“ಆರ್ಥಿಕ ಸುಧಾರಣೆಯಲ್ಲಿ ಅರ್ಧ ಸಿಂಹ, ಬಾಬರಿ ವಿಚಾರದಲ್ಲಿ ಅರ್ಧ ಮನುಷ್ಯನಾದ ನರಸಿಂಹರಾವ್”: ಮಣಿಶಂಕರ್ ಅಯ್ಯರ್

Update: 2024-01-21 09:58 GMT

Photo: ThePrint

ಹೊಸದಿಲ್ಲಿ: ಡಿಸೆಂಬರ್, 1992ರಲ್ಲಿ ಕರಸೇವಕರು ಬಾಬರಿ ಮಸೀದಿಯನ್ನು ಧ‍್ವಂಸಗೊಳಿಸಲು ಸಿದ್ಧವಾಗಿದ್ದಾರೆ ಎಂಬ ಸುದ್ದಿ ತಿಳಿದು ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಚಿಂತಿತರಾಗಿದ್ದರು ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ರಾಯಭಾರಿ ಮಣಿಶಂಕರ್ ಅಯ್ಯರ್ ಇತ್ತೀಚೆಗೆ ಹೇಳಿದ್ದಾರೆ ಎಂದು theprint.in ವರದಿ ಮಾಡಿದೆ.

ಜವಾಹರ ಭವನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘The Rajiv I Knew: Why he was India’s Most Misunderstood Prime Minister’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಮಣಿಶಂಕರ್ ಅಯ್ಯರ್, ಮಸೀದಿ ಉರುಳುವುದನ್ನು ತಡೆಯಲು ಏನಾದರೂ ಮಾರ್ಗೋಪಾಯ ಕಂಡು ಹಿಡಿಯಿರಿ ಎಂದು ಮನವಿ ಮಾಡಲು ನನ್ನನ್ನು ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಸುಮಾರು ಮುಂಜಾನೆ 5 ಗಂಟೆಯ ನಂತರ ಕರೆಸಿಕೊಂಡಿದ್ದರು ಎಂದು 200 ಮಂದಿ ಸಭಿಕರನ್ನುದ್ದೇಶಿಸಿ ಹೇಳಿದ್ದಾರೆ.

“ನನಗೆ ಬೆಳಗ್ಗೆ 5 ಗಂಟೆಗೆ ಪ್ರಧಾನಿಗಳ ಕಾರ್ಯಾಲಯದಿಂದ ಕರೆ ಬಂದಿತು. ಪ್ರಧಾನಿಗಳು ಕರೆಗೆ ಬಂದಾಗ, ಅವರು ನನ್ನೊಂದಿಗೆ ಆತಂಕದಿಂದ ಮಾತನಾಡಿದರು. “ಮಣಿ ನಾನು ನನ್ನ ಕೈಲಾದ ಎಲ್ಲವನ್ನೂ ಪ್ರಯತ್ನಿಸಿದೆ. ಅವರು ನನಗೆ ದ್ರೋಹವೆಸಗಿದರು. ನನಗೆ ಏನು ಮಾಡಬೇಕು ಎಂದು ತೋಚುತ್ತಿಲ್ಲ” ಎಂದು ವೀರ್ ಸಾಂಘ್ವಿಯೊಂದಿಗಿನ ಮಾತುಕತೆಯಲ್ಲಿ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ಪ್ರಧಾನಿ ನರಸಿಂಹ ರಾವ್ ಅವರು ತಮ್ಮ ನಿವಾಸಕ್ಕೆ ಭೇಟಿ ನೀಡುವಂತೆ ನನಗೆ ಮನವಿ ಮಾಡಿದರು. ನಾನು ಅವರಿಗೆ ಸಂಸತ್ತಿನಲ್ಲಿ ಮುಖ್ಯ ವಿರೋಧ ಪಕ್ಷಗಳೊಂದಿಗೆ ಪ್ರತಿಭಟನೆಯನ್ನು ನಡೆಸುವ ಮೂಲಕ ಅಯೋಧ್ಯೆಯಲ್ಲಿ ನಡೆಯಲಿರುವ ಘಟನೆಗಳನ್ನು ಖಂಡಿಸುವಂತೆ ಸೂಚಿಸಿದೆ ಎಂದು ಸಾಂಘ್ವಿಯೊಂದಿಗೆ ಮುಂದುವರಿದ ಮಾತುಕತೆಯಲ್ಲಿ ಬಹಿರಂಗಗೊಳಿಸಿದ್ದಾರೆ.

“ನೀವು ಕೊನೆಯ ಭಾಷಣಕಾರರಾಗಿ ಅಲ್ಲಿಗೆ ಹೋಗಿ ದೇಶಕ್ಕೆ ಜಾತ್ಯತೀತತೆಯ ಸಂದೇಶ ನೀಡಿ’ ಎಂದು ನಾನು ಅವರಿಗೆ ಸಲಹೆ ನೀಡಿದೆ. ಆದರೆ, ಆ ಭಾಷಣವನ್ನು ಅವರು ಎಂದೂ ಮಾಡಲೇ ಇಲ್ಲ. ಪ್ರಧಾನಿಯವರ ಭಾಷಣದ ಪ್ರತಿಯನ್ನು ಪತ್ತೆ ಹಚ್ಚಿ ಎಂದು ನಾನು ಪ್ರಧಾನಿಗಳ ಕಾರ್ಯಕಾರಿ ಸಹಾಯಕರಿಗೆ ಸೂಚಿಸಿದಾಗ, ಆ ಭಾಷಣದ ಪ್ರತಿಯು ರಾವ್ ಅವರ ಹಾಸಿಗೆಯ ಮೇಲಿರುವುದು ಕಂಡು ಬಂದಿತು ಎಂದೂ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ನರಸಿಂಹ ರಾವ್ ಅವರ ಹೆಸರನ್ನು ವ್ಯಾಖ್ಯಾನಿಸಿದ ಅಯ್ಯರ್, ನರಸಿಂಹ ಎಂದರೆ ಅರ್ಧ ಮನುಷ್ಯ ಮತ್ತು ಅರ್ಧ ಸಿಂಹವನ್ನು ಪ್ರತಿನಿಧಿಸುತ್ತದೆ. ಆರ್ಥಿಕ ಸುಧಾರಣೆಗಳ ವಿಷಯಕ್ಕೆ ಬಂದರೆ ನರಸಿಂಹ ರಾವ್ ಅರ್ಧ ಸಿಂಹದಂತೆ ವರ್ತಿಸಿದರು. ಬಾಬರಿ ಮಸೀದಿ ವಿಚಾರಕ್ಕೆ ಬಂದಾಗ ನರಸಿಂಹ ರಾವ್ ಹಾಗೂ ಅರ್ಧ ಮನುಷ್ಯನಂತೆ ವರ್ತಿಸಿದರು” ಎಂದು ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನು ಒಳಗೊಂಡಂತೆ ಸಂಪೂರ್ಣವಾಗಿ ಮೌನಕ್ಕೆ ಜಾರಿದ್ದ ಸಭಿಕರನ್ನುದ್ದೇಶಿಸಿ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News