ಗಣರಾಜ್ಯ ದಿನದಂದು ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ, ಆದರೆ ಸ್ವಾತಂತ್ರ್ಯದಿನದಂದು ಅದನ್ನು ಆರೋಹಿಸಲಾಗುತ್ತದೆ ಏಕೆ?

Update: 2024-01-26 11:19 GMT

Photo: PTI

ಹೊಸದಿಲ್ಲಿ: ಭಾರತವು ಇಂದು ಗಣರಾಜ್ಯೋತ್ಸವವನ್ನು ಆಚರಿಸಿದೆ. ಸಂವಿಧಾನವನ್ನು ಅಂಗೀಕರಿಸಿ 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದಿನ ಗಣತಂತ್ರ ದಿನವು ವಿಶೇಷ ಮಹತ್ವವನ್ನು ಹೊಂದಿದೆ. ಭವ್ಯ ಪರೇಡ್‌ಗಳು, ವರ್ಣರಂಜಿತ ಸ್ತಬ್ಧಚಿತ್ರಗಳು ಮತ್ತು ವಿವಿಧ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಗಣರಾಜ್ಯೋತ್ಸವವನ್ನು ಸಂಭ್ರಮಿಸಲಾಗುತ್ತದೆ. ಆದರೆ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ, ಆದರೆ ಧ್ವಜಾರೋಹಣವನ್ನು ನಡೆಸುವುದಿಲ್ಲ ಎನ್ನುವುದು ನಿಮಗೆ ಗೊತ್ತೇ? ಸಾಮಾನ್ಯವಾಗಿ ‘ಫ್ಲ್ಯಾಗ್ ಹೊಯಿಸ್ಟಿಂಗ್ (ಧ್ವಜಾರೋಹಣ)’ ಮತ್ತು ಫ್ಲ್ಯಾಗ್ ಅನ್‌ಫರ್ಲಿಂಗ್ (ಧ್ವಜವನ್ನು ಹಾರಿಸುವುದು)’ ಪದಗಳು ಪರಸ್ಪರ ವಿನಿಮಯಗೊಳ್ಳುತ್ತವೆಯಾದರೂ ಇವು ರಾಷ್ಟ್ರಧ್ವಜವನ್ನು ಪ್ರಸ್ತುತಗೊಳಿಸುವಲ್ಲಿ ವಿಭಿನ್ನ ತಂತ್ರಗಳನ್ನು ಪ್ರತಿನಿಧಿಸುತ್ತವೆ.

ಭಾರತದಲ್ಲಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ಧ್ವಜವನ್ನು ಹೇಗೆ ಪ್ರಸ್ತುತ ಪಡಿಸಲಾಗುತ್ತದೆ ಎನ್ನುವುದರ ಸೂಕ್ಷ್ಮ, ಆದರೆ ಗಮನಾರ್ಹ ವ್ಯತ್ಯಾಸಗಳು ಇಲ್ಲಿವೆ.....

ಈ ಸಮಾರಂಭಗಳಲ್ಲಿ ಧ್ವಜವನ್ನು ಇರಿಸುವುದರಲ್ಲಿ ಹಾರಾಟ ಮತ್ತು ಆರೋಹಣದ ನಡುವಿನ ನಿರ್ಣಾಯಕ ವ್ಯತ್ಯಾಸವಿದೆ. ಧ್ವಜ ಹಾರಾಟ ಪ್ರಕ್ರಿಯೆಯು ಧ್ವಜಸ್ತಂಭಕ್ಕೆ ಕಟ್ಟಲಾಗಿರುವ ಮಡಚಿದ ಧ್ವಜವನ್ನು ಅರಳಿಸುವುದನ್ನು ಒಳಗೊಂಡಿದ್ದರೆ ಧ್ವಜಾರೋಹಣ ಪ್ರಕ್ರಿಯೆಯು ಹಗ್ಗದ ನೆರವಿನಿಂದ ಮಡಚಿದ ಧ್ವಜವನ್ನು ಸ್ತಂಭದ ಮೇಲೆ ಏರಿಸಿ ಬಳಿಕ ಅದನ್ನು ಅರಳಿಸುವುದನ್ನು ಒಳಗೊಂಡಿರುತ್ತದೆ.

ಗಣರಾಜ್ಯೋತ್ಸವ ದಿನದಂದು ಧ್ವಜಸ್ತಂಭದ ಮೇಲೆ ಕಟ್ಟಲಾದ ಮಡಚಿದ ಧ್ವಜವನ್ನು ರಾಷ್ಟ್ರಪತಿಗಳು ಅರಳಿಸುತ್ತಾರೆ. ಗಣತಂತ್ರ ದಿನವು 1950ರಲ್ಲಿ ಭಾರತೀಯ ಸಂವಿಧಾನದ ಅಂಗೀಕಾರವನ್ನು ಸೂಚಿಸುತ್ತದೆ. ಧ್ವಜವನ್ನು ಹಾರಿಸುವುದು ಸಂವಿಧಾನದಲ್ಲಿ ಹೇಳಲಾಗಿರುವ ತತ್ವಗಳಿಗೆ ಬದ್ಧತೆಯ ನವೀಕರಣವನ್ನು ಸೂಚಿಸುತ್ತದೆ ಮತ್ತು ವಸಾಹತುಶಾಹಿ ಆಳ್ವಿಕೆಯಿಂದ ಸಾರ್ವಭೌಮ,ಪ್ರಜಾಪ್ರಭುತ್ವ ಗಣರಾಜ್ಯಕ್ಕೆ ಬದಲಾವಣೆಯನ್ನು ಬೆಟ್ಟು ಮಾಡುತ್ತದೆ.

ಇದು ಸ್ವಾತಂತ್ರ್ಯ ದಿನಕ್ಕಿಂತ ಭಿನ್ನವಾಗಿದೆ. ಅಂದು ಪ್ರಧಾನ ಮಂತ್ರಿಗಳು ಕಂಬದ ಕೆಳಗಿನಿಂದ ಧ್ವಜಾರೋಹಣವನ್ನು ನೆರವೇರಿಸುತ್ತಾರೆ. ಸಾಮಾನ್ಯವಾಗಿ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣವು ಮಿಲಿಟರಿ ಬ್ಯಾಂಡ್ ಅಥವಾ ಸಿವಿಲ್ ಬ್ಯಾಂಡ್ ಒಳಗೊಂಡ ಸಮಾರಂಭವಾಗಿದ್ದು, ಧ್ವಜಾರೋಹಣಗೊಳ್ಳುವಾಗ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ. ಸ್ವಾತಂತ್ರ್ಯ ದಿನದಂದು ಧ್ವಜಾರೋಹಣವು ಹೊಸರಾಷ್ಟ್ರದ ಉದಯ,ದೇಶಭಕ್ತಿ ಮತ್ತು ವಸಾಹತುಶಾಹಿ ಆಡಳಿತದಿಂದ ಸ್ವಾತಂತ್ರ್ಯವನ್ನು ಸಂಕೇತಿಸುತ್ತದೆ.

ಸಂವಿಧಾನ ಅಂಗೀಕಾರಗೊಂಡಾಗ ಅದಾಗಲೇ ಭಾರತವು ಸ್ವತಂತ್ರಗೊಂಡಿತ್ತು,ಹೀಗಾಗಿ ಅಂದು ಧ್ವಜಾರೋಹಣ ನಡೆಯವುದಿಲ್ಲ. ಬದಲಿಗೆ ಕಂಬಕ್ಕೆ ಮೊದಲೇ ಕಟ್ಟಲಾದ ಧ್ವಜವನ್ನು ಅರಳಿಸಲಾಗುತ್ತದೆ.

1947,ಆ.15ರಂದು ಆಗ ತಾನೇ ದೇಶವು ಸ್ವತಂತ್ರಗೊಂಡಿತ್ತು. ಅಂದು ಬ್ರಿಟನ್ ಧ್ವಜವನ್ನು ಕೆಳಕ್ಕಿಳಿಸಲಾಗಿತ್ತು ಮತ್ತು ಭಾರತದ ಧ್ವಜವನ್ನು ಮೇಲಕ್ಕೆ ಏರಿಸಿ ಅರಳಿಸಲಾಗಿತ್ತು. ಇದೇ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News