ಎಲ್ಲಿದ್ದಾರೆ ಆಪ್ ನ ಏಳು ರಾಜ್ಯಸಭಾ ಸಂಸದರು ?
ಹೊಸದಿಲ್ಲಿ: ಆಪ್ ನ ರಾಜ್ಯಸಭಾ ಸಂಸದೆ, ದಿಲ್ಲಿ ಮಹಿಳಾ ಆಯೋಗದ ನಿಕಟಪೂರ್ವ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮೇಲೆ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಹಲ್ಲೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿದ್ದು, ಇದು ದೇಶಾದ್ಯಂತ ಬಾರೀ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಈಗ ಬಿಭವ್ ಕುಮಾರ್ ಮೇಲೆ ಎಫ್ ಐ ಆರ್ ದಾಖಲಾಗಿದೆ.
ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದಾಗ ಸದಾ ಸುದ್ದಿಯಲ್ಲಿರುತ್ತಿದ್ದ ಸ್ವಾತಿ ಮಲಿವಾಲ್ ಈ ವರ್ಷ ಜನವರಿಯಲ್ಲಿ ರಾಜ್ಯಸಭಾ ಸದಸ್ಯೆಯಾದ ಮೇಲೆ ರಾಜಕೀಯವಾಗಿ ಹೆಚ್ಚು ಕಾಣಿಸಿಕೊಂಡೇ ಇಲ್ಲ. ಆಯೋಗದ ಅಧ್ಯಕ್ಷೆಯಾಗಿ ಪಕ್ಷದ ಪ್ರಮುಖ ಮಹಿಳಾ ಧ್ವನಿಯಾಗಿದ್ದ ಸ್ವಾತಿ ಲೋಕಸಭಾ ಚುನಾವಣೆ ನಡೆಯುತ್ತಿದ್ದರೂ ಎಲ್ಲೂ ಕಾಣಿಸಲೇ ಇಲ್ಲ. ಅಲ್ಲದೇ ಕೇಜ್ರಿವಾಲ್ ಜೈಲಿನಲ್ಲಿದ್ದಾಗ ಹಲವು ವಾರಗಳ ಕಾಲ ಸ್ವಾತಿ ಅಮೆರಿಕದಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಚುನಾವಣೆಯುತ್ತಿದ್ದರೂ, ಪಕ್ಷದ ನಾಯಕ ಜೈಲಿನಲ್ಲಿದ್ದರೂ ಅವರು ಭಾರತಕ್ಕೆ ತಕ್ಷಣ ವಾಪಸ್ ಬಂದಿರಲಿಲ್ಲ.
ಹೀಗೆ ಪಕ್ಷಕ್ಕೆ ಸಂಕಷ್ಟದ ಹೊತ್ತಲ್ಲೇ ಕೈಕೊಟ್ಟು ಕಾಣೆಯಾಗಿರುವ ರಾಜ್ಯಸಭಾ ಸಂಸದರು ಸ್ವಾತಿ ಮಲಿವಾಲ್ ಒಬ್ಬರೇ ಅಲ್ಲ. ಆಗಾಗ ಟಿವಿ ಡಿಬೇಟ್ ಗಳಲ್ಲಿ ಮಿಂಚುತ್ತಿದ್ದ ಯುವ ನಾಯಕ, ರಾಜ್ಯ ಸಭಾ ಸಂಸದ ರಾಘವ್ ಛಡ್ದಾ ಕೂಡ ಈ ಚುನಾವಣೆ ಘೋಷಣೆಯಾದ ಬಳಿಕ ಎಲ್ಲೂ ಕಾಣುತ್ತಲೇ ಇಲ್ಲ. ಪಂಜಾಬ್ ವಿಧಾನಸಭಾ ಚುನಾವಣೆಯ ಪೂರ್ಣ ಉಸ್ತುವಾರಿ ರಾಘವ್ ಛಡ್ದಾ ಅವರಿಗೆ ನೀಡಲಾಗಿತ್ತು. ಆದರೆ ಸಣ್ಣ ವಯಸ್ಸಲ್ಲೇ ಇಷ್ಟೆಲ್ಲಾ ಸ್ಥಾನಮಾನ ಹೊಣೆಗಾರಿಕೆ ಕೊಟ್ಟ ಪಕ್ಷ ಸಂಕಷ್ಟದಲ್ಲಿರುವಾಗ ಈ ಯುವ ಸಂಸದ ನಾಪತ್ತೆಯಾಗಿದ್ದಾರೆ ಎಂದು ಟೀಕೆಗೆ ಗುರಿಯಾಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ರಾಘವ್ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರನ್ನು ವಿವಾಹವಾಗಿದ್ದರು.
ರಾಘವ್ ಮಾತ್ರ ಅಲ್ಲ ಆಮ್ ಆದ್ಮಿಯ ಹತ್ತು ಮಂದಿ ರಾಜ್ಯ ಸಭಾ ಸಂಸದರಲ್ಲಿ ಮೂವರನ್ನು ಬಿಟ್ಟರೆ ಉಳಿದವರು ಯಾರೂ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಕಾಣಿಸುತ್ತಲೇ ಇಲ್ಲ.
ಕೇಜ್ರಿವಾಲ್ ಆಪ್ತ, ಮದ್ಯ ಹಗರಣದಲ್ಲಿ ಬಂಧಿತರಾಗಿ ಇತ್ತೀಚಿಗೆ ಜೈಲಿನಿಂದ ಬಿಡುಗಡೆಯಾದ ಸಂಜಯ್ ಸಿಂಗ್, ಎನ್ ಡಿ ಗುಪ್ತ ಹಾಗು ಸಂದೀಪ್ ಪಾಠಕ್. ಈ ಮೂವರನ್ನು ಬಿಟ್ಟರೆ ಉಳಿದ ಏಳು ರಾಜ್ಯಸಭಾ ಸಂಸದರು ಕಾಣಲು ಸಿಗೋದೇ ಇಲ್ಲ ಎಂಬಂತಾಗಿದೆ. ಈ ಪೈಕಿ ಎನ್ ಡಿ ಗುಪ್ತ ಸಕ್ರಿಯವಾಗಿ ಕಾಣಿಸುತ್ತಾರಾದರೂ ಅವರಿಗೆ ವಯಸ್ಸಾಗಿದೆ, ಆರೋಗ್ಯವೂ ಸರಿಯಿಲ್ಲ.
ಈ ಮೂವರನ್ನು ಹೊರತುಪಡಿಸಿದರೆ ಹೆಚ್ಚಿನ ಆಪ್ ರಾಜ್ಯಸಭಾ ಸಂಸದರು ಒಂದೋ ಉದ್ಯಮಿಗಳು, ಅಥವಾ ಕ್ರೀಡಾಪಟುಗಳು. ಬಹುತೇಕ ಎಲ್ಲರೂ ದಿಲ್ಲಿ ಅಥವಾ ಪಂಜಾಬ್ ನಿಂದಲೇ ಆಯ್ಕೆಯಾಗಿದ್ದಾರೆ. ಪಂಜಾಬ್ ನ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿಯ ಸ್ಥಾಪಕ ಹಾಗು ಚಾನ್ಸಲರ್ ಅಶೋಕ್ ಕುಮಾರ್ ಮಿತ್ತಲ್, ಪ್ರಮುಖ ಪರಿಸರವಾದಿ ಬಲ್ಬಿರ್ ಸಿಂಗ್ ಸೀಚೆವಾಲ್, ಜವಳಿ ರಫ್ತುದಾರ ಪಂಜಾಬ್ ನ ಪ್ರಮುಖ ಉದ್ಯಮಿ ಸಂಜೀವ್ ಅರೋರಾ, ಸನ್ ಗ್ರೂಪ್ ನ ಮಾಲಕ ವಿಕ್ರಂ ಜಿತ್ ಸಿಂಗ್ ಸೈನಿ ಇವರೆಲ್ಲರೂ ಉದ್ಯಮಿಗಳು. ಇನ್ನೊಬ್ಬ ರಾಜ್ಯಸಭಾ ಸಂಸದ ಕ್ರಿಕೆಟರ್ ಹರ್ಭಜನ್ ಸಿಂಗ್.
ಕೇಜ್ರಿವಾಲ್ ಸಹಿತ ಪ್ರಮುಖ ಆಪ್ ನಾಯಕರ ಬಂಧನವಾಗಿ ದೊಡ್ಡ ವಿವಾದವಾಗುತ್ತಿದ್ದರೆ ಅದೇ ಪಕ್ಷದ ಈ ಎಲ್ಲ ರಾಜ್ಯಸಭಾ ಸಂಸದರು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತಿದ್ದಾರೆ ಎಂದು ಅವರ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.
ಸಂಜೀವ್ ಅರೋರಾ ಅವರು ಕೇಜ್ರಿವಾಲ್ ರನ್ನು ಬಂಧಿಸಬಹುದು, ಅವರ ಸಿದ್ಧಾಂತವನ್ನಲ್ಲ ಅಂತ ಒಂದು ಟ್ವೀಟ್ ಮಾಡಿ ಸುಮ್ಮನಾಗಿದ್ದಾರೆ. ಮೀಡಿಯಾದವರು ಕೇಳಿದಾಗ ನ್ಯಾಯಲಯದಲ್ಲಿರುವ ವಿಷಯದ ಬಗ್ಗೆ ಮಾತಾಡಲ್ಲ ಎಂದಿದ್ದಾರೆ.
ಇನ್ನೊಬ್ಬ ಸಂಸದ ಬಲ್ಬಿರ್ ಸಿಂಗ್ ಸೀಚೆವಾಲ್ ಅವರು ನಾನು ಮೊದಲೇ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ನಾನು ರಾಜಕೀಯ ವಿಷಯಗಳಿಗೆ ಬರೋದಿಲ್ಲ, ಏನಿದ್ದರೂ ಪರಿಸರ ಹಾಗು ನೀರಿನ ವಿಷಯದಲ್ಲಿ ಮಾತ್ರ ನಾನಿರುತ್ತೇನೆ ಎಂದು ಹೇಳಿದ್ದೇನೆ ಎಂದು ಹೇಳಿದ್ದಾರೆ.
ಹರ್ಭಜನ್ ಸಿಂಗ್ ರಾಜ್ಯಸಭಾ ಸದಸ್ಯರಾಗಿದ್ದರೂ ರಾಜಕೀಯಕ್ಕೂ ತನಗೂ ಸಂಬಂಧವೇ ಇಲ್ಲದಂತೆ ಐಪಿಎಲ್ ನಲ್ಲಿ ಕಮೆಂಟರಿ ಮಾಡುತ್ತಿದ್ದಾರೆ. ಈಗ ನೋಡಿದರೆ ಅಮೆರಿಕದಿಂದ ಮರಳಿರುವ ಸ್ವಾತಿ ಮಲಿವಾಲ್ ವಿಷಯದಲ್ಲಿ ಇನ್ನೊಂದು ವಿವಾದವಾಗಿದೆ.
ಎಲ್ಲ ಪಕ್ಷಗಳು ರಾಜ್ಯಸಭಾ ಸ್ಥಾನವನ್ನು ಪಾರ್ಟಿ ಫಂಡ್ ಗಾಗಿ ಮಾರಿಕೊಳ್ಳುತ್ತವೆ ಎಂಬ ದೂರು ಸಾಮಾನ್ಯ. ಆದರೆ ಎಲ್ಲರಿಗಿಂತ ಭಿನ್ನ ಎಂದು ಹೇಳಿಕೊಳ್ಳುವ ಆಮ್ ಆದ್ಮಿ ಪಕ್ಷವೂ ಹಾಗೆ ಮಾಡಿದೆಯೇ ? ನಮಗೊಂದು ಸಂಸದ ಸೀಟು ಕೊಡಿ, ನಿಮ್ಮ ಬೇರೆ ಯಾವ ರಾಜಕೀಯಕ್ಕೂ ನಾವಿಲ್ಲ ಎಂದವರಿಗೆ ಅದು ರಾಜ್ಯಸಭಾ ಸ್ಥಾನ ಕೊಟ್ಟು ಬಿಟ್ಟಿದೆಯೇ ? ಅದಕ್ಕೆ ಆಗಿರುವ ವ್ಯವಹಾರ ಎಂಥದ್ದು ? ಇಂಥ ಹೊತ್ತಲ್ಲೂ ಪಕ್ಷದ ಜೊತೆ ನಿಲ್ಲದ ಸಂಸದರು ಯಾಕಾದರೂ ಒಂದು ಪಕ್ಷಕ್ಕೆ ಬೇಕು ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.