ಅಲ್ಕರಾಝ್‌ರಂತಹ ಆಟಗಾರನನ್ನು ನಾನು ಎಂದಿಗೂ ಎದುರಿಸಿಲ್ಲ: ಜೊಕೊವಿಕ್

Update: 2023-07-17 18:10 GMT

ಲಂಡನ್: ನನ್ನ 23 ವರ್ಷಗಳ ವೃತ್ತಿಜೀವನ ದಲ್ಲಿ ಟೆನಿಸ್ ಅಂಕಣದಲ್ಲಿ ಸಾಧ್ಯವಿರುವ ಎಲ್ಲವೂ ನನ್ನ ಅನುಭವಕ್ಕೆ ಬಂದಿದ್ದು, ಆದರೆ ಕಾರ್ಲೊಸ್ ಅಲ್ಕರಾಝ್ ಅವರಂತಹ ಆಟಗಾರನನ್ನು ಈ ತನಕ ಎದುರಿಸಿಲ್ಲ. ಅವರು ತಾನೋರ್ವ ವಿಶ್ವ ಶ್ರೇಷ್ಠ ಆಟಗಾರನೆಂದು ಸಾಬೀತುಪಡಿಸಿದ್ದಾರೆ ಎಂದು ಸತತ 4 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದ ಸರ್ಬಿಯದ ಆಟಗಾರ ನೊವಾಕ್ ಜೊಕೊವಿಕ್ ಹೇಳಿದ್ದಾರೆ.

ಸೆಂಟರ್‌ಕೋರ್ಟ್‌ನಲ್ಲಿ ರವಿವಾರ ನಡೆದ ಫೈನಲ್‌ನಲ್ಲಿ 21ರ ಹರೆಯದ ಅಲ್ಕರಾಝ್ 36ರ ವಯಸ್ಸಿನ ಜೊಕೊವಿಕ್ ವಿರುದ್ಧ ತೀವ್ರ ಹೋರಾಟ ನೀಡಿ 5 ಸೆಟ್‌ಗಳ ಅಂತರದಿಂದ ಜಯಭೇರಿ ಬಾರಿಸಿದರು. ದಾಖಲೆಯ 24ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಜೊಕೊವಿಕ್ ಪ್ರಯತ್ನ ವಿಫಲಗೊಳಿಸಿರುವ ಅಲ್ಕರಾಝ್ ವೃತ್ತಿಜೀವನದಲ್ಲಿ 2ನೇ ಬಾರಿ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದರು. 2022ರ ಯುಎಸ್ ಓಪನ್‌ನಲ್ಲಿ ಕಾಸ್ಪರ್ ರೂಡ್‌ರನ್ನು ಸೋಲಿಸಿದ್ದ ಅಲ್ಕರಾಝ್ ಮೊದಲ ಬಾರಿ ಚಾಂಪಿಯನ್ ಆಗಿದ್ದರು.

ಜೊಕೊವಿಕ್ 2013ರ ಫೈನಲ್‌ನಲ್ಲಿ ಆ್ಯಂಡಿ ಮರ್ರೆ ವಿರುದ್ಧ ಸೋತ ನಂತರ ವಿಂಬಲ್ಡನ್‌ನಲ್ಲಿ ಕೇವಲ 2 ಬಾರಿ ಮುಗ್ಗರಿಸಿದ್ದರು.

‘‘ವಿಂಬಲ್ಡನ್ ಫೈನಲ್‌ನಲ್ಲಿ ನನ್ನನ್ನು, ರಫೆಲ್ ನಡಾಲ್, ರೋಜರ್ ಫೆಡರರ್‌ರನ್ನು ಏಕಕಾಲದಲ್ಲಿ ಎದುರಿಸಿದ ಅನುಭವ ವಾಯಿತು. ಈ ವರ್ಷ ಅಲ್ಕರಾಝ್ ಹುಲ್ಲ್ಲುಹಾಸಿನ ಅಂಕಣದಲ್ಲಿ ಉತ್ತಮವಾಗಿ ಆಡುತ್ತಾರೆಂದು ನಿರೀಕ್ಷಿಸಿರಲಿಲ್ಲ. ಆದರೆ ಅವರು ವಿಶ್ವದ ಅತ್ಯುತ್ತಮ ಆಟಗಾರನೆಂದು ಸಾಬೀತುಪಡಿಸಿದ್ದಾರೆ’’ ಎಂದು ಜೊಕೊವಿಕ್ ಪ್ರತಿಕ್ರಿಯಿಸಿದರು.

‘‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಅಲ್ಕರಾಝ್ ಅವರಂತಹ ಆಟಗಾರನ ಎದುರು ಈ ತನಕ ಆಡಿಲ್ಲ. ರೋಜರ್, ರಾಫಾ ಹಾಗೂ ನನ್ನ ಆಟದ ಕೆಲವು ಅಂಶಗಳನ್ನು ಒಳಗೊಂಡಿ ರುವ ಅಲ್ಕರಾಝ್ ಗೇಮ್‌ನ ಕುರಿತು ಜನರು ಕಳೆದ ಒಂದು ವರ್ಷಗಳಿಂದ ಮಾತನಾಡುತ್ತಿದ್ದಾರೆಂದು ಭಾವಿಸುತ್ತೇನೆ. ನಾನು ಆ ಮಾತನ್ನು ಒಪ್ಪುತ್ತೇನೆ. ಅವರೊಬ್ಬ ಪರಿಪೂರ್ಣ ಆಟಗಾರ ’’ ಎಂದು ಜೊಕೊವಿಕ್ ಶ್ಲಾಘಿಸಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News