ಐರಾವತ ಕ್ಲಬ್ ಕ್ಲಾಸ್-2.0 ಮಾದರಿಯ 20 ಬಸ್‌ಗಳ ಸೇರ್ಪಡೆ

Update: 2024-10-14 08:02 GMT

ಬೆಂಗಳೂರು: ಪ್ರಯಾಣಿಕರ ಬೇಡಿಕೆಗನುಣವಾಗಿ ವಿವಿಧ ಮಾದರಿಯ ಅತ್ಯಾಧುನಿಕ ಬಸ್‌ಗಳನ್ನು ಸೇರ್ಪಡೆಗೊಳಿಸುತ್ತಿರುವುದರಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಕೆಎಸ್ಸಾರ್ಟಿಸಿ, ಇದೀಗ ಹೊಸದಾಗಿ ಐರಾವತ ಕ್ಲಬ್ ಕ್ಲಾಸ್ 2.0 ಮಾದರಿಯ 20 ಬಸ್‌ಗಳನ್ನು ಈ ತಿಂಗಳ ಕೊನೆಯ ವಾರದಲ್ಲಿ ತನ್ನ ವಾಹನಗಳ ಸಮೂಹಕ್ಕೆ ಸೇರ್ಪಡೆಗೊಳಿಸಲಿದೆ.

ಕೆಎಸ್ಸಾರ್ಟಿಸಿಯಲ್ಲಿ ಈಗಾಗಲೇ ಒಟ್ಟು 443 ಬಸ್‌ಗಳು ಐಷಾರಾಮಿ ಬಸ್‌ಗಳಿವೆ. ಈಗ ಸೇರ್ಪಡೆಯಾಗುತ್ತಿರುವ ಐರಾವತ ಕ್ಲಬ್ ಕ್ಲಾಸ್ 2.0 ಮಾದರಿಯ ಒಂದು ಬಸ್ಸಿನ ದರ 1.78 ಕೋಟಿ ರೂ.ಗಳಾಗಿದ್ದು, ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಬಸ್‌ನಲ್ಲಿ ಶಕ್ತಿಶಾಲಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಡೇ ರನ್ನಿಂಗ್ ಲೈಟ್‌ಗಳೊಂದಿಗೆ(ಡಿಆರ್‌ಎಲ್) ಹೊಸ ಪ್ಲಶ್ ಇಂಟೀರಿಯರ್ಸ್ ಮತ್ತು ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸ ಹೊಂದಿದೆ. ಇದು ಬಸ್‌ನ ಸೌಂದರ್ಯ ಹೆಚ್ಚಿಸಲಿದೆ.

ಐರಾವತ ಕ್ಲಬ್ ಕ್ಲಾಸ್ 2.0 ಮಾದರಿಯ ಬಸ್ ಏರೋಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದ್ದು, ನವೀನ ತಂತ್ರಜ್ಞಾನ, ತಾಂತ್ರಿಕತೆಯಿಂದ ಸುಧಾರಿತ ಇಂಜಿನ್ ಹೊಂದಿದೆ. ಇದು ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ಇಂಜಿನ್ ಕೆಎಂಪಿಎಲ್ ನೀಡುತ್ತದೆ.

ಒಟ್ಟಾರೆ ಬಸ್‌ನ ಉದ್ದದಲ್ಲಿ ಶೇ.3.5 ಹೆಚ್ಚಳ ಇರುವುದರಿಂದ ಪ್ರಯಾಣಿಕರ ಆಸನಗಳ ನಡುವಿನ ಅಂತರ ಹೆಚ್ಚಾಗಿದೆ. ಬಸ್‌ನ ಎತ್ತರದಲ್ಲಿ ಶೇ.5.6 ಹೆಚ್ಚಳ ಇರುವುದರಿಂದ ಹೆಚ್ಚಿನ ಹೆಡ್ ರೂಂ ಅನ್ನು ಬಸ್ ಹೊಂದಿದೆ. ವಿಂಡ್‌ಶೀಲ್ಡ್ ಗಾಜು ಶೇ.9.5ರಷ್ಟು ವಿಸ್ತಾರವಾಗಿದ್ದು, ಚಾಲಕನಿಗೆ ಗೋಚರತೆಯನ್ನು ಹೆಚ್ಚಿಸಿ ಬ್ಲೈಂಡ್ ಸ್ಪಾಟ್ ಅನ್ನು ಕಡಿಮೆ ಮಾಡುತ್ತದೆ.

ವಿಶಾಲ ಲಗೇಜ್ ಸ್ಥಳಾವಕಾಶವಿದ್ದು, ಹಿಂದಿನ ಬಸ್‌ಗಳಿಗೆ ಹೋಲಿಸಿದ್ದಲ್ಲಿ ಶೇ.20ರಷ್ಟು ಹೆಚ್ಚಿನ ಲಗೇಜ್ ಇಡುವ ಸೌಲಭ್ಯವಿರುತ್ತದೆ. ಇದು ಅತೀ ಹೆಚ್ಚು ಲಗೇಜ್ ಸ್ಥಳಾವಕಾಶವಿರುವ ಮೊದಲ ಬಸ್ ಆಗಿದೆ. ಯುಎಸ್‌ಬಿ ಮತ್ತು ಸಿ ಟೈಪ್‌ನಂತಹ ಹೊಸ ಜನರೇಷನ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒಳಗೊಂಡಿದೆ. ವಿಶಾಲವಾದ ಎಸಿ ಡಕ್ಟ್ ಹೊಂದಿರುವುದರಿಂದ ವಾಹನದ ಒಳಗೆ ಉತ್ತಮ ಹವಾನಿಯಂತ್ರಣಾ ವ್ಯವಸ್ಥೆ ಇರುತ್ತದೆ.

ಉನ್ನತ ದರ್ಜೆ, ವಿನ್ಯಾಸದ ಆಸನಗಳು ಮತ್ತು ಸಾಮಗ್ರಿಗಳ ಬಳಕೆಯಿಂದ ಪ್ರಯಾಣಿಕರಿಗೆ ಪ್ರೀಮಿಯಂ ಅನುಭವ ಮತ್ತು ಸೌಕರ್ಯ ಒದಗಿಸಲಿದೆ. ವಿಶಾಲವಾದ ಪ್ಯಾಂಟೋಗ್ರಾಫಿಕ್ ವಿನ್ಯಾಸದಿಂದ ವಾಹನದ ನಿರ್ವಹಣೆ ಕೈಗೊಳ್ಳಲು ಸುಲಭವಾಗಿರುತ್ತದೆ. ಐರಾವತ ಕ್ಲಬ್ ಕ್ಲಾಸ್ 2.0 ಮಾದರಿಯ ಬಸ್‌ನ ಹಿಂಭಾಗದಲ್ಲಿ ಫಾಗ್ ಲೈಟ್‌ಅನ್ನು ಒಳಗೊಂಡಿರುವುದಿರಂದ ರಾತ್ರಿ ವೇಳೆಯಲ್ಲಿ ಹೆಚ್ಚಿ ನ ಸುರಕ್ಷತೆ ಇರುತ್ತದೆ. ಸುಲಭವಾಗಿ ಕೈಗೆಟುಕುವ ಚಾಲಕ ನಿಯಂತ್ರಣ ಮತ್ತು ಸ್ವಿಚ್‌ಗಳನ್ನು ಹೊಂದಿದ್ದು, ಚಾಲಕರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ.

ಬಸ್‌ಗಳಲ್ಲಿ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಇರುತ್ತದೆ. ಬಸ್‌ನ ಒಳಗೆ ಪ್ರಯಾಣಿಕರ ಆಸನದ ಎರಡೂ ಬದಿಯಲ್ಲಿ ನೀರಿನ ಪೈಪ್‌ಗಳಿದ್ದು, ಬೆಂಕಿ ಅವಘಡದ ಸಂದರ್ಭ ನೀರು ಸಿಂಪಡಿಸಲು ಪ್ರಾರಂಭವಾಗುತ್ತದೆ. ಚಾಲಕರು ಪಾದಚಾರಿಯನ್ನು ಪ್ರಯಾಣಿಕರ ಬಾಗಿಲಿನಿಂದ ಸುಲಭವಾಗಿ ನೋಡಬಹುದಾಗಿದ್ದು ಪಾದಚಾರಿಗಳಿಗೂ ಹೆಚ್ಚಿನ ಸುರಕ್ಷತೆ ಇರುತ್ತದೆ. ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್(ವಾಸು), ಉಪಾಧ್ಯಕ್ಷ ಮುಹಮ್ಮದ್ ರಿಝ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಹೊಸಕೋಟೆ ಬಳಿಯಿರುವ ವೋಲ್ವೊ ಬಸ್ ತಯಾರಿಕಾ ಫ್ಯಾಕ್ಟರಿಗೆ ಭೇಟಿ ನೀಡಿ, ಬಸ್ಸನ್ನು ಪರಿವೀಕ್ಷಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News