ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ 55 ವರ್ಷ

ಜನಸಾಮಾನ್ಯರ ಉಳಿತಾಯಕ್ಕೆ ಬ್ಯಾಂಕುಗಳು ನೀಡುವ ಭದ್ರತೆ, ಸಮಾಜದ ಅಂಚಿನಲ್ಲಿರುವ ಅರ್ಹ ನಾಗರಿಕರಿಗೆ ತಮ್ಮ ನೆಲೆಯನ್ನು ಕಂಡುಕೊಳ್ಳಲು ಅವು ನೀಡುವ ಹಣಕಾಸಿನ ಸೌಲಭ್ಯ, ಆರ್ಥಿಕತೆಯ ಬೆನ್ನೆಲುಬಾದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮಗಾತ್ರದ ಕೈಗಾರಿಕೆ/ಉದ್ದಿಮೆಗಳಿಗೆ ಅವುಗಳ ಸಹಾಯ ಮತ್ತು ಸಣ್ಣ ಸಣ್ಣ ಕೃಷಿಕರಿಗೆ ನೀಡುವ ಪ್ರೋತ್ಸಾಹ ಇವೇ ಮುಂತಾದ ಚಟುವಟಿಕೆಗಳು ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಸದೃಢಗೊಳಿಸುತ್ತವೆ. ಬ್ಯಾಂಕುಗಳು ಖಾಸಗಿ ಒಡೆತನಕ್ಕೆ ಸೇರಿದಾಗ ಅವುಗಳ ಮತ್ತು ಸಮಾಜದ ಬಾಂಧವ್ಯ ವ್ಯಾಪಾರಿ ಮನೋಭಾವದಿಂದಲೇ ನಡೆಯುತ್ತದೆ. ಆಗ ಯಾವ ಕಾರಣಕ್ಕಾದರೂ ವಿಶ್ವಾಸಕ್ಕೆ ಧಕ್ಕೆ ಬಂದರೆ ಬ್ಯಾಂಕುಗಳ ಮೇಲೆ ಒತ್ತಡ ಬಂದು ವ್ಯವಸ್ಥೆಯು ಕುಸಿಯುವ ಸಾಧ್ಯತೆ ಇದೆ.

Update: 2024-07-19 05:25 GMT
Editor : Thouheed | Byline : ಟಿ.ಆರ್. ಭಟ್

ಜುಲೈ 19ಕ್ಕೆ ಖಾಸಗಿ ರಂಗದ ಪ್ರಮುಖ 14 ಬ್ಯಾಂಕುಗಳನ್ನು ರಾಷ್ಟ್ರೀಕರಿಸಿ 55 ವರ್ಷಗಳಾದವು. ಜೂನ್ 2024ರ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಮೋದಿ ಸರಕಾರವು ತನ್ನ ಹೊಸ ಆಡಳಿತಾವಧಿಯಲ್ಲಿ ಸರಕಾರಿ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಯೋಚನೆಯನ್ನು ಜಾರಿಗೊಳಿಸಬಹುದೆಂಬ ಸುದ್ದಿ ಇದೆ. 2014-24ರ ಅವಧಿಯಲ್ಲಿ ಮೋದಿ ಸರಕಾರವು ಅನೇಕ ಪ್ರಮುಖ ಸರಕಾರಿ ಉದ್ದಿಮೆಗಳನ್ನು ಖಾಸಗಿ ರಂಗಗಳಿಗೆ ಮಾರಿದ ವಿಷಯವೂ ಈ ಸುದ್ದಿಗೆ ಪ್ರಾಬಲ್ಯ ನೀಡುತ್ತದೆ.. ಕೆಲವು ಆರ್ಥಿಕ ತಜ್ಞರೂ, ಉದ್ಯೋಗಪತಿಗಳ ಸಂಘಗಳೂ ಅದೇ ರಾಗವನ್ನು ನುಡಿಸಲು ಆರಂಭಿಸಿವೆ. ಜುಲೈ 23ಕ್ಕೆ ಹೊರಬರಲಿರುವ ಮುಂಗಡಪತ್ರದಲ್ಲಿ ಸರಕಾರಿ ಬ್ಯಾಂಕುಗಳ ಭವಿಷ್ಯವೂ ಹೊರಹೊಮ್ಮಬಹುದು ಅಥವಾ ಜನಾಭಿಪ್ರಾಯವನ್ನು ಕಾದು ನೋಡಿ ಮುಂದಿನ ದಿನಗಳಲ್ಲಿ ನಿರ್ಧಾರವನ್ನು ಕೈಗೊಳ್ಳಬಹುದು. ಈ ಹಿನ್ನೆಲೆಯಲ್ಲಿ ಯಾಕೆ ಬ್ಯಾಂಕುಗಳು ಸರಕಾರದ ಅಧೀನದಲ್ಲಿಯೇ ಇರಬೇಕೆಂಬುದನ್ನು ಮತ್ತೆ ಚರ್ಚಿಸುವ ಅಗತ್ಯ ನಮ್ಮ ಮುಂದಿದೆ.

ಈ ಪ್ರಶ್ನೆಯ ಔಚಿತ್ಯವನ್ನು ಅರ್ಥಮಾಡಿಕೊಳ್ಳಲು ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಸಂಬಂಧಿಸಿದ ಮೂರು ವಿಷಯಗಳನ್ನು ಪ್ರಸ್ತಾಪಿಸುವುದು ಸಕಾಲಿಕವಾಗುತ್ತದೆ.

1. ಮೂಲ ರಾಷ್ಟ್ರೀಕರಣದ ಉದ್ದೇಶ ಮತ್ತು ಗುರಿಗಳು ಏನಾಗಿದ್ದವು?

2. ಈ ಗುರಿಗಳನ್ನು ಸಾಧಿಸುವಲ್ಲಿ ಬ್ಯಾಂಕುಗಳು ಸಮರ್ಥವಾದವೆ? ಮತ್ತು

3. ಇಂದಿನ ಪರಿಸ್ಥಿತಿಯಲ್ಲಿ ಅಂದಿನ ಉದ್ದೇಶಗಳು ಎಷ್ಟು ಪ್ರಸ್ತುತ?

ರಾಷ್ಟ್ರೀಕರಣದ ಗುರಿಗಳು:

ಸ್ವಾತಂತ್ರ್ಯೋತ್ತರ ವರ್ಷಗಳಲ್ಲಿ ಅತ್ಯಂತ ಹಿಂದುಳಿದ ದೇಶಗಳಲ್ಲಿ ಒಂದಾದ ಭಾರತದಲ್ಲಿ ದ್ರುತಗತಿಯ ಆರ್ಥಿಕ ಪ್ರಗತಿಯ ಜೊತೆಗೆ ಆರ್ಥಿಕ ಮತ್ತು ಭೌಗೋಳಿಕ ಅಸಮಾನತೆಗಳನ್ನು ಕಡಿಮೆ ಮಾಡುವ ತುರ್ತು ಅಂದಿನ ಸರಕಾರಗಳ ಮೇಲಿತ್ತು. ಪ್ರಜೆಗಳ ಸರ್ವಾಂಗೀಣ ಪ್ರಗತಿಗೆ ರಾಜಕೀಯ ಸ್ವಾತಂತ್ರ್ಯದಷ್ಟೇ ಆರ್ಥಿಕ ಸ್ವಾತಂತ್ರ್ಯವೂ ಅಗತ್ಯವಾಗಿತ್ತು.

1950 ಮತ್ತು 1960ರ ದಶಕಗಳಲ್ಲಿ ದೇಶವನ್ನು ಬಾಧಿಸಿದ ಎರಡು ಯುದ್ಧಗಳು, ಆಹಾರಧಾನ್ಯದ ಕೊರತೆ, ದುಬಾರಿಯ ಆಮದುಗಳು, ಜನಸಂಖ್ಯೆಯ ಸ್ಫೋಟ ಮತ್ತು ಪರಿಹಾರ ಲಭಿಸದ ನಿರುದ್ಯೋಗ-ಇವುಗಳ ಹಿನ್ನೆಲೆಯಲ್ಲಿ ಸುಸ್ಥಿರ ಹಾಗೂ ಸರ್ವರನ್ನು ಒಳಗೊಂಡ ಆರ್ಥಿಕ ಪ್ರಗತಿಯ ದಾರಿಯನ್ನು ಹುಡುಕಬೇಕಿತ್ತು. ಅದಕ್ಕೆ ಸಂಪನ್ಮೂಲಗಳೂ ಬೇಕಿದ್ದವು. ದೇಶದ ಪರಿಮಿತವಾದ ಸಂಪನ್ಮೂಲದ ಮೇಲೆ ಸಾರ್ವಜನಿಕ ಹಿಡಿತದ ಅಗತ್ಯವಿತ್ತು. ಹಣಕಾಸು ಸಂಸ್ಥೆಗಳನ್ನು ಸರಕಾರದ ಸುಪರ್ದಿಗೆ ತಂದರೆ ಪ್ರಗತಿಗೆ ಅಗತ್ಯವಾದ ಹಣಕಾಸನ್ನು ಜೋಡಿಸುವುದು ಸಾಧ್ಯ ಮತ್ತು ಅದರ ವಿನಿಯೋಗವನ್ನೂ ಸಮಷ್ಟಿಯ ಒಳಿತಿಗೆ ಪೂರಕವಾಗಿಸಬಹುದೆಂದು ಅರಿತ ಕೇಂದ್ರ ಸರಕಾರ 1969 ಜುಲೈ 19ರಂದು 14 ದೊಡ್ಡ ಖಾಸಗಿ ಬ್ಯಾಂಕುಗಳನ್ನು ರಾಷ್ಟ್ರೀಕರಿಸಿ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನಾಗಿ ಪರಿವರ್ತಿಸಿತು.

1969ರ ಬ್ಯಾಂಕು ರಾಷ್ಟ್ರೀಕರಣದ ಕಾಯ್ದೆಯ ಮುನ್ನುಡಿ ಈ ನಿರ್ಧಾರದ ಉದ್ದೇಶವನ್ನು ನಿಖರವಾಗಿ ಹೀಗೆ ಹೇಳಿತು: ‘ದೇಶದ ಅರ್ಥವ್ಯವಸ್ಥೆಯ ಮೂಲವನ್ನು ನಿಯಂತ್ರಿಸಿ ಆ ಮೂಲಕ ಆರ್ಥಿಕತೆಯ ಅಭಿವೃದ್ಧಿಗೆ ಅಗತ್ಯವಾದ ಸಂಪನ್ಮೂಲಗಳನ್ನು ದೇಶದ ಧೋರಣೆ ಮತ್ತು ನೀತಿಗಳಿಗೆ ಪೂರಕವಾಗುವ ನಿಟ್ಟಿನಲ್ಲಿ ಉಪಯೋಗಿಸಲು ಅನುವಾಗುವಂತೆ ನಿರ್ದಿಷ್ಟವಾದ ಬ್ಯಾಂಕುಗಳನ್ನು ಸರಕಾರದ ಸ್ವಾಮ್ಯಕ್ಕೆ ಒಳಪಡಿಸುವುದು.’

ರಾಷ್ಟ್ರೀಕರಣಗೊಳಿಸುವ ಮೂಲಕ ಬ್ಯಾಂಕಿಂಗ್ ಕ್ಷೇತ್ರದ ಸುಮಾರು ಶೇ. 80ರಷ್ಟು ಸಂಪನ್ಮೂಲಗಳು ನೇರವಾಗಿ ಸರಕಾರದ ನೀತಿಗಳಿಗೆ ಬಾಧ್ಯವಾಗುವಂತಾಯಿತು. ಮುಂದೆ 1980ರಲ್ಲಿ ಇನ್ನೂ 6 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದಾಗ ಈ ಪ್ರಮಾಣ ಶೇ. 85ಕ್ಕೆ ಏರಿತು.

ಗುರಿಗಳ ಸಾಧನೆ:

ಅಧಿಕೃತ ವರದಿಗಳ ಪ್ರಕಾರವೇ ಮುಂದಿನ ಮೂರು ದಶಕಗಳಲ್ಲಿ ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಭೂತಪೂರ್ವ ಬದಲಾವಣೆಗಳಾದವು. ಬ್ಯಾಂಕು ಶಾಖೆಗಳು ದೇಶದ ಉದ್ದಗಲಕ್ಕೆ ವಿಸ್ತರಿಸಿದವು, ಜನ ಸಾಮಾನ್ಯರಿಗೂ ಸಂಕೋಚವಿಲ್ಲದೆ ಬ್ಯಾಂಕುಗಳ ಒಳಗೆ ಪ್ರವೇಶಿಸಲು ಸಾಧ್ಯವಾಯಿತು. ದೇಶದ ಆರ್ಥಿಕ ಪ್ರಗತಿಗೆ ಅಗತ್ಯವಾದ ಕ್ಷೇತ್ರಗಳಿಗೆ ಸುಲಭದಲ್ಲಿ ಹಣಕಾಸು ಸಿಗುವಂತಾಯಿತು. ಅತ್ಯಂತ ಕಡಿಮೆ ಬಂಡವಾಳ ಹೂಡುವ ಸ್ವಯಂ ಉದ್ಯೋಗಿಗಳಿಗೆ, ಸಣ್ಣ ಕೈಗಾರಿಕೆಗಳಿಗೆ, ಸಣ್ಣ ರೈತರಿಗೆ, ವಿದ್ಯಾರ್ಜನೆಗೆ, ಮನೆಕಟ್ಟಲು, ಸರಕಾರಿ ಬ್ಯಾಂಕುಗಳು ಹಣಸಹಾಯವನ್ನು ಸುಲಭವಾಗಿ ನೀಡಲು ಮುಂದೆ ಬಂದವು.

ಸರಕಾರದ ಸ್ವಾಮ್ಯದ ಸಂಸ್ಥೆಗಳೆಂದ ಮೇಲೆ ಬ್ಯಾಂಕುಗಳ ಮೇಲೆ ಜನರಿಗೂ ವಿಶ್ವಾಸ ಹುಟ್ಟಿ ಬ್ಯಾಂಕುಗಳು ಯಾವುದೇ ಕಾಲಕ್ಕೂ ಸುಭದ್ರವೆಂಬ ಭಾವನೆಯೂ ಬೆಳೆಯಿತು.

ಇವುಗಳ ಜೊತೆಗೆ, ಎಸ್‌ಬಿಐ ಮತ್ತು ಅದರ 7 ಸಹವರ್ತಿ ಬ್ಯಾಂಕುಗಳು ಮತ್ತು 20 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ಆಗಿ ಹೊಸ ಉದ್ಯೋಗಗಳು ಸೃಷ್ಟಿಯಾದವು. ಸರಕಾರವೂ ಬ್ಯಾಂಕುಗಳಲ್ಲಿ ಸಹಭಾಗಿ ವ್ಯವಸ್ಥಾಪನಾ ಪದ್ಧತಿಯನ್ನು (ವರ್ಕರ್ಸ್ ಪಾರ್ಟಿಸಿಪೇಶನ್ ಇನ್ ಮ್ಯಾನೇಜ್‌ಮೆಂಟ್ ಅನ್ನು) ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಬ್ಯಾಂಕುಗಳ ನಿರ್ದೇಶಕ ಮಂಡಳಿಗಳಲ್ಲಿ ನೌಕರರ ಮತ್ತು ಅಧಿಕಾರಿಗಳ ಪ್ರತಿನಿಧಿಗಳನ್ನು ನೇಮಕಾತಿ ಮಾಡಲು ತೊಡಗಿತು. ಉದ್ಯೋಗಿಗಳು ಮತ್ತು ವ್ಯವಸ್ಥಾಪಕ ವರ್ಗದ ನಡುವೆ ಸಂಘರ್ಷದ ಬದಲು ಸಾಮರಸ್ಯವನ್ನು ಬೆಳೆಸಲು ಉತ್ತೇಜಿಸಿತು. ಸರಕಾರಿ ಕಚೇರಿಗಳಲ್ಲಿ ಸರ್ವೇ ಸಾಮಾನ್ಯವಾದ ಮತ್ತು ಉಳಿದ ಸಾರ್ವಜನಿಕ ಉದ್ದಿಮೆಗಳಲ್ಲಿಯೂ ಕಾಣಬರುವಂತಹ ಸಂಸ್ಕೃತಿಗಿಂತ ಭಿನ್ನವಾದ ವೃತ್ತಿ ಸಂಸ್ಕೃತಿ ಸರಕಾರಿ ಬ್ಯಾಂಕುಗಳಲ್ಲಿ ಬೆಳೆಯಿತು.

ಒಟ್ಟಿನಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ ಆಧುನಿಕ ಭಾರತದ ಆರ್ಥಿಕ ಚರಿತ್ರೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು. ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ವೈ.ವಿ. ರೆಡ್ಡಿ 2011ರಲ್ಲಿ ಬ್ಯಾಂಕುಗಳ ಸಾಧನೆಯನ್ನು ‘‘ದೇಶದ ಸುಸ್ಥಿರ ಪ್ರಗತಿಗೆ ಹಣಕಾಸು ರಂಗ ನೀಡಿದ ಕೊಡುಗೆಯು ಇತರ ಎಲ್ಲಾ ಕ್ಷೇತ್ರಗಳಿಗಿಂತಲೂ ಗಮನಾರ್ಹವಾಗಿತ್ತು.’’ ಎಂದು ಬಣ್ಣಿಸಿದ್ದರು.

ಇಂದಿನ ಪರಿಸ್ಥಿತಿ:

ಉಳಿದ ಸರಕಾರಿ ಸಂಸ್ಥೆಗಳಂತೆ ಸರಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಬೇಕೆಂಬ ಬೇಡಿಕೆ ಇಂದು ನಿನ್ನೆಯದಲ್ಲ. 1991 ರಿಂದ ಆರಂಭವಾದ ಹೊಸ ಆರ್ಥಿಕ ನೀತಿಯ ಒಂದು ಪ್ರಮುಖ ಧಾರೆ ಸರಕಾರಿ ಸಂಸ್ಥೆಗಳ ಖಾಸಗೀಕರಣ. ಹಿಂದಿನ ಸರಕಾರಗಳು ದೇಶದ ಅರ್ಥವ್ಯವಸ್ಥೆಯ ಹಿತದೃಷ್ಟಿಯಿಂದ ಬ್ಯಾಂಕುಗಳನ್ನು ಮಾರಲು ಮುಂದಾಗಿರಲಿಲ್ಲ. ಸಂಸ್ಥೆಯ ಬಂಡವಾಳದಲ್ಲಿ ಶೇ. 51ರಷ್ಟನ್ನು ಸರಕಾರ ತನ್ನ ಹಿಡಿತದಲ್ಲಿ ಇರಿಸಿಕೊಂಡಿತು. ಉದಾರೀಕರಣದ ಹಿನ್ನೆಲೆಯಲ್ಲಿ ಹೊಸ ಬ್ಯಾಂಕುಗಳ ಸ್ಥಾಪನೆಗೆ ಅನುವು ಮಾಡಲಾಯಿತು, ಆದರೆ ಸರಕಾರಿ ಬ್ಯಾಂಕುಗಳು ಹಾಗೆಯೇ ಉಳಿದವು. ಸರಕಾರ ಮತ್ತು ಆರ್‌ಬಿಐ ಬ್ಯಾಂಕುಗಳ ಕಾರ್ಯದಕ್ಷತೆಯನ್ನು ಹೆಚ್ಚಿಸುವತ್ತ ಗಮನ ನೀಡಿದವು.

ಈ ಹಿಂದಿನ ಮೋದಿ ಸರಕಾರವು ಮಾಡಿದ ಒಂದು ಪ್ರಮುಖ ಬದಲಾವಣೆ ಅಂದರೆ ವಿಲೀನೀಕರಣದ ಮಾರ್ಗ ಹಿಡಿದು 28 ಸರಕಾರಿ ಸ್ವಾಮ್ಯದ ಬ್ಯಾಂಕುಗಳನ್ನು 12ಕ್ಕೆ ಇಳಿಸಿದುದು. (ವಿಲೀನೀಕರಣದ ಗುಣಾವಗುಣಗಳ ಬಗ್ಗೆ ಇಲ್ಲಿ ವಿಶ್ಲೇಷಣೆ ಅಪ್ರಸ್ತುತ). ಆದರೆ ಈಗ ಬದಲಾದ ಸನ್ನಿವೇಶದಲ್ಲಿ ಕೆಲವು ಸರಕಾರಿ ಬ್ಯಾಂಕುಗಳನ್ನು ಖಾಸಗಿ ಉದ್ಯೋಗಪತಿಗಳಿಗೆ ಹಸ್ತಾಂತರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇದಕ್ಕೆ ಎರಡು ಕಾರಣಗಳನ್ನು ಸರಕಾರವು ಕೊಡಬಹುದು. ಒಂದು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದೆಂದರೆ ತನ್ನ ಹಿಡಿತದಲ್ಲಿರುವ ಬಂಡವಾಳವನ್ನು ಮಾರುಕಟ್ಟೆಯ ಬೆಲೆಗೆ ಮಾರುವುದು. ಮುಖಬೆಲೆಗಿಂತ ಎಷ್ಟೋ ಪಟ್ಟು ಹೆಚ್ಚು ಬೆಲೆಯಿರುವ ಬ್ಯಾಂಕು ಶೇರುಗಳನ್ನು ಮಾರಿದರೆ ಸರಕಾರದ ಉಪಯೋಗಕ್ಕೆ ಅಗತ್ಯವಾದ ಸಂಪನ್ಮೂಲಗಳನ್ನು ಒಮ್ಮೆಲೇ ಸಂಗ್ರಹಿಸಬಹುದು. ಎರಡನೆಯದಾಗಿ, ವಾಣಿಜ್ಯ ವ್ಯವಹಾರದಲ್ಲಿ ಸರಕಾರ ತೊಡಗಿಸಿಕೊಳ್ಳುವುದು ಬಲಪಂಥೀಯ ಪಕ್ಷಗಳ ವಿಚಾರಧಾರೆಗೆ ವಿರುದ್ಧವಾಗಿರುವುದರಿಂದ ಸರಕಾರಿ ಸ್ವಾಮ್ಯದ ವಾಣಿಜ್ಯ ಬ್ಯಾಂಕುಗಳನ್ನು ಖಾಸಗಿಯವರಿಗೆ ಕೊಟ್ಟುಬಿಡಬೇಕೆಂಬ ವಾದ ಹುಟ್ಟಿಕೊಳ್ಳುತ್ತದೆ.

ಬ್ಯಾಂಕುಗಳ ಖಾಸಗೀಕರಣ ಇಂದಿನ ಸನ್ನಿವೇಶದಲ್ಲಿಯೂ ಯಾಕೆ ಅತಾರ್ಕಿಕ ಎಂಬುದನ್ನು ಮೂರು ಮುಖ್ಯ ವಿಷಯಗಳನ್ನು ಅರಿತುಕೊಳ್ಳುವುದರ ಮೂಲಕ ತಿಳಿಯಲು ಸಾಧ್ಯ. ಈ ವಿಷಯಗಳು ಚಿಂತನಾರ್ಹ.

1. ಅಭದ್ರವಾಗಿರುವ ಅರ್ಥವ್ಯವಸ್ಥೆ

2. ಅರ್ಥವ್ಯವಸ್ಥೆಯ ಭದ್ರತೆಯಲ್ಲಿ ಬ್ಯಾಂಕುಗಳ ಪಾತ್ರ

3. ಖಾಸಗಿ ಬ್ಯಾಂಕುಗಳ ಧೋರಣೆಗಳು

ಅಭದ್ರವಾಗಿರುವ ಅರ್ಥವ್ಯವಸ್ಥೆ:

ಭಾರತದ ಅರ್ಥವ್ಯವಸ್ಥೆಯಲ್ಲಿ ಇಂದು ತೀವ್ರವಾದ ಅಸಮತೋಲನವನ್ನು ಕಾಣಬಹುದು; ಆರ್ಥಿಕ ಪ್ರಗತಿಯು ದರದ ದೃಷ್ಟಿಯಿಂದ ನೋಡಿದರೆ ಮತ್ತು ಇತರ ದೇಶಗಳಿಗೆ ಹೋಲಿಸಿದರೆ ಬಹಳ ಆಕರ್ಷಕವಾಗಿ ಕಾಣುತ್ತದೆ. ಆರ್ಥಿಕತೆಯ ಗಾತ್ರವೂ ಹಿಗ್ಗುತ್ತಾ ಇದೆ. ಅದರ ಅಡಿಯಲ್ಲಿ ಮಾತ್ರ ತೀವ್ರವಾದ ಅಭದ್ರತೆಗೆ ಕಾರಣವಾಗಬಲ್ಲ ಸಮಸ್ಯೆಗಳಿವೆ-ಯುವಜನರ ನಿರುದ್ಯೋಗ ಮತ್ತು ವಿಸ್ತೃತವಾಗುತ್ತಿರುವ ಭ್ರಮನಿರಸನ, ಆದಾಯ ಕ್ಷೀಣಿಸುತ್ತಿರುವ ಕೃಷಿಕ್ಷೇತ್ರಕ್ಕೆ ನಗರಪ್ರದೇಶಗಳಿಂದ ಮರುವಲಸೆ, ರೈತರ ಸಂತೃಪ್ತ ಜೀವನಕ್ಕೆ ಆಗುತ್ತಿರುವ ಧಕ್ಕೆ, ಕುಸಿಯುತ್ತಿರುವ ಸಾಮಾಜಿಕ ಭದ್ರತೆ, ಮೂಲಸೌಕರ್ಯಗಳ ಅಭಾವದಿಂದ ಕೃಶವಾಗಿರುವ ಸಾಮುದಾಯಿಕ ಆರೋಗ್ಯ ವ್ಯವಸ್ಥೆ, ಏರುತ್ತಿರುವ ಬೆಲೆಗಳು, ಉಳಿತಾಯದ ಬದಲು ಹೆಚ್ಚುತ್ತಿರುವ ವೈಯಕ್ತಿಕ ಸಾಲದ ಹೊರೆ ಮತ್ತು ಸಂಪತ್ತು ಹಾಗೂ ಬಡತನದ ನಡುವೆ ಇನ್ನಷ್ಟು ಆಳವಾಗುತ್ತಿರುವ ಕಂದಕ-ಇವುಗಳು ಕಳವಳ ಹುಟ್ಟಿಸುವ ಬೆಳವಣಿಗೆಗಳು. ಈ ಸನ್ನಿವೇಶದಲ್ಲಿ ಸಂಪನ್ಮೂಲಗಳ ಆಗರವಾದ ಸರಕಾರಿ ಬ್ಯಾಂಕುಗಳ ಖಾಸಗೀಕರಣವು ಸಮಸ್ಯೆಗಳನ್ನು ಮತ್ತಷ್ಟು ಹದಗೆಡಿಸಬಹುದು.

ಬ್ಯಾಂಕುಗಳು ಮತ್ತು ಆರ್ಥಿಕ ಭದ್ರತೆ:

ದೇಶದ ಅರ್ಥವ್ಯವಸ್ಥೆಯ ಸ್ಥಿರತೆಗೆ ಹಣಕಾಸು ರಂಗದ ಕೊಡುಗೆ ನಿರ್ಣಾಯಕವಾಗುತ್ತದೆ. ಜನಸಾಮಾನ್ಯರ ಉಳಿತಾಯಕ್ಕೆ ಬ್ಯಾಂಕುಗಳು ನೀಡುವ ಭದ್ರತೆ, ಸಮಾಜದ ಅಂಚಿನಲ್ಲಿರುವ ಅರ್ಹ ನಾಗರಿಕರಿಗೆ ತಮ್ಮ ನೆಲೆಯನ್ನು ಕಂಡುಕೊಳ್ಳಲು ಅವು ನೀಡುವ ಹಣಕಾಸಿನ ಸೌಲಭ್ಯ, ಆರ್ಥಿಕತೆಯ ಬೆನ್ನೆಲುಬಾದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮಗಾತ್ರದ ಕೈಗಾರಿಕೆ/ಉದ್ದಿಮೆಗಳಿಗೆ ಅವುಗಳ ಸಹಾಯ ಮತ್ತು ಸಣ್ಣ ಸಣ್ಣ ಕೃಷಿಕರಿಗೆ ನೀಡುವ ಪ್ರೋತ್ಸಾಹ ಇವೇ ಮುಂತಾದ ಚಟುವಟಿಕೆಗಳು ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಸದೃಢಗೊಳಿಸುತ್ತವೆ. ಬ್ಯಾಂಕುಗಳು ಖಾಸಗಿ ಒಡೆತನಕ್ಕೆ ಸೇರಿದಾಗ ಅವುಗಳ ಮತ್ತು ಸಮಾಜದ ಬಾಂಧವ್ಯ ವ್ಯಾಪಾರಿ ಮನೋಭಾವದಿಂದಲೇ ನಡೆಯುತ್ತದೆ. ಆಗ ಯಾವ ಕಾರಣಕ್ಕಾದರೂ ವಿಶ್ವಾಸಕ್ಕೆ ಧಕ್ಕೆ ಬಂದರೆ ಬ್ಯಾಂಕುಗಳ ಮೇಲೆ ಒತ್ತಡ ಬಂದು ವ್ಯವಸ್ಥೆಯು ಕುಸಿಯುವ ಸಾಧ್ಯತೆ ಇದೆ.

ಖಾಸಗಿ ಬ್ಯಾಂಕುಗಳ ಧೋರಣೆಗಳು:

ಸರಕಾರಿ ರಂಗದ ಉದ್ದಿಮೆಗಳ ಧೋರಣೆ ಸಾಮಾನ್ಯವಾಗಿ ಸಮಷ್ಟಿಯ ಒಳಿತಿಗೆ ಪ್ರೇರಕವೂ ಪೂರಕವೂ ಆಗಿರುತ್ತದೆ. ಖಾಸಗಿ ಕ್ಷೇತ್ರದಲ್ಲಿ ವ್ಯವಹಾರದ ಉದ್ದೇಶ ಕಂಪೆನಿಯ ಪ್ರವರ್ತಕರ ಬಳಗದ ಏಳಿಗೆ. ಅದನ್ನು ಸಾಧಿಸಲು ತಮ್ಮ ವ್ಯವಹಾರದ ತಂತ್ರಗಳನ್ನು ಕಂಪೆನಿಗಳು ರೂಪಿಸುತ್ತವೆ-ಅದು ತಪ್ಪೇನಲ್ಲ. ಆದರೆ ಅದೇ ಪ್ರಮುಖ ಗುರಿಯಾದಾಗ ಅವಘಡಗಳ ಸಾಧ್ಯತೆ ಹೆಚ್ಚು. ಕಳೆದ 30-40 ವರ್ಷಗಳಲ್ಲಿ ಅಮೆರಿಕದಲ್ಲಿ, ಯೂರೋಪಿನಲ್ಲಿ, ವಿಭಜಿತ ಸೋವಿಯತ್ ರಶ್ಯ ಮತ್ತು ಅದರಿಂದ ಬೇರ್ಪಟ್ಟ ಕೆಲವು ದೇಶಗಳಲ್ಲಿ, ಆಸ್ಟ್ರೇಲಿಯದಲ್ಲಿ ಹೀಗೆ ಬೇರೆ ಬೇರೆ ದೇಶಗಳಲ್ಲಿ ಬೆಳಕಿಗೆ ಬಂದ ಬ್ಯಾಂಕುಗಳ ಹಗರಣಗಳು ಈ ರೀತಿಯ ಧೋರಣೆಗಳಿಂದಾಗಿ ಘಟಿಸಿವೆ. ಭಾರತದ ಖಾಸಗಿ ಬ್ಯಾಂಕುಗಳೂ ಈ ತರದ ಹಗರಣಗಳಲ್ಲಿ ತೊಡಗಿದ ವರದಿಗಳು ನಮ್ಮ ಮುಂದಿವೆ. ಎಲ್ಲಾ ಸಂದರ್ಭಗಳಲ್ಲಿಯೂ ಗ್ರಾಹಕರ ಹಿತದೃಷ್ಟಿ, ಅರ್ಥವ್ಯವಸ್ಥೆಯ ಸ್ಥಿರತೆ ಮತ್ತು ರಕ್ಷಣೆಯನ್ನು ಗಮನದಲ್ಲಿರಿಸಿ ಸರಕಾರಗಳು ಮತ್ತು ನಿಯಂತ್ರಕರು ಜನಸಾಮಾನ್ಯರ ತೆರಿಗೆಯ ಹಣವನ್ನು ಉಪಯೋಗಿಸಿ ಮುಳುಗುತ್ತಿರುವ ಸಂಸ್ಥೆಗಳನ್ನು ರಕ್ಷಿಸಬೇಕಾಗಿ ಬಂದಿದೆ. (ಈ ಬಗ್ಗೆ ‘ವಾರ್ತಾಭಾರತಿ’ಯಲ್ಲಿ ಮಾರ್ಚ್ 27, 2023ರಂದು ಪ್ರಕಟವಾದ ‘ಅಭದ್ರವಾಗುತ್ತಿರುವ ವಿದೇಶಿ ಬ್ಯಾಂಕುಗಳು’ ಲೇಖನವು ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ.)

ಬ್ಯಾಂಕುಗಳ ರಾಷ್ಟ್ರೀಕರಣದ ದಿನವನ್ನು ಜ್ಞಾಪಿಸಿಕೊಳ್ಳುವ ಸಂದರ್ಭದಲ್ಲಿ ಮೇಲೆ ಉಲ್ಲೇಖಿಸಿದ ಅನುಭವ, ಪ್ರಸಕ್ತ ಆರ್ಥಿಕ ಅಭದ್ರತೆ, ಸರ್ವರನ್ನೊಳಗೊಂಡ ಪ್ರಗತಿಯ ತುರ್ತುಗಳ ಹಿನ್ನೆಲೆಯನ್ನು ಗಮನದಲ್ಲಿರಿಸಿ ಉದ್ದೇಶಿತ ಖಾಸಗೀಕರಣದ ವಿರುದ್ಧ ಜನಜಾಗೃತಿ ಅತೀ ಅಗತ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಟಿ.ಆರ್. ಭಟ್

contributor

Similar News