ಇಂಡಿಯಾ ಮೈತ್ರಿಕೂಟ ತೊರೆದ ಕುರಿತು ನಿತೀಶ್ ಕುಮಾರ್ ಹೇಳಿದ್ದೇನು?
ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಗಾಗಿ ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಪ್ರಗತಿಯ ನಡೆ ಇರಲಿಲ್ಲ. ನಾನು ತೀವ್ರವಾಗಿ ಪ್ರಯತ್ನಿಸಿದೆ. ಆದರೆ, ಅವರು ಒಂದನ್ನೂ ಮಾಡಲಿಲ್ಲ. ಇಂದಿನವರೆಗೂ ಅವರು ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬುದನ್ನು ನಿರ್ಧರಿಸಿಲ್ಲ. ಇದೇ ಕಾರಣಕ್ಕೆ ನಾನವರನ್ನು ತೊರೆದೆ ಹಾಗೂ ನಾನು ಮೊದಲು ಎಲ್ಲಿದ್ದೆನೊ ಅಲ್ಲಿಗೆ ಮರಳಿದೆ. ನಾನು ಬಿಹಾರದ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿದ್ದೇನೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಾವು ಇಂಡಿಯಾ ಮೈತ್ರಿಕೂಟ ತೊರೆದ ಕುರಿತು ಸ್ಪಷನೆ ನೀಡಿದ್ದಾರೆ.
ಬಿಹಾರದ ಜಾತಿ ಗಣತಿ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತಾವು ಏನು ಮಾಡಿಲ್ಲವೊ ಅದರ ಲಾಭವನ್ನು ಪಡೆಯಲು ಕಾಂಗ್ರೆಸ್ ಸಂಸದರು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
“ಇದಕ್ಕಿಂತ ದೊಡ್ಡ ಸುಳ್ಳಿನ ಸಂಗತಿ ಬೇರೇನಾದರೂ ಇದೆಯೆ? ಜಾತಿ ಗಣತಿ ಯಾವಾಗ ಆಯಿತು ಎಂದು ಅವರೇನಾದದರೂ ಮರೆತರೆ? ನಾನಿದನ್ನು ಒಂಬತ್ತು ಪಕ್ಷಗಳ ಉಪಸ್ಥಿತಿಯಲ್ಲಿ ನಡೆಸಿದೆ. 2019-2020ರಲ್ಲಿ ನಾನು ಎಲ್ಲ ಕಡೆಯೂ ಸಾರ್ವಜನಿಕ ಸಭೆಗಳಲ್ಲಿ ಜಾತಿ ಗಣತಿ ಕುರಿತು ಮಾತನಾಡಿದೆ. ನಾನು ಪ್ರಧಾನಿಯನ್ನೂ ಭೇಟಿ ಮಾಡಿದೆ. ನಾನು ಜಾತಿ ಗಣತಿ ಮಾಡಿದೆ. ಅವರಾಗ (ಕಾಂಗ್ರೆಸ್) ಬೇರೆ ಬದಿಯಲ್ಲಿದ್ದರು. ಯಾರಾದರೂ ಸುಳ್ಳು ಲಾಭ ಪಡೆಯುವುದಿದ್ದರೆ ಪಡೆಯಲಿ” ಎಂದು ನಿತೀಶ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೂ ಮುನ್ನ, NDA ಮೈತ್ರಿಕೂಟವನ್ನು ಮರಳಿ ಸೇರ್ಪಡೆಯಾದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದ RJD ಹಾಗೂ ಕಾಂಗ್ರೆಸ್ ಪಕ್ಷಗಳು, ಜಾತಿ ಗಣತಿ ನಡೆದ ನಂತರ ಅವರು ತಾವೇ ಸಿಕ್ಕಿ ಹಾಕಿಕೊಂಡಿದ್ದರಿಂದ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ತೊರೆದರು ಎಂದು ಆರೋಪಿಸಿದ್ದವು.