INDIA ಒಕ್ಕೂಟದ ಸದಸ್ಯರೊಂದಿಗೆ ಮಾತನಾಡದೇ ಟಿಡಿಪಿ ಮತ್ತು ಜೆಡಿಯು ಜೊತೆಗಿನ ಮೈತ್ರಿ ಬಗ್ಗೆ ಉತ್ತರಿಸುವುದಿಲ್ಲ : ರಾಹುಲ್ ಗಾಂಧಿ
ಹೊಸದಿಲ್ಲಿ : INDIA ಒಕ್ಕೂಟದ ಪಾಲುದಾರರೊಂದಿಗೆ ಮಾತನಾಡದೆ ಟಿಡಿಪಿ ಮತ್ತು ಜೆಡಿಯು ಜೊತೆಗಿನ ಮೈತ್ರಿ ಬಗ್ಗೆ ಉತ್ತರಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ದಿಲ್ಲಿಯ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಮಂಗಳವಾರ ಸಂಜೆ ಚುನಾವಣಾ ಫಲಿತಾಂಶದ ಬಳಿಕ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸರಕಾರ ರಚನೆಗೆ ಮುಂದಾಗುವಿರಾ ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮದು INDIA ಒಕ್ಕೂಟದ ಭಾಗವಾಗಿರುವ ಪಕ್ಷ. ನಮ್ಮ ಪಾಲುದಾರರ ಜೊತೆ ನಾನು ಮಾತನಾಡದೇ ಈ ಪ್ರಶ್ನೆಗೆ ಉತ್ತರಿಸುವುದಿಲ್ಲ. ನಾಳೆ ನಮ್ಮ ಒಕ್ಕೂಟದ ಸಭೆ ನಿಗದಿಯಾಗಿದೆ. ಅವರ ಅಭಿಪ್ರಾಯಗಳನ್ನು ಕೇಳಿ ಮುಂದಿನ ನಡೆಯ ಬಗ್ಗೆ ತಿಳಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ಈ ಚುನಾವಣೆಯಲ್ಲಿ ನಾವು ಬಿಜೆಪಿ ಮತ್ತು ಎನ್‌ಡಿಎ ಸರಕಾರ ದುರುಪಯೋಗ ಪಡಿಸಿಕೊಂಡ ಸ್ವತಂತ್ರ ಸಂಸ್ಥೆಗಳ ವಿರುದ್ಧ ಹೋರಾಡಿದ್ದೇವೆ. ನಮ್ಮ ಬ್ಯಾಂಕ್ ಖಾತೆಗಳನ್ನು ದುರುಪಯೋಗ ಪಡಿಸಿಕೊಂಡರು. ನಮ್ಮ ಒಕ್ಕೂಟದ ಸದಸ್ಯರನ್ನು ಜೈಲಿಗಟ್ಟಿ ತೊಂದರೆ ನೀಡಿದರು. ಆದರೂ ನಮಗೆ ಜನರ ಮೇಲೆ ನಮಗೆ ನಂಬಿಕೆಯಿತ್ತು. ಜನರು ಅದಕ್ಕೆಲ್ಲ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ" ಎಂದರು.
"ಜನರಿಗೆ ನರೇಂದ್ರ ಮೋದಿಯವರ ಬಗ್ಗೆ ಇರುವ ತಿರಸ್ಕಾರ ಈ ಚುನಾವಣೆಯಲ್ಲಿ ಹೊರಬಂದಿದೆ. ಇವತ್ತು ನೀವು ಅದಾನಿ ಸ್ಟಾಕ್‌ಗಳನ್ನು ನೋಡಿದ್ದೀರಾ? ಎಲ್ಲವೂ ಬಿದ್ದು ಹೋಗಿದೆ. ಮೋದಿಯಿಲ್ಲದಿದ್ದರೆ ಅವರ್ಯಾರೂ ಇಲ್ಲ ಎನ್ನುವುದು ಇಂದು ಸಾಬೀತುಪಡಿಸಿದೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿರುವುದರಿಂದ ಯಾವ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎನ್ನುವ ಕುರಿತು ಇನ್ನೂ ಆಲೋಚಿಸಿಲ್ಲ. ಎರಡೂ ಕ್ಷೇತ್ರದ ಜನತೆಗೆ ಧನ್ಯವಾದಗಳು. ಈ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಎರಡೂ ಕ್ಷೇತ್ರಗಳನ್ನೂ ಉಳಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮುಗುಳ್ನಕ್ಕರು.
"ಉತ್ತರಪ್ರದೇಶದ ಜನರು ಅಚ್ಚರಿಯ ಫಲಿತಾಂಶ ನೀಡಿದ್ದಾರೆ. ಭಾರತದ ರಾಜಕಾರಣದ ಗತಿಯನ್ನು ಗಮನಿಸಿ, ಉತ್ತರ ಪ್ರದೇಶವು ಸಂವಿಧಾನದ ರಕ್ಷಣೆ ಮಾಡಿದೆ. ನಿಮಗೆ ವಿಶೇಷ ಧನ್ಯವಾದಗಳು. ಉತ್ತರಪ್ರದೇಶದಂತೆಯೇ ಇತರ ಕೆಲವು ರಾಜ್ಯಗಳೂ ಉತ್ತಮ ಫಲಿತಾಂಶ ನೀಡಿವೆ. ಆದರೆ ಉತ್ತರಪ್ರದೇಶದ ಜನರ ನಡೆ ಗಮನಾರ್ಹವಾದುದು" ಎಂದು ರಾಹುಲ್ ಗಾಂಧಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ವಕ್ತಾರ ಜೈರಾಂ ರಮೇಶ್ ಇದ್ದರು.