ಗುಜರಾತ್ ಚಂಡಮಾರುತ: ಬಿರುಗಾಳಿಗೆ ಉರುಳಿದ ಮರ, ವಿದ್ಯುತ್ ಕಂಬಗಳು, 940 ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಸ್ಥಗಿತ
ಹೊಸದಿಲ್ಲಿ: ಬಿಪರ್‌ಜೋಯ್ ಚಂಡಮಾರುತವು ಗುರುವಾರ ಸಂಜೆ ಗುಜರಾತ್‌ನಲ್ಲಿ ಭೂಕುಸಿತವನ್ನುಂಟು ಮಾಡಿದ್ದು, ಬಲವಾಗಿ ಬೀಸಿದ ಗಾಳಿಯಿಂದಾಗಿ ಹಲವಾರು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಚಂಡಮಾರುತವು ಒಳನಾಡಿನಲ್ಲಿ ಅಪ್ಪಳಿಸಿದ್ದರಿಂದ ಇಬ್ಬರು ಸಾವನ್ನಪ್ಪಿದರು ಹಾಗೂ 22 ಮಂದಿ ಗಾಯಗೊಂಡರು. ಹಲವಾರು ಮನೆಗಳು ಮತ್ತು ವಾಹನಗಳು ಕೂಡಾ ಹಾನಿಗೊಳಗಾಗಿವೆ. 900 ಕ್ಕೂ ಹೆಚ್ಚು ಹಳ್ಳಿಗಳು ವಿದ್ಯುತ್ ಇಲ್ಲದೆ ಕತ್ತಲಲ್ಲಿ ಮುಳುಗಿವೆ.
ಚಂಡಮಾರುತವು ಗುರುವಾರ ಸಂಜೆ ಗಂಟೆಗೆ 125 ರಿಂದ 140 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಗುಜರಾತ್‌ನ ಜಖೌ ಬಂದರಿನ ಬಳಿ ಅಪ್ಪಳಿಸಿದೆ. ಆದಾಗ್ಯೂ, ಕೆಲವು ಗಂಟೆಗಳ ನಂತರ ಚಂಡಮಾರುತವು ದುರ್ಬಲಗೊಳ್ಳಲು ಆರಂಭಿಸಿತು ಮತ್ತು ಶುಕ್ರವಾರ ಮುಂಜಾನೆ 2:30 ರ ಹೊತ್ತಿಗೆ ಗಂಟೆಗೆ 110 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿತು.
ಗಾಳಿ ಸಹಿತ ಭಾರೀ ಮಳೆಗೆ ರಾಜ್ಯದ ವಿವಿಧೆಡೆ 524 ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಾಜ್ಯದ ಅಧಿಕಾರಿಗಳ ಪ್ರಕಾರ ಸುಮಾರು 940 ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಕೂಡ ಸ್ಥಗಿತಗೊಂಡಿದೆ. ಇದಲ್ಲದೆ, ಗುರುವಾರ ಭಾವನಗರ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಮೇಕೆಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ತಂದೆ ಮತ್ತು ಮಗ ನೀರಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ.
ಚಂಡಮಾರುತವು ರೈಲು ಸೇವೆಗಳ ಮೇಲೂ ಪರಿಣಾಮ ಬೀರಿದೆ. ಪಶ್ಚಿಮ ರೈಲ್ವೇಯ ಪ್ರಕಾರ, ಗುಜರಾತ್‌ನ ಬಿಪರ್‌ಜೋಯ್ ಪೀಡಿತ ಪ್ರದೇಶಗಳಲ್ಲಿ ಹೊರಡುವ ಅಥವಾ ಅಲ್ಲಿಗೆ ತಲುಪುವ ಸುಮಾರು 99 ರೈಲುಗಳನ್ನು ರದ್ದುಗೊಳಿಸಲಾಗುವುದು.