ರಾಜಸ್ಥಾನ | ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ: ಶಂಕಿತ ಆರೋಪಿಗಳಾದ ಇಬ್ಬರು ಪೊಲೀಸರ ಅಮಾನತು
ಜೈಪುರ್: ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಖಾಜುವಾಲ ಎಂಬಲ್ಲಿ 20 ವರ್ಷದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಶಂಕಿಸಲಾದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಯುವತಿಯ ಮೃತದೇಹ ಮಂಗಳವಾರ ಪತ್ತೆಯಾಗಿತ್ತು. ಖಾಜುವಾಲ ಠಾಣೆಯ ಒಬ್ಬರು ಕಾನ್‌ಸ್ಟೇಬಲ್‌ಗಳ ಸಹಿತ ಮೂರು ವ್ಯಕ್ತಿಗಳ ವಿರುದ್ಧ ಸಂತ್ರಸ್ತೆಯ ಕುಟುಂಬ ಆರೋಪ ಹೊರಿಸಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ತಕ್ಷಣ ಅಮಾನತುಗೊಳಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಐಜಿಪಿ ಓಂ ಪ್ರಕಾಶ್ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಗೆ ಯುವತಿಯ ಕುಟುಂಬ ಅನುಮತಿ ನಿರಾಕರಿಸಿದೆ ಹಾಗೂ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಕೋರಿ ಪ್ರತಿಭಟನೆಯನ್ನೂ ನಡೆಸಿದೆ. ಕುಟುಂಬದ ಮನವೊಲಿಕೆಗೆ ಯತ್ನ ಮುಂದುವರಿದಿದೆ ಎಂದು ಎಸ್‌ಪಿ ತೇಜಸ್ವಿನಿ ಗೌತಮ್ ತಿಳಿಸಿದ್ದಾರೆ.
ಕಾನ್‌ಸ್ಟೇಬಲ್‌ಗಳಾದ ಮನೋಜ್ ಮತ್ತು ಭಗೀರಥ್ ಇನ್ನೊಬ್ಬಾತನ ಜೊತೆ ಸೇರಿಕೊಂಡು ಯುವತಿಯನ್ನು ಒಂದು ಮನೆಗೆ ಕರೆದುಕೊಂಡು ಅಲ್ಲಿ ಅತ್ಯಾಚಾರವೆಸಗಿ ಕೊಲೆಗೈದಿದ್ದಾರೆಂದು ಕುಟುಂಬ ಆರೋಪಿಸಿದೆ.
ಸಂತ್ರಸ್ತೆಗೂ ಪ್ರಮುಖ ಆರೋಪಿಗಳಿಗೂ ಪರಿಚಯವಿತ್ತು ಎಂದು ಕರೆ ವಿವರಗಳನ್ನು ಪರಿಶೀಲಿಸಿರುವ ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಎಸ್‌ಪಿ ದೀಪಕ್ ಶರ್ಮ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.