ಕರ್ನಾಟಕ ಸೇರಿ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಮತದಾನ ಆರಂಭ
ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು ಹದಿಮೂರು ರಾಜ್ಯಗಳಲ್ಲಿ ಮತದಾನ ಶುಕ್ರವಾರ ಬೆಳಿಗ್ಗೆ ಆರಂಭವಾಗಿದೆ. ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
ಕೇರಳದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಮತ್ತು ರಾಹುಲ್‍ಗಾಂಧಿ ಸೇರಿದಂತೆ 88 ಕೇತ್ರಗಳಲ್ಲಿ 1200 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗಿದೆ.
ಕೇರಳದ ಎಲ್ಲ 20 ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ಆರಂಭವಾಗಿದ್ದು, ಮತಗಟ್ಟೆಗಳ ಹೊರಗೆ ದೊಡ್ಡ ಸರತಿ ಸಾಲುಗಳು ಬೆಳಿಗ್ಗೆಯಿಂದಲೇ ಕಾಣಿಸುತ್ತಿವೆ. ಪಶ್ಚಿಮ ಬಂಗಾಳದ ಬಲೂರ್ ಘಾಟ್‍ನಲ್ಲಿ ಕೂಡಾ ಮತದಾನ ಆರಂಭವಾಗಿದೆ. ರಾಜ್ಯದ 42 ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.
ಹನ್ನೆರಡು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 88 ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಗೆ 2633 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 1428 ಸಿಂಧುವಾಗಿತ್ತು ಎಂದು ಚುನಾವಣಾ ಆಯೋಗ ಹೇಳಿದೆ.
ಕೇರಳದ ವಯನಾಡ್ ಮತ್ತು ತಿರುವನಂತಪುರಂನಲ್ಲಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ತ್ರಿಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ ಬಿಜೆಪಿಯ ಕೆ.ಸುರೇಂದ್ರನ್ ಹಾಗೂ ಸಿಪಿಐನ ಆ್ಯನಿ ರಾಜಾ ಅವರನ್ನು ಎದುರಿಸುತ್ತಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಮತದಾನ ಅವಧಿಯಲ್ಲಿ ಸಂಜೆ 6ರವರೆಗೆ ವಿಸ್ತರಿಸಲಾಗಿದೆ.