ಕ್ರಿಮಿಯಾ ಶಸ್ತ್ರಾಸ್ತ್ರ ಡಿಪೋ ಮೇಲೆ ಡ್ರೋನ್ ದಾಳಿ; 12 ಮಂದಿಗೆ ಗಾಯ

Update: 2023-07-23 18:07 GMT

ಕೀವ್: ರಶ್ಯದ ವಶದಲ್ಲಿರುವ ಉಕ್ರೇನ್‍ನ ಕ್ರಿಮಿಯಾ ಪ್ರಾಂತದ ಶಸ್ತ್ರಾಸ್ತ್ರ ಡಿಪೋದ ಮೇಲೆ ನಡೆದ ಡ್ರೋನ್ ದಾಳಿಯಿಂದ ಅಪಾರ ಹಾನಿಯಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಕೇಂದ್ರ ಕ್ರಿಮಿಯಾದಲ್ಲಿ ಶತ್ರುಗಳು ತಾತ್ಕಾಲಿಕ ಸ್ವಾಧೀನಪಡಿಸಿಕೊಂಡಿರುವ ಒಕ್ಟಿಯಬ್ರಸ್ಕ್ ಜಿಲ್ಲೆಯಲ್ಲಿನ ತೈಲ ಡಿಪೋ ಮತ್ತು ರಶ್ಯ ಸೇನೆಯ ಗೋದಾಮುಗಳನ್ನು ನಮ್ಮ ಸೇನೆ ನಾಶಗೊಳಿಸಿದೆ. ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿನ ಜನರನ್ನು ಸ್ಥಳಾಂತರಗೊಳಿಸಲು ಅಧಿಕಾರಿಗಳು ಸೂಚಿಸಿದ್ದು ರಶ್ಯವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯನ್ನು ಮುಚ್ಚಲಾಗಿದೆ ಎಂದು ಉಕ್ರೇನ್ ಹೇಳಿದೆ.

ಡ್ರೋನ್ ದಾಳಿಯಿಂದ ಶಸ್ತ್ರಾಸ್ತ್ರ ಸಂಗ್ರಹಾಗಾರದಲ್ಲಿ ಸ್ಫೋಟ ಸಂಭವಿಸಿದೆ. ಗಾಯಗೊಂಡ 12 ಜನರಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು ಇವರಲ್ಲಿ 4 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಶ್ಯ ಸುದ್ಧಿಸಂಸ್ಥೆ ವರದಿ ಮಾಡಿದೆ. ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ಈ ಪ್ರಾಂತದಲ್ಲಿ ರಶ್ಯ ನೇಮಿಸಿರುವ ಗವರ್ನರ್ ಸೆರ್ಗೆಯ್ ಅಕ್ಸಿಯೊನೊವ್ ಹೇಳಿದ್ದಾರೆ. ಕ್ರಿಮಿಯಾ ಪ್ರಾಂತದ ಪ್ರಮುಖ ಕಟ್ಟಡಗಳು ಹಾಗೂ ಮೂಲಸೌಕರ್ಯಗಳ ಫೋಟೋವನ್ನು ಆನ್‍ಲೈನ್‍ನಲ್ಲಿ ಪೋಸ್ಟ್ ಮಾಡಬಾರದು. ಹೀಗೆ ಮಾಡಿ ಶತ್ರುಗಳಿಗೆ ನೆರವಾಗುತ್ತಿರುವ ಜನರ ಬಗ್ಗೆ ಮಾಹಿತಿಯಿದ್ದರೆ ಆಂತರಿಕ ಸಚಿವಾಲಯ ಅಥವಾ ಎಫ್‍ಎಸ್‍ಬಿ ಭದ್ರತಾ ಸೇವೆ ವಿಭಾಗಕ್ಕೆ ಮಾಹಿತಿ ನೀಡಬೇಕು ಎಂದು ಕ್ರಿಮಿಯಾ ಗವರ್ನರ್‍ರ ಸಲಹೆಗಾರ ಒಲೆಗ್ ಕ್ರಷ್ಕೋವ್ ಟ್ವೀಟ್ ಮಾಡಿದ್ದಾರೆ. ಉಕ್ರೇನ್‍ನ ಕ್ರಿಮಿಯಾ ಪ್ರಾಂತವನ್ನು 2014ರಲ್ಲಿ ರಶ್ಯ ಸ್ವಾಧೀನ ಪಡಿಸಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News