ದಿಲ್ಲಿ ಮೆಟ್ರೊ ನಿಲ್ದಾಣಗಳಲ್ಲಿ ಕೇಜ್ರಿವಾಲ್ ಗೆ ಬೆದರಿಕೆ ಒಡ್ಡುವ ಗೋಡೆ ಬರಹ
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮೇಲೆ ದಾಳಿ ನಡೆಸಲು ಬಿಜೆಪಿ ಹಾಗೂ ಪ್ರಧಾನಿ ಅವರು ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಆಪ್ ಸೋಮವಾರ ಆರೋಪಿಸಿದೆ.
ದಿಲ್ಲಿಯ ಮೆಟ್ರೊ ನಿಲ್ದಾಣಗಳ ಗೋಡೆಗಳಲ್ಲಿ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಒಡ್ಡುವ ಗೋಡೆ ಬರಹಗಳು ಕಾಣಿಸಿಕೊಂಡ ಬಳಿಕ ಆಪ್ ಬಿಜೆಪಿ ಹಾಗೂ ಪ್ರಧಾನಿ ಅವರ ವಿರುದ್ಧ ವಾಗ್ದಾಳಿ ನಡೆಸಿದೆ. ಅಲ್ಲದೆ, ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಣೆಗಾರರು ಎಂದು ಹೇಳಿದೆ.
ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದೆ ಆಪ್ ನಾಯಕ ಸಂಜಯ್ ಸಿಂಗ್, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜೈಲಿನಿಂದ ಹೊರ ಬಂದ ಬಳಿತ ಬಿಜೆಪಿ ಗಾಬರಿಗೊಂಡ ಸ್ಥಿತಿಯಲ್ಲಿದೆ. ಈಗ ಬಿಜೆಪಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಮಾರಣಾಂತಿಕ ದಾಳಿ ನಡೆಸಲು ಯೋಜಿಸುತ್ತಿದೆ. ಈ ಪಿತೂರಿ ಪ್ರಧಾನ ಮಂತ್ರಿ ಅವರ ಕಚೇರಿಯಿಂದಲೇ ನಡೆದಿದೆ. ಕೇಜ್ರಿವಾಲ್ ಅವರ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡುವ ಬರಹಗಳು ರಾಜೀವ್ ಚೌಕ್ ಹಾಗೂ ಪಟೇಲ್ ನಗರ್ ಮೆಟ್ರೋ ಸ್ಟೇಷನ್ ಗಳಲ್ಲಿ ಕಂಡು ಬಂದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ದ್ವೇಷ ಹಾಗೂ ಪ್ರತೀಕಾರದಲ್ಲಿ ಮುಳುಗಿದೆ. ಆದುದರಿಂದ ಅವರು ಕೇಜ್ರಿವಾಲ್ ಅವರನ್ನು ಹತ್ಯೆಗೈಯಲು ಪಿತೂರಿ ನಡೆಸುತ್ತಿದ್ದಾರೆ. ಅರವಿಂದ ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ, ಅದಕ್ಕೆ ಪ್ರಧಾನ ಮಂತ್ರಿ ಕಚೇರಿ, ಬಿಜೆಪಿ ಹಾಗೂ ನರೇಂದ್ರ ಮೋದಿ ಹೊಣೆಗಾರರು ಎಂದು ನಾನು ಸರಕಾರ, ಆಡಳಿತ ಹಾಗೂ ಚುನಾವಣಾ ಆಯೋಗಕ್ಕೆ ಹೇಳಲು ಬಯಸುತ್ತೇನೆ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ದಿಲ್ಲಿಯ ಮೆಟ್ರೊ ರೈಲು ನಿಲ್ದಾಣಗಳ ಒಳಗೆ ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಗೆ ಬೆದರಿಕೆ ಒಡ್ಡುವ ಗೋಡೆ ಬರಹಗಳನ್ನು ಬರೆಯಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ. ದಿಲ್ಲಿ ಸಚಿವೆ ಆತಿಶಿ, ರಾಜೀವ್ ಚೌಕ್, ಪಟೇಲ್ ಚೌಕ್ ಹಾಗೂ ಪಟೇಲ್ ನಗರ್ನಲ್ಲಿರುವ ಮೆಟ್ರೋ ನಿಲ್ದಾಣಗಳಲ್ಲಿ ಕೇಜ್ರಿವಾಲ್ ಅವರಿಗೆ ಬೆದರಿಕೆ ಒಡ್ಡುವ ಬರಹಗಳು ಕಂಡು ಬಂದಿವೆ ಎಂದಿದ್ದಾರೆ.
ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಬಂಧಿಸಲಾಯಿತು. ಅನಂತರ ತಿಹಾರ್ ಜೈಲಿನಲ್ಲಿ ಇರಿಸಲಾಯಿತು. ಅವರಿಗೆ 15 ದಿನಗಳ ಕಾಲ ಇನ್ಸುಲಿನ್ ನಿರಾಕರಿಸಲಾಯಿತು. ನಾವು ನ್ಯಾಯಾಲಯದ ಮೊರೆ ಹೋದೆವು. ಕೇಜ್ರಿವಾಲ್ ಅವರು ಜೈಲಿನಿಂದ ಹೊರಗೆ ಬಂದ ಬಳಿಕ ಅವರನ್ನು ಗುರಿಯಾಗಿಸಲು ಅವರು ಸ್ವಾತಿ ಮಲಿವಾಲ್ ಅವರನ್ನು ಬಳಸಿದರು. ಆದರೆ, ಹಲ್ಲೆ ಆರೋಪ ಸುಳ್ಳು ಎಂದು ವೀಡಿಯೊ ಬಹಿರಂಗಪಡಿಸಿದ ಬಳಿಕ ಆ ಪಿತೂರಿ ವಿಫಲವಾಯಿತು. ಈಗ ಅವರ ಜೀವಕ್ಕೆ ಅಪಾಯವಿದೆ ಎಂದು ಆತಿಶಿ ಹೇಳಿದ್ದಾರೆ.