ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಒಬ್ಬ ಮೃತ್ಯು

Update: 2023-12-31 02:31 GMT

Photo: PTI

ಗುವಾಹತಿ: ಮೀಟಿ ಮತ್ತು ಕೂಕಿ ಸಮುದಾಯಗಳ ನಡುವಿನ ಸಂಘರ್ಷದಿಂದಾಗಿ ಹಲವು ತಿಂಗಳಿನಿಂದ ಸುದ್ದಿಯಲ್ಲಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಂಗ್ಪೋಕ್ಪಿ ಜಿಲ್ಲೆಯಲ್ಲಿ ಮೀಟಿ ಸಮುದಾಯದ ವ್ಯಕ್ತಿಯೊಬ್ಬರು ಗುಂಡಿನ ಕಾಳಗದಲ್ಲಿ ಮೃತಪಟ್ಟಿದ್ದಾರೆ.

ಗುಂಡೇಟಿಗೆ ಬಲಿಯಾದ ವ್ಯಕ್ತಿಯನ್ನು ನಿಂಗೋಮ್ಬಾಮ್ ಜೇಮ್ಸ್ (32) ಎಂದು ಗುರುತಿಸಲಾಗಿದೆ. ಗಡಿಭಾಗದ ಮೊರೆಹ್ ಪಟ್ಟಣದಲ್ಲಿ ನಡೆದ ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಉಗ್ರರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದಾರೆ. ಡಿಸೆಂಬರ್ 4ರಂದು ತೆಂಗೊಪಾಲ್ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ 13 ಮಂದಿ ಹತ್ಯೆಯಾದ 26 ದಿನಗಳ ಬಳಿಕ ಈ ಘಟನೆ ವರದಿಯಾಗಿದೆ.

ಮೇ ತಿಂಗಳ ಆರಂಭದಿಂದ ಮಣಿಪುರದಲ್ಲಿ ಜನಾಂಗೀಯ ಕಲಹ ನಡೆಯುತ್ತಿದ್ದು, ರಾಜ್ಯದಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಮೀಟಿ ಹಾಗೂ ಬುಡಕಟ್ಟು ಜನಾಂಗವಾದ ಕುಕಿಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಇದುವರೆಗೆ ಹಿಂಸಾಚಾರಕ್ಕೆ 197 ಮಂದಿ ಬಲಿಯಾಗಿದ್ದು, ಎರಡೂ ಸಮುದಾಯಗಳಿಗೆ ಸೇರಿದ 50 ಸಾವಿರಕ್ಕೂ ಹಚ್ಚು ಮಂದಿ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ.

ಕುಕಿ ಪ್ರಾಬಲ್ಯದ ಬೆಟ್ಟ ಪ್ರದೇಶಗಳಿಂದ ಮೀಟಿಗಳು ಸ್ಥಳಾಂತರಗೊಂಡಿದ್ದು, ಮೀಟಿ ಬಾಹುಳ್ಯದ ಪ್ರದೇಶಗಳಿಂದ ಕುಕಿಗಳು ಪಲಾಯನ ಮಾಡಿದ್ದಾರೆ. ಈ ಕಾರಣದಿಂದಾಗಿ ಜಾತಿ ಆಧರಿತ "ಗ್ರಾಮ ರಕ್ಷಣಾ ಸ್ವಯಂಸೇವಕ" ಸಶಸ್ತ್ರ ಸಂಘಟನೆ ಕಾರ್ಯಾಚರಣೆಗೆ ಇಳಿದಿದೆ.

ಶನಿವಾರ ಮುಂಜಾನೆ 3.30ರ ಸುಮಾರಿಗೆ ಉಭಯ ಸಮುದಾಯಗಳ ಗ್ರಾಮ ರಕ್ಷಣೆ ಸ್ವಯಂಸೇವಕರ ನಡುವೆ ಗುಂಡಿನ ಕಾಳಗ ನಡೆದಿದೆ. "ನಕುಗುಂಜ್ ಬೆಟ್ಟ ಪ್ರದೇಶ ಮತ್ತು ಸಿಂಗ್ದಾ ಕುಕಿ ಗ್ರಾಮಗಳ ನಡುವೆ ಈ ಗುಂಡಿನ ಚಕಮಕಿ ನಡೆದಿದ್ದು, ಬೆಳಿಗ್ಗೆ 4.20ರವರೆಗೆ  ಮುಂದುವರಿದಿತ್ತು" ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News