ಭಾರತದ ಭದ್ರತಾ ಹಿತಾಸಕ್ತಿಗೆ ಎಂದೂ ಧಕ್ಕೆ ತರುವುದಿಲ್ಲ: ಮಾಲ್ಡೀವ್ಸ್ ಅಧ್ಯಕ್ಷ

Update: 2024-10-07 04:12 GMT

PC: x.com/DrSJaishankar

ಹೊಸದಿಲ್ಲಿ: ಭಾರತದ ಭದ್ರತಾ ಹಿತಾಸಕ್ತಿಗೆ ಧಕ್ಕೆ ಉಂಟಾಗುವ ಏನನ್ನೂ ಮಾಡುವುದಿಲ್ಲ ಎಂದು ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಸ್ಪಷ್ಟಪಡಿಸಿದ್ದಾರೆ. ಭಾರತಕ್ಕೆ ಮೊದಲ ಭೇಟಿ ನೀಡಿರುವ ಅವರು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುವ ಸುಳಿವು ನೀಡಿದ್ದಾರೆ.

ಭಾರತದ ಪಾಲಿಗೆ ಅತ್ಯಂತ ಆಯಕಟ್ಟಿನ ಪ್ರದೇಶದಲ್ಲಿರುವ ದ್ವೀಪರಾಷ್ಟ್ರ ಚೀನಾ ಜತೆಗೆ ಸಂಬಂಧ ಬಲಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ಆತಂಕದ ಕಾರ್ಮೋಡದ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಮವಾರ ಭೇಟಿ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಮಾಲ್ಡೀವ್ಸ್ ಇತರ ದೇಶಗಳ ಜತೆಗಿನ ಸಹಕಾರವನ್ನು ವೃದ್ಧಿಸಿಕೊಳ್ಳಲಿದೆ. ಆದರೆ ಈ ಪ್ರದೇಶದ ಭದ್ರತೆ ಮತ್ತು ಸ್ಥಿರತೆಗೆ ಧಕ್ಕೆ ತರುವಂಥ ಯಾವ ಕ್ರಮವನ್ನೂ ಮಾಲ್ಡೀವ್ಸ್ ಕೈಗೊಳ್ಳುವುದಿಲ್ಲ ಎಂಬ ಭರವಸೆ ನೀಡಿದರು.

ಮಾಲ್ಡೀವ್ಸ್ ಪಾಲಿಗೆ ಭಾರತ ಮೌಲಿಕ ಪಾಲುದಾರ ಹಾಗೂ ಸ್ನೇಹಿತ. ಪರಸ್ಪರ ಗೌರವ ಮತ್ತು ಪರಸ್ಪರ ಹಂಚಿಕೆಯ ಹಿತಾಸಕ್ತಿಯ ಆಧಾರದಲ್ಲಿ ಈ ಸಂಬಂಧ ಏರ್ಪಟ್ಟಿದೆ. ಭಾರತದ ಜತೆ ಪ್ರಬಲ ಹಾಗೂ ಪ್ರಮುಖ ಸಂಬಂಧವನ್ನು ಮುಂದುವರಿಸಲಿದೆ ಹಾಗೂ ಪ್ರಾದೇಶಿಕ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಜಂಟಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಮಾಲ್ಡೀವ್ಸ್ ಫಸ್ಟ್ ನೀತಿಯ ಅನ್ವಯ, ತಮ್ಮ ದೇಶ ಭಾರತದ ಜತೆಗಿನ ಸುಧೀರ್ಘ ಮತ್ತು ವಿಶ್ವಾಸಾರ್ಹ ಸಂಬಂಧಕ್ಕೆ ಆದ್ಯತೆ ನೀಡಲಿದೆ. "ಇತರ ದೇಶಗಳ ಜತೆಗಿನ ನಮ್ಮ ತೊಡಗಿಸಿಕೊಳ್ಳುವಿಕೆಯು ಭಾರತದ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆ ತರುವುದಿಲ್ಲ ಎಂಬ ವಿಶ್ವಾಸ ನಮಗಿದೆ. ಭಾರತದ ಜತೆಗಿನ ಪ್ರಬಲ ಹಾಗೂ ಪ್ರಮುಖ ಸಂಬಂಧವನ್ನು ಮಾಲ್ಡೀವ್ಸ್ ಮುಂದುವರಿಸಲಿದೆ" ಎಂದು ಸ್ಪಷ್ಟವಾಗಿ ನುಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News