ವಯನಾಡ್ ಭೂಕುಸಿತ: ಮೃತರ ಸಂಖ್ಯೆ 43ಕ್ಕೆ ಏರಿಕೆ; ನೂರಾರು ಮಂದಿ ಸಿಲುಕಿರುವ ಶಂಕೆ
ವಯನಾಡ್: ಇಂದು ಮುಂಜಾನೆ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗಿರಿಶ್ರೇಣಿಗಳಲ್ಲಿ ಭೂಕುಸಿತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಈ ಘಟನೆಯಲ್ಲಿ ನೂರಾರು ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ತೊಂದರೆಗೆ ಸಿಲುಕಿರುವ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದ್ದು, ಮತ್ತೊಂದು ಹೆಚ್ಚುವರಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ವಯನಾಡ್ ಗೆ ತಲುಪುವುದರಲ್ಲಿದೆ ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹೇಳಿದೆ.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪಡೆಯು ಮಾಡಿರುವ ಫೇಸ್ ಬುಕ್ ಪೋಸ್ಟ್ ಪ್ರಕಾರ, ಕಣ್ಣೂರು ರಕ್ಷಣಾ ಭದ್ರತಾ ಸಿಬ್ಬಂದಿಗಳಿಗೂ ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡಲು ವಯನಾಡ್ ತೆರಳುವಂತೆ ಸೂಚಿಸಲಾಗಿದೆ. ಭಾರಿ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗಳಿಗೆ ತೊಡಕುಂಟಾಗಿದೆ.
ಈ ನಡುವೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕರೆ ಮಾಡಿರುವ ವಯನಾಡ್ ಮಾಜಿ ಸಂಸದ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ, ಅವರಿಗೆ ನೆರವಿನ ಭರವಸೆ ನೀಡಿದ್ದಾರೆ.
ಕೇರಳ ಬಿಜೆಪಿ ಅಧ್ಯಕ್ಷ ಹಾಗೂ ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯಾಗಿರುವ ಕೆ.ಸುರೇಂದ್ರನ್ ಅವರು ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗೆ ನೆರವು ನೀಡುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಚೂರಲ್ಮಲ ಭೂಕುಸಿತದಿಂದ ಗಾಯಗೊಂಡು, ವಯನಾಡ್ ನಲ್ಲಿನ ಮೆಪ್ಪಾಡಿ ಬಳಿಯ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರನ್ನು ಭೇಟಿ ಮಾಡಿದ ಅರಣ್ಯ ಸಚಿವ ಎ.ಕೆ. ಸಸೀಂದ್ರನ್, ಅವರ ಯೋಗಕ್ಷೇಮ ವಿಚಾರಿಸಿದರು.
ವಯನಾಡ್: ಭಾರಿ ಮಳೆಯಿಂದಾಗಿ ಕೇರಳದ ವಯನಾಡ್ ಜಿಲ್ಲೆಯಲ್ಲಿ ಕೇವಲ 4 ಗಂಟೆಗಳ ಅಂತರದಲ್ಲಿ ಸಂಭವಿಸಿದ ಮೂರು ಭೂ ಕುಸಿತಗಳಿಂದ ಇಲ್ಲಿಯವರೆಗೆ ಕನಿಷ್ಠ ಪಕ್ಷ 43 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಮಣ್ಣಿನಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ.
ಮೆಪ್ಪಾಡಿ ಬಳಿಯ ಗಿರಿ ಶ್ರೇಣಿಗಳಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ಹಲವಾರು ರಕ್ಷಣಾ ತಂಡಗಳು ತೊಡಗಿಕೊಂಡಿವೆ.