ಅಂಬೇಡ್ಕರ್ ಅವರ ‘ಶಿಕ್ಷಣ, ಸಂಘಟನೆ ಮತ್ತು ಆಂದೋಲನ’ ಕರೆಗೆ ನೂರು ವರ್ಷ
ಬಹಿಷ್ಕೃತ ಹಿತಕಾರಿಣಿ ಸಭಾವು ಹಲವು ರೀತಿಯ ಹೋರಾಟಗಳಿಗೆ ವೇದಿಕೆಯಾಯಿತು. ಅಂಬೇಡ್ಕರ್ ಬಹಿಷ್ಕೃತ ಹಿತಕಾರಿಣಿ ಸಭಾವನ್ನು ಸ್ಥಾಪಿಸಿದ ಈ ನೂರು ವರ್ಷಗಳ ಅವಧಿ ನಿಜಕ್ಕೂ ದಾಖಲಾರ್ಹ ಅವಧಿಯಾಗಿದೆ. ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಕುಡಿಯುವ ನೀರಿಗಾಗಿ ನಡೆಸಿದ ಜಗತ್ತಿನ ಮೊತ್ತ ಮೊದಲ ಚೌದಾರ್ ಕೆರೆಯ ಹೋರಾಟ, ಮಹಾಡ್ ಸಮ್ಮೇಳನ, ಮನುಸ್ಮತಿಯ ದಹನ, ದೇವಾಲಯ ಪ್ರವೇಶ ಚಳವಳಿ ಸೇರಿದಂತೆ ನಿಮ್ನ ವರ್ಗಗಳಲ್ಲಿ ಜಾಗೃತಿಯನ್ನುಂಟು ಮಾಡಲು ಅಂಬೇಡ್ಕರ್ ಅವರು ನಿರಂತರ ಹೋರಾಟಗಳನ್ನು ಮಾಡಿಕೊಂಡು ಬಂದರು.
ಸಮಾಜದಲ್ಲಿ ಅಸ್ಪಶ್ಯರ ಪರಿಸ್ಥಿತಿಗಳನ್ನು ಸುಧಾರಿಸಲು ಮತ್ತು ಅವರ ಉನ್ನತಿಗಾಗಿ ಸಾಮಾಜಿಕ ಚಳವಳಿಯನ್ನು ಪ್ರಾರಂಭಿಸಲು ಡಾ.ಬಿ.ಆರ್. ಅಂಬೇಡ್ಕರ್ ಅವರು ‘ಬಹಿಷ್ಕೃತ ಹಿತಕಾರಿಣಿ ಸಭಾವನ್ನು ಸ್ಥಾಪಿಸಿ ಇಂದಿಗೆ 100 ವರ್ಷ. ಅಸ್ಪಶ್ಯರ ಕುಂದುಕೊರತೆಗಳನ್ನು ನಿವಾರಿಸಲು ಮತ್ತು ಸರಕಾರದ ಮುಂದೆ ಅವುಗಳನ್ನು ಪ್ರಸ್ತಾವಿಸುವ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಡಾ. ಅಂಬೇಡ್ಕರ್ ಅವರು ‘ಬಹಿಷ್ಕೃತ ಹಿತಕಾರಿಣಿ ಸಭಾ’ವನ್ನು ಮುಂಬೈನಲ್ಲಿ ಜುಲೈ 20, 1924ರಂದು ಸ್ಥಾಪಿಸಿದರು.
ಅಂಬೇಡ್ಕರ್ ಅವರು ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಂಗ ಮುಗಿಸಿ, ಮತ್ತಷ್ಟು ಅಧ್ಯಯನ ಮಾಡಬೇಕೆಂಬ ಉದ್ದೇಶದಿಂದ ಜರ್ಮನಿಗೆ ತೆರಳಿ ಅಲ್ಲಿ ಕೆಲ ಕಾಲ ಇದ್ದ ನಂತರ ಭಾರತಕ್ಕೆ ಮರಳಿದರು. ಮುಂದೆ ಏನು ಮಾಡುವುದು ಎಂಬ ಆಲೋಚನೆಯಲ್ಲಿದ್ದರು. ಅವರ ಮುಂದೆ ಹಲವು ಯೋಜನೆಗಳಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಅಸ್ಪಶ್ಯರ ಮತ್ತು ಶೋಷಿತರ ಉದ್ಧಾರಕ್ಕಾಗಿ ಶ್ರಮಿಸಬೇಕೆಂಬ ಅದಮ್ಯ ಬಯಕೆ ಅವರಲ್ಲಿ ತುಡಿಯುತ್ತಿತ್ತು. ನ್ಯಾಯಾಧೀಶರ ಹುದ್ದೆಯೇ ಅವರನ್ನು ಹುಡುಕಿಕೊಂಡು ಬಂತು. ಆದರೆ ಅವರಿಗೆ ಯಾವುದೇ ಸರಕಾರಿ ಹುದ್ದೆಯಲ್ಲಿ ಆಸಕ್ತಿಯಿರಲಿಲ್ಲ. ಅದಕ್ಕಾಗಿ ಅವರು ಸ್ವತಂತ್ರ ವಕೀಲಿ ವೃತ್ತಿಯನ್ನು ಕೆಲ ಕಾಲ ಮಾಡಿದರು.
ಭಾರತದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಿರುವ ಅಸ್ಪಶ್ಯರು ಮತ್ತು ಬಹಿಷ್ಕಾರಕ್ಕೊಳಗಾಗಿರುವ ಜನತೆಗೆ ಘನತೆಯಿಂದ ಬದುಕುವ ಹಕ್ಕು ಸಿಗುತ್ತದೆಯೇ? ಎಲ್ಲಾ ಭಾರತೀಯರು ಬಹಿಷ್ಕಾರಕ್ಕೊಳಗಾದವರನ್ನು ಸಮಾನವಾಗಿ ಪರಿಗಣಿಸುತ್ತಾರೆಯೇ? ಬಹಿಷ್ಕಾರಕ್ಕೊಳಗಾದವರು ತಮ್ಮ ಹಕ್ಕುಗಳನ್ನು ಪಡೆಯಲು ಏನು ಮಾಡಬೇಕು? ಅವರು ಹೇಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು? ಎಂಬ ಚಿಂತೆ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕಾಡುತ್ತಿತ್ತು. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಮತ್ತು ಅಸ್ಪಶ್ಯರ ತೊಂದರೆಗಳನ್ನು ನಿವಾರಿಸಲು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವ ಸಲುವಾಗಿ ಒಂದು ಕೇಂದ್ರೀಯ ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಅಪೇಕ್ಷೆ ಅವರಲ್ಲಿ ಮೊಳಕೆಯೊಡೆಯಿತು. ಅದಕ್ಕಾಗಿ ಅವರು ಮಾರ್ಚ್ 9, 1924ರಂದು ಈ ಕುರಿತು ಚರ್ಚಿಸಲು ಮುಂಬೈನ ದಾಮೋದರ್ ಹಾಲ್‌ನಲ್ಲಿ ಮುಖಂಡರ ಮತ್ತು ಹಿರಿಯರ ಸಭೆಯನ್ನು ಕರೆದರು. ಚರ್ಚೆಯ ನಂತರ ಸಭೆಯಲ್ಲಿ ಭಾಗವಹಿಸಿದ್ದವರೆಲ್ಲರೂ ಅಂಬೇಡ್ಕರ್ ಅವರ ಮಾತುಗಳಿಗೆ ದನಿಗೂಡಿಸುವ ಮೂಲಕ ಸಂಸ್ಥೆಯನ್ನು ಸ್ಥಾಪಿಸಲು ಕೈಜೋಡಿಸಿದರು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕಾರ್ಯಕಾರಿ ಸಮಿತಿಯ ಅಧ್ಯಕ್ಷರನ್ನಾಗಿ ಒಕ್ಕೊರಲಿನಿಂದ ನೇಮಕ ಮಾಡಿದರು.
ಶೋಷಣೆ ಮತ್ತು ಬಹಿಷ್ಕಾರಕ್ಕೊಳಗಾದವರ ವಿಶಾಲ ಹಿತಾಸಕ್ತಿಗಳಿಗಾಗಿ ಹೋರಾಟ ಮಾಡುವ ಉದ್ದೇಶದಿಂದ ಅಂಬೇಡ್ಕರ್ ಅವರು ಸ್ಥಾಪಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೂ ಹೆಸರಾಗಿರುವ ಬಹಿಷ್ಕೃತ ಹಿತಕಾರಿಣಿ ಸಭಾವನ್ನು 1860ರ ಕಾಯ್ದೆ ಅಡಿಯಲ್ಲಿ ನೋಂದಾಯಿಸಲಾಯಿತು. ಅಸ್ಪಶ್ಯತೆಯಿಂದ ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ಜಾತಿಗಳ ಪ್ರಾತಿನಿಧಿಕ ಸಂಸ್ಥೆಯಾಗಿ ಬಹಿಷ್ಕೃತ ಹಿತಕಾರಿಣಿ ಸಭಾ ಹೊರಹೊಮ್ಮಿತು. ಅಸ್ಪಶ್ಯರಲ್ಲಿ ಹೊಸ ಸಾಮಾಜಿಕ-ರಾಜಕೀಯ ಜಾಗೃತಿಯನ್ನು ತರುವ ಸಲುವಾಗಿ ಸ್ಥಾಪಿಸಲಾದ ಈ ಸಂಸ್ಥೆಯ ಸ್ಥಾಪಕ ತತ್ವಗಳೆಂದರೆ ಶಿಕ್ಷಣ, ಸಂಘಟನೆ ಮತ್ತು ಆಂದೋಲನ. ಅಂಬೇಡ್ಕರ್ ಅವರ ಸಾಮಾಜಿಕ ಚಳವಳಿಯ ಮೂಲ ಆಶಯವಾದ ಶಿಕ್ಷಣ, ಸಂಘಟನೆ ಮತ್ತು ಆಂದೋಲನ ಎಂಬ ಧ್ಯೇಯ ವಾಕ್ಯವನ್ನು ಅಂಬೇಡ್ಕರ್ ಅವರು ಬಹಿಷ್ಕೃತ ಹಿತಕಾರಿಣಿ ಸಭಾದ ಮೂಲಕ ನಿಮ್ನ ವರ್ಗಗಳ ಜನರಿಗೆ ಕರೆ ನೀಡಿದರು. ಆದ್ದರಿಂದ ಅಂಬೇಡ್ಕರ್ ಅವರ ಈ ಮಹತ್ವದ ಕರೆಗೂ ಈಗ ನೂರು ವರ್ಷಗಳ ಸಂಭ್ರಮ.
ಹಾಸ್ಟೆಲ್‌ಗಳನ್ನು ತೆರೆಯುವ ಅಥವಾ ಅಗತ್ಯವಿರುವ ಅಥವಾ ಅಪೇಕ್ಷಣೀಯವೆಂದು ತೋರುವ ಇತರ ವಿಧಾನಗಳನ್ನು ಬಳಸಿಕೊಳ್ಳುವ ಮೂಲಕ ಖಿನ್ನತೆಗೆ ಒಳಗಾದ ವರ್ಗದ ಜನರ ನಡುವೆ ಶಿಕ್ಷಣದ ಹರಡುವಿಕೆಯನ್ನು ಉತ್ತೇಜಿಸುವುದು, ಶೋಷಣೆಗೆ ಒಳಗಾದ ವಲಯಗಳಲ್ಲಿ ಮಾಹಿತಿ ಮತ್ತು ಶಿಕ್ಷಣದ ಹರಡುವಿಕೆಯನ್ನು ಉತ್ತೇಜಿಸುವುದು, ಕೈಗಾರಿಕಾ ಮತ್ತು ಕೃಷಿ ತರಬೇತಿ ನೀಡುವ ಶಾಲೆ ಮತ್ತು ಕಾಲೇಜುಗಳನ್ನು ಪ್ರಾರಂಭಿಸುವ ಮೂಲಕ ಖಿನ್ನತೆಗೆ ಒಳಗಾದ ವರ್ಗಗಳ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಮತ್ತು ನಿಮ್ನ ವರ್ಗಗಳ ಜನರ ಕುಂದುಕೊರತೆಗಳನ್ನು ಪ್ರತಿನಿಧಿಸುವುದು, ದಲಿತ ವರ್ಗಗಳ ಜನರ ಜ್ಞಾನಾಭಿವೃದ್ಧಿಗಾಗಿ, ಸಾಮಾಜಿಕ ಅಭಿವೃದ್ಧಿಗಾಗಿ, ಆರ್ಥಿಕ ಸುಧಾರಣೆಗಾಗಿ ಕಾರ್ಯನಿರತವಾಗಿರುವ ಸಂಘ, ಸಂಸ್ಥೆಗಳಿಗೆ ಮತ್ತು ಚಳವಳಿಗಳಿಗೆ ಸಹಾಯವನ್ನು ಮಾಡುವುದು ಸೇರಿದಂತೆ ಹಲವು ಉದ್ದೇಶಗಳನ್ನು ಸಂಸ್ಥೆಯು ಇಟ್ಟುಕೊಂಡಿತ್ತು ಮತ್ತು ಅವುಗಳನ್ನು ಸಾಧಿಸಲು ಅಂಬೇಡ್ಕರ್ ಅವರು ಅವಿರತವಾಗಿ ಶ್ರಮಿಸಿದರು.
ಬಹಿಷ್ಕೃತ ಹಿತಕಾರಿಣಿ ಸಭಾದ ಮೂಲಕವೇ ಮಹಾಡ್ ಸಮ್ಮೇಳನ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಡೆಯಿತು. ಸಮ್ಮೇಳನವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ರಾಮಚಂದ್ರ ಬಾಬಾಜಿ ಮೋರೆಯವರು. ಅವರು ಆ ಕಾಲಘಟ್ಟದ ಪ್ರಮುಖ ಹೋರಾಟಗಾರರಲ್ಲಿ ಒಬ್ಬರಾಗಿದ್ದರು. ಹಣಕಾಸಿನ ಕೊಂಚ ಅನುಕೂಲಕರ ಹಿನ್ನೆಲೆಯಿಂದ ಬಂದ ಮೋರೆಯವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಕಾಲರ್‌ಶಿಪ್‌ನೊಂದಿಗೆ ಮುಗಿಸಿದ್ದರೂ ಮಹರ್ ಜನಾಂಗಕ್ಕೆ ಸೇರಿದವರು ಎಂಬ ಒಂದೇ ಕಾರಣಕ್ಕೆ ಅವರನ್ನು ಮಹಾಡ್‌ನ ಹೈಸ್ಕೂಲಿಗೆ ಸೇರಿಸಿಕೊಳ್ಳಲು ನಿರಾಕರಿಸಲಾಯಿತು. ಶಾಲೆಯ ಆಡಳಿತದ ವಿರುದ್ಧ ಕೇವಲ ಹನ್ನೊಂದನೇ ವಯಸ್ಸಿನಲ್ಲಿಯೇ ದಿನಪತ್ರಿಕೆಯೊಂದಕ್ಕೆ ಪತ್ರ ಬರೆದು ಪ್ರಕಟಿಸಿದರು. ಸರಕಾರ ಕೊಡುವ ಅನುದಾನ ನಿಂತುಹೋಗಬಹುದೆಂಬ ಆತಂಕದಿಂದ ಅವರನ್ನು ಶಾಲೆಯವರು ಸೇರಿಸಿಕೊಂಡರು. ಅಂಬೇಡ್ಕರ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಮೋರೆಯವರು ಅಂಬೇಡ್ಕರ್ ಅವರ ಉನ್ನತ ಶಿಕ್ಷಣದ ಸಾಧನೆ ನಿಮ್ನ ವರ್ಗಗಳ ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದು ಆಶಿಸಿ ಅಂಬೇಡ್ಕರ್ ಅವರನ್ನು ಮಹಾಡ್ ಸಮ್ಮೇಳನದ ಅಧ್ಯಕ್ಷತೆ ವಹಿಸಬೇಕೆಂದು ಕೋರಿಕೊಂಡಿದ್ದರು. ತರುಣ ಮೋರೆಯವರ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿದ ಅಂಬೇಡ್ಕರ್ ಅವರು ಇದಕ್ಕೆ ಒಪ್ಪಿಗೆ ಸೂಚಿಸಿದರು.
ಕೆಳವರ್ಗದ ಜನರಲ್ಲಿ ಶಿಕ್ಷಣವನ್ನು ಹರಡಲು ಮತ್ತು ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಡಾ. ಬಿ.ಆರ್ ಅಂಬೇಡ್ಕರ್ ಅವರು ಈ ಸಂಸ್ಥೆಯ ಮೂಲಕ ಹಲವು ಪ್ರಯತ್ನಗಳನ್ನು ಮಾಡಿದರು. ಅಂಬೇಡ್ಕರ್ ಅವರು ಸಭಾದ ಮೂಲಕ ಘೋಷಿಸಿದ ‘ಶಿಕ್ಷಣ, ಸಂಘಟನೆ ಮತ್ತು ಆಂದೋಲನ’ ಎಂಬ ಧ್ಯೇಯ ವಾಕ್ಯದ ಮೊದಲ ಗುರಿಯಾದ ಶಿಕ್ಷಣದ ಮೂಲಕ ನಿಮ್ನ ವರ್ಗಗಳಲ್ಲಿ ಜಾಗೃತಿಯನ್ನು ಉಂಟು ಮಾಡುವ ಮೊದಲ ಪ್ರಯತ್ನವಾಗಿ ಬಹಿಷ್ಕೃತ ಹಿತಕಾರಿಣಿ ಸಭೆಯ ವತಿಯಿಂದ ಜನವರಿ 4, 1925ರಂದು ಸೋಲಾಪುರದಲ್ಲಿ ವಿದ್ಯಾರ್ಥಿಗಳಿಗಾಗಿ ಉಚಿತ ವಸತಿ ನಿಲಯವನ್ನು ಪ್ರಾರಂಭಿಸಲಾಯಿತು. ದಲಿತ ಮತ್ತು ಬಡ ವಿದ್ಯಾರ್ಥಿಗಳಿಗೆ ವಸತಿ, ಆಹಾರ, ಬಟ್ಟೆ ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ಕೂಡ ಒದಗಿಸಲಾಯಿತು. ಸೋಲಾಪುರ ಪುರಸಭೆಯು ಈ ವಸತಿ ನಿಲಯಕ್ಕೆ 40,000 ರೂಪಾಯಿಗಳ ಅನುದಾನವನ್ನು ನೀಡಿತು. ಹಾಸ್ಟೆಲ್‌ನ ನಿರ್ವಹಣೆಯನ್ನು ಸೋಲಾಪುರದ ಸಮಾಜ ಸೇವಕರಾದ ಜೀವಪ್ಪ ಸುಬಾ ಐದಾಳೆ ಅವರಿಗೆ ವಹಿಸಲಾಯಿತು.
ಬಹಿಷ್ಕೃತ ಹಿತಕಾರಿಣಿ ಸಭಾ ಹಲವು ಮೊದಲುಗಳಿಗೆ ಸಾಕ್ಷಿಯಾಯಿತು. ಸಭಾವನ್ನು ಆರಂಭಿಸಿದ ಮೊದಲ ವರ್ಷದಲ್ಲಿಯೇ ನಾಸಿಕ್ ಜಿಲ್ಲೆಯ ಮಹರ್ ಜನರಿಗೆ ಅವರ ವತನದಾರಿಯ ವಿಷಯದಲ್ಲಿದ್ದ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಲು ಸಹಾಯ ಮಾಡಲಾಯಿತು. ವಾಚನಾಲಯವನ್ನು ಆರಂಭಿಸಲಾಯಿತು. ದಲಿತ ವರ್ಗಗಳ ವಿದ್ಯಾರ್ಥಿಗಳಿಗೆ ಒಂದು ವೇದಿಕೆಯನ್ನು ಕಲ್ಪಿಸುವ ಸಲುವಾಗಿ ಬಹಿಷ್ಕೃತ ವಿದ್ಯಾರ್ಥಿ ಸಮ್ಮೇಳನವನ್ನು ಆಯೋಜಿಸಲಾಯಿತು. ಅಂಬೇಡ್ಕರ್ ಅವರು ಸಭಾದ ಮೂಲಕ ಹಲವು ಚಳವಳಿಗೆ ಕರೆ ನೀಡಿದರು. ಸಭಾವು ಹಲವು ರೀತಿಯ ಹೋರಾಟಗಳಿಗೆ ವೇದಿಕೆಯಾಯಿತು. ಅಂಬೇಡ್ಕರ್ ಬಹಿಷ್ಕೃತ ಹಿತಕಾರಿಣಿ ಸಭಾವನ್ನು ಸ್ಥಾಪಿಸಿದ ಈ ನೂರು ವರ್ಷಗಳ ಅವಧಿ ನಿಜಕ್ಕೂ ದಾಖಲಾರ್ಹ ಅವಧಿಯಾಗಿದೆ. ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಕುಡಿಯುವ ನೀರಿಗಾಗಿ ನಡೆಸಿದ ಜಗತ್ತಿನ ಮೊತ್ತ ಮೊದಲ ಚೌದಾರ್ ಕೆರೆಯ ಹೋರಾಟ, ಮಹಾಡ್ ಸಮ್ಮೇಳನ, ಮನುಸ್ಮತಿಯ ದಹನ, ದೇವಾಲಯ ಪ್ರವೇಶ ಚಳವಳಿ ಸೇರಿದಂತೆ ನಿಮ್ನ ವರ್ಗಗಳಲ್ಲಿ ಜಾಗೃತಿಯನ್ನುಂಟು ಮಾಡಲು ಅಂಬೇಡ್ಕರ್ ಅವರು ನಿರಂತರ ಹೋರಾಟಗಳನ್ನು ಮಾಡಿಕೊಂಡು ಬಂದರು.
ಮಹಾಡ್ ಸತ್ಯಾಗ್ರಹದ ಸಂದರ್ಭದಲ್ಲಿ ಎಪ್ರಿಲ್ 3, 1927ರಂದು ‘ಬಹಿಷ್ಕೃತ ಭಾರತ’ ಪತ್ರಿಕೆಯನ್ನು ಆರಂಭಿಸಿದರು. ಪತ್ರಿಕೆಯು ಬಹಿಷ್ಕೃತ ಹಿತಕಾರಿಣಿ ಸಭಾದ ಮುಖವಾಣಿಯಾಗಿತ್ತು. ಬಹಿಷ್ಕೃತರ ಧ್ವನಿಯಾಗಿ ಪತ್ರಿಕೆಯನ್ನು ಬಳಸಿಕೊಂಡ ಅಂಬೇಡ್ಕರ್ ಅವರು ಅಸ್ಪಶ್ಯರ, ಶೋಷಿತರ ಮತ್ತು ಮಹಿಳೆಯರ ಧ್ವನಿಯಾಗುವಂತೆ ಪತ್ರಿಕೆಯನ್ನು ರೂಪಿಸಿದ್ದರು.
ಅಂಬೇಡ್ಕರ್ ಅವರು ಯಾವ ಉದ್ದೇಶಗಳನ್ನು ಇಟ್ಟುಕೊಂಡು ಬಹಿಷ್ಕೃತ ಹಿತಕಾರಿಣಿ ಸಭಾವನ್ನು ಆರಂಭಿಸಿದರೋ ಅವುಗಳು ಕಳೆದ ಈ ನೂರು ವರ್ಷಗಳಲ್ಲಿ ಈಡೇರಿವೆಯೇ? ಅಂಬೇಡ್ಕರ್ ಅವರು ಹಾಕಿಕೊಟ್ಟ ಹೋರಾಟದ ಹೆಜ್ಜೆಗಳನ್ನು ನಾವು ಸ್ವಾರ್ಥರಹಿತವಾಗಿ, ಶೋಷಿತರ ದನಿಯಾಗಿ ಮುಂದುವರಿಸಿಕೊಂಡು ಬಂದಿದ್ದೇವೆಯೇ? ಅಂಬೇಡ್ಕರ್ ಅವರ ತತ್ವಗಳನ್ನು ಪಾಲಿಸಿದ್ದೇವೆಯೇ? ಎಂಬುದರ ಕುರಿತು ಚಿಂತನೆ ಮತ್ತು ಆತ್ಮಾವಲೋಕನ ಮಾಡಿಕೊಳ್ಳಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ.