ಎಕ್ಸಿಟ್ ಪೋಲ್‌ ಗೂ ಮೊದಲು ʼಸ್ಟಾಕ್ʼನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿದ ವಿದೇಶಿ ಹೂಡಿಕೆದಾರರಿಗೂ ಬಿಜೆಪಿಗೂ ಏನು ಸಂಬಂಧ? : ರಾಹುಲ್ ಗಾಂಧಿ ಪ್ರಶ್ನೆ

Update: 2024-06-06 13:21 GMT

 ರಾಹುಲ್ ಗಾಂಧಿ | PTI

ಹೊಸದಿಲ್ಲಿ : ಎಕ್ಸಿಟ್ ಪೋಲ್ ಘೋಷಣೆಯ ಒಂದು ದಿನ ಮೊದಲು ಶೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿ, ಕೋಟಿಗಟ್ಟಲೆ ಲಾಭ ಮಾಡಿಕೊಂಡ ಶಂಕಿತ ವಿದೇಶಿ ಹೂಡಿಕೆದಾರರಿಗೂ ಬಿಜೆಪಿಗೂ ಏನು ಸಂಬಂಧ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಈ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆಗೆ ಅವರು ಒತ್ತಾಯಿಸಿದ್ದಾರೆ.

ದಿಲ್ಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿದ ಮಾತನಾಡಿದರು. “ಇದೇ ಮೊದಲ ಬಾರಿಗೆ ಚುನಾವಣೆಯ ಪ್ರಚಾರದ ಸಮಯದಲ್ಲಿ ಪ್ರಧಾನಿ, ಗೃಹ ಸಚಿವ, ವಿತ್ತ ಸಚಿವೆ ಶೇರು ಮಾರುಕಟ್ಟೆಯ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಿ ಸುಮಾರು ನಾಲ್ಕು ಬಾರಿ ಶೇರು ಮಾರುಕಟ್ಟೆಯನ್ನು ಉಲ್ಲೇಖಿಸಿ, ಅದು ವೇಗವಾಗಿ ಬೆಳೆಯಲಿದೆ, ಹೂಡಿಕೆ ಮಾಡಿ ಎಂದು ಸಲಹೆ ನೀಡಿದ್ದರು” ಎಂದು ರಾಹುಲ್ ಹೇಳಿದ್ದಾರೆ.

“ಜೂನ್ 4ಕ್ಕಿಂತ ಮುಂಚೆ ಶೇರು ಖರೀದಿಸಿ ಎಂದು ಮೇ 13 ರಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಮೇ 19ಕ್ಕೆ ಅಮಿತ್ ಶಾ ಶೇರು ಮಾರುಕಟ್ಟೆ ಜೂನ್ 4 ಕ್ಕೆ ದಾಖಲೆ ನಿರ್ಮಿಸಲಿದೆ ಎಂದಿದ್ದರು. ಜೂನ್ 1 ಕ್ಕೆ ಕೊನೆಯ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಮಾಧ್ಯಮಗಳ ಸುಳ್ಳು ಎಕ್ಸಿಟ್ ಪೋಲ್ ಗಳು ಬಂದವು. ಬಿಜೆಪಿಯ ಅಧಿಕೃತ ಸಮೀಕ್ಷೆಗಳು 220 ಸ್ಥಾನಗಳನ್ನು ಅವರಿಗೆ ನೀಡಿದ್ದವು. ಈ ಮಾಹಿತಿ ಬಿಜೆಪಿ ನಾಯಕರ ಕೈಯ್ಯಲ್ಲಿ ಇತ್ತು. ಆದರೂ ಸುಳ್ಳು ಸಮೀಕ್ಷೆಗಳು ಹೊರಬಂದವು. ಪರಿಣಾಮವಾಗಿ ಜೂನ್ 3ಕ್ಕೆ ಶೇರು ಮಾರುಕಟ್ಟೆಯ ವಹಿವಾಟು ಒಮ್ಮೇಲೆ ಗಗನಕ್ಕೇರಿತು” ಎಂದು ರಾಹುಲ್ ಗಾಂಧಿ ಅಂಕಿ ಅಂಶಗಳನ್ನು ವಿವರಿಸಿದರು.

“ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿರುವ ಐದು ಕೋಟಿ ಕುಟುಂಬಗಳಿಗೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ನಿರ್ದಿಷ್ಟ ಹೂಡಿಕೆ ಸಲಹೆಯನ್ನು ಏಕೆ ನೀಡಿದ್ದಾರೆ? ಹೂಡಿಕೆ ಸಲಹೆ ನೀಡುವುದು ಅವರ ಕೆಲಸವೇ? ಆ ಸಂದರ್ಶನಗಳನ್ನು ಶೇರು ಮಾರುಕಟ್ಟೆಯಲ್ಲಿ ಸ್ಟಾಕ್ಗಳನ್ನು ತಿರುಚಿದ್ದಕ್ಕಾಗಿ SEBI ತನಿಖೆಗೆ ಒಳಪಟ್ಟಿರುವ ಉದ್ಯಮಿಯ ಒಡೆತನದ ಮಾಧ್ಯಮಕ್ಕೆ ನೀಡಲಾಗಿತ್ತು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಮನ ಸೆಳೆದರು.

“ಸುಳ್ಳು ಅಂಕಿ ಅಂಶಗಳಿದ್ದ ಎಕ್ಸಿಟ್ ಪೋಲ್‌ಗಳನ್ನು ಘೋಷಿಸುವ ಒಂದು ದಿನ ಮೊದಲು ಶೇರು ಮಾರುಕಟ್ಟೆಯಲ್ಲಿ ದೊಡ್ಡಮಟ್ಟದಲ್ಲಿ ಹೂಡಿಕೆ ಮಾಡಿದ ಶಂಕಿತ ವಿದೇಶಿ ಹೂಡಿಕೆದಾರರಿಗೂ ಬಿಜೆಪಿಗೂ ಇರುವ ಸಂಬಂಧವೇನು? ಈ ಬಗ್ಗೆ ನಾವು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News