ಜಾರ್ಖಂಡ್ | ತರಕಾರಿ ಮಾರಾಟಗಾರನ ಮಗಳು ಝೀನತ್ ಪರ್ವೀನ್ 12 ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್
ಹೊಸದಿಲ್ಲಿ : ಜಾರ್ಖಂಡ್‌ನ ರಾಂಚಿಯ ಕಾಂಕೆ ನಿವಾಸಿ ಝೀನತ್ ಪರ್ವೀನ್ 12 ನೇ ತರಗತಿಯಲ್ಲಿ ರಾಜ್ಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಆಕೆಯ ತಂದೆ ಸಬೀರ್ ಅನ್ಸಾರಿ ತರಕಾರಿಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಆರ್ಥಿಕ ಸಂಕಷ್ಟಗಳ ನಡುವೆ ಝೀನತ್ ಅವರ ಅತ್ಯುತ್ತಮ ಶೈಕ್ಷಣಿಕ ಸಾಧನೆ ಅನೇಕರಿಗೆ ಸ್ಫೂರ್ತಿಯಾಗಿದೆ.
ಝೀನತ್ ಅವರ ಶೈಕ್ಷಣಿಕ ಪಯಣವು ಆಕೆಯ ತಂದೆಯ ಅಚಲವಾದ ಬೆಂಬಲ ಮತ್ತು ಅವರ ಸ್ವಂತ ಅವಿರತ ಪ್ರಯತ್ನಗಳ ಫಲವಾಗಿದೆ. ಹಣಕಾಸಿನ ಅಡೆತಡೆಗಳ ಹೊರತಾಗಿಯೂ, ಕುಟುಂಬವನ್ನು ಸಲಹಲು ತನ್ನ ತಂದೆಯ ದಣಿವರಿಯದ ಶ್ರಮಕ್ಕೆ ಝೀನತ್ ಉತ್ತಮ ಫಲಿತಾಂಶ ನೀಡಿದ್ದಾರೆ. ತನ್ನ ತಂದೆಯ ಆಕಾಂಕ್ಷೆಗಳನ್ನು ಪೂರೈಸಲು ನಿರ್ಧರಿಸಿದ ಝೀನತ್ ಪ್ರತಿದಿನ 4 ರಿಂದ 5 ಗಂಟೆಗಳ ಕಾಲ ತನ್ನ ಅಧ್ಯಯನಕ್ಕೆ ಮೀಸಲಿಟ್ಟಿದ್ದರು. ಪರೀಕ್ಷೆಯ ಸಮಯದಲ್ಲಿ ನಿದ್ದೆಯಿಲ್ಲದೇ ಅಧ್ಯಯನದಲ್ಲಿ ನಿರತರಾಗಿದ್ದರು.
ತನ್ನ ಪೋಷಕರ ಪ್ರೋತ್ಸಾಹದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಝೀನತ್, ಬಡತನದಿಂದ ಹೊರಬರಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು. ತನ್ನ ತಂದೆಯ ಸಂಕಷ್ಟಗಳಿಂದ ಪ್ರೇರಿತರಾದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಝೀನತ್, ಯುಪಿಎಸ್‌ಸಿ ಪರೀಕ್ಷೆಯ ಮೂಲಕ ಐಎಎಸ್ ಅಧಿಕಾರಿಯಾಗಲು ಬಯಸುತ್ತಾರೆ. ಆ ಮೂಲಕ ತನ್ನ ದೇಶಕ್ಕೆ ಸೇವೆ ಸಲ್ಲಿಸುವ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಗುರಿ ಆಕೆಯದ್ದು.
ಝೀನತ್ ಅವರ ಮಹತ್ವಾಕಾಂಕ್ಷೆಗಳು ವೈಯಕ್ತಿಕ ಯಶಸ್ಸನ್ನು ಮೀರಿ ವಿಸ್ತರಿಸುತ್ತವೆ. ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಮೇಲೆ ಕೇಂದ್ರೀಕರಿಸುವ ಮೂಲಕ ಇತರರ ಜೀವನವನ್ನು ಸುಧಾರಿಸಲು ತನ್ನ ಶಿಕ್ಷಣವನ್ನು ಸದುಪಯೋಗಪಡಿಸಿಕೊಳ್ಳವ ಯೋಜನೆ ಅವರದ್ದು.
ಝೀನತ್ ಅವರ ಶೈಕ್ಷಣಿಕ ಯಶಸ್ಸು ಅಧ್ಯಯನದ ಕಡೆಗಿನ ಅವರ ಶಿಸ್ತುಬದ್ಧ ವಿಧಾನಕ್ಕೆ ಸಾಕ್ಷಿಯಾಗಿದೆ. ಗಮನವನ್ನು ಬೇರೆಡೆಗೆ ಸೆಳೆಯುವ ಸಾಮಾಜಿಕ ಮಾಧ್ಯಮ ಮತ್ತು ದೂರದರ್ಶನದಿಂದ ಅವರು ದೂರವಿದ್ದರು. ತನ್ನ ಶೈಕ್ಷಣಿಕ ಗುರಿಗಳೇ ಆಕೆಯ ಆದ್ಯತೆಗಳು. ಕಠಿಣ ಪರಿಶ್ರಮ, ನಿಯಮಿತ ಪುನರ್ಮನನ ಮತ್ತು ಕಠಿಣ ಪರೀಕ್ಷಾ ತಯಾರಿಯ ಬದ್ಧತೆಯಿಂದ ಪರೀಕ್ಷೆಯಲ್ಲಿ ಆಕೆ ರ‍್ಯಾಂಕ್ ಗಳಿಸಲು ಸಾಧ್ಯವಾಗಿದೆ.
"ನಾನು ಟಾಪರ್ ಆಗುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ" ಎಂದು ಝೀನತ್ ಹೇಳಿದರು. ಮಗಳ ಯಶಸ್ಸಿನ ಸುದ್ದಿ ಕೇಳಿ ಝೀನತ್ ತಂದೆ ಕಣ್ಣೀರಿಟ್ಟರು. ಅವರು ತಮ್ಮ ಮಗಳ ಸಾಧನೆಯಿಂದ ತಮಗಾದ ಸಮಾಧಾನ ಮತ್ತು ಹೆಮ್ಮೆಯನ್ನು ಒತ್ತಿ ಹೇಳಿದರು. ಮುಂದಿನ ಶಿಕ್ಷಣಕ್ಕಾಗಿ ಝೀನತ್‌ಗೆ ಎಲ್ಲಾ ಅವಕಾಶಗಳನ್ನು ಒದಗಿಸಲು ನಿರ್ಧರಿಸಿರುವ ಸಬೀರ್ ಅನ್ಸಾರಿ ಆಕೆಯ ಆಕಾಂಕ್ಷೆಗಳನ್ನು ಪೂರ್ಣ ಹೃದಯದಿಂದ ಬೆಂಬಲಿಸುವುದಾಗಿ ಮನಃಪೂರ್ವಕವಾಗಿ ಹೇಳಿದರು.
ಸೌಜನ್ಯ: clarionindia.net