೆ.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ರ ನಿಕಟವರ್ತಿ ಸಂಜಯ್ ಸಿಂಗ್ ಅವರು ಭಾರತೀಯ ಕುಸ್ತಿ ಫೆಡರೇಶನ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ವಿನೇಶ್ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯಟವರಿಗೆ ಬಹಿರಂಗ ಪತ್ರ ಬರೆದಿದ್ದರು.

ವಿನೇಶ್ ಫೋಗಟ್ ಅವರು ತನ್ನ ಪದಕಗಳನ್ನು ಪ್ರಧಾನಿಯವರ ಕಾರ್ಯಾಲಯದ ಹೊರಭಾಗದಲ್ಲಿ ತೊರೆದುಹೋಗಲು ನಿರ್ಧರಿಸಿದರು. ಆದರೆ ಅವರನ್ನು ಕರ್ತವ್ಯ ಪಥದಲ್ಲಿರುವ ಪೊಲೀಸರು ತಡೆದರು. ಆಗ ವಿನೇಶ್ ಅವರು ತನ್ನ ಪದಕಗಳನ್ನು ಕರ್ತವ್ಯ ಪಥದಲ್ಲಿರುವ ಕಾಲುದಾರಿಯಲ್ಲಿ ತ್ಯಜಿಸಿ ಹೋದರು. ಆನಂತರ ದಿಲ್ಲಿ ಪೊಲೀಸರು ಈ ಪದಕಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

‘‘ನನಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಯನ್ನು ನೀಡಲಾಗಿತ್ತು. ಆದರೆ ಅವು ನನ್ನ ಜೀವನದಲ್ಲಿ ಅರ್ಥವನ್ನು ಕಳೆದುಕೊಂಡಿವೆ. ಪ್ರತಿಯೊಬ್ಬ ಮಹಿಳೆಯು ಗೌರವದೊಂದಿಗೆ ಬದುಕಲು ಬಯಸುತ್ತಾಳೆ. ಆದುದರಿಂದ ಪ್ರಧಾನಿಯವರೇ ನಾನು ನನ್ನ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಯನ್ನು ನಿಮಗೆ ಮರಳಿಸಲು ಬಯಸುತ್ತಿದ್ದೇನೆ. ಯಾಕೆಂದರೆ ಗೌರವದೊಂದಿಗೆ ಬದುಕುವ ನನ್ನ ದಾರಿಗೆ ಅವು ಹೊರೆಯಾಗಬಾರದು” ಎಂದು ವಿನೇಶ್ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಅಲ್ಲದೆ ನೂತನ ಡಬ್ಲ್ಯುಎಫ್ಐ ಸಮಿತಿಯನ್ನು ವಿರೋಧಿಸಿ ಒಲಿಂಪಿಕ್ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಅವರು ವಾರಗಳ ಹಿಂದೆ ತನ್ನ ಪದ್ಮಶ್ರೀ ಪ್ರಶಸ್ತಿಯನ್ನು ಕರ್ತವ್ಯಪಥದಲ್ಲಿ ತೊರೆದಿದ್ದರು. ಪ್ರಮುಖ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಕುಸ್ತಿ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದರು.

ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಅವರು ಸಂಜಯ್ ಸಿಂಗ್ ನೇತೃತ್ವದ ಡಬ್ಲ್ಯುಎಫ್ಐ ಕಾರ್ಯಕಾರಿ ಸಮಿತಿಗೆ ತಮ್ಮ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದ್ದರು. ಸಂಜಯ್ ಸಿಂಗ್ ಅವರು ಬ್ರಿಜ್ ಭೂಷಣ್ ಶರಣ್ ಸಿಂಗ್ ಪ್ರಭಾವಕ್ಕೊಳಗಾಗಿರಬಹುದೆಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದರು. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬ್ರಿಜ್ ಭೂಷಣ್ ವಿರುದ್ಧ ದೂರುಗಳನ್ನು ಸಲ್ಲಿಸಲು ಮುಂದೆ ಬಂದಿರುವ ಮಹಿಳಾ ಕುಸ್ತಿಪಟುಗಳಿಗಾಗಿ ನ್ಯಾಯ ದೊರಕಿಸಬೇಕೆಂದು ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದರು.

ಈ ಮಧ್ಯೆ ಡಬ್ಲ್ಯುಎಫ್ಐನ ಸಂವಿಧಾನವನ್ನು ಉಲ್ಲಂಘಿಸಿದ ಆರೋಪದಲ್ಲಿ ಸಂಜಯ್ ಸಿಂಗ್ ನೇತೃತ್ವದ ಡಬ್ಲ್ಯುಎಫ್ಐನ ನೂತನ ಕಾರ್ಯಕಾರಿ ಸಮಿತಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು ಹಾಗೂ ಡಬ್ಲ್ಯುಎಫ್ಐನ ದೈನಂದಿನ ಕಾರ್ಯಗಳ ನಿರ್ವಹಣೆಗೆ ಭಾರತೀಯ ಒಲಿಂಪಿಕ್ ಸಮಿತಿ ಮೂಲಕ ತ್ರಿಸದಸ್ಯ ಅಡ್ಹಾಕ್ ಸಮಿತಿಯೊಂದನ್ನು ರಚಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News